2-3 ಪಂದ್ಯಗಳಿಂದ ಯಾರನ್ನೂ ಅಳೆಯಬೇಡಿ: ಅಯ್ಯರ್ ಬೆಂಬಲಕ್ಕೆ ನಿಂತ ಎಬಿಡಿ

IND vs ENG: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಮ್ಯಾಚ್ ಮಳೆಯಿಂದಾಗಿ ರದ್ದಾಗಿತ್ತು. ಇದಾದ ಬಳಿಕ ನಡೆದ 2ನೇ ಮತ್ತು 3ನೇ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋಲನುಭವಿಸಿದೆ. ಇದೀಗ ಉಭಯ ತಂಡಗಳು 4ನೇ ಪಂದ್ಯವಾಡಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಸೋತರೆ ಭಾರತ ತಂಡ ಪಾಲಿಗೆ ಮತ್ತೊಂದು ಸರಣಿ ಕೈ ತಪ್ಪಲಿದೆ.

2-3 ಪಂದ್ಯಗಳಿಂದ ಯಾರನ್ನೂ ಅಳೆಯಬೇಡಿ: ಅಯ್ಯರ್ ಬೆಂಬಲಕ್ಕೆ ನಿಂತ ಎಬಿಡಿ
Shreyas Iyer
Image Credit source: x.com

Updated on: Jul 09, 2026 | 1:50 PM

ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ನಾಯಕನಾದ ಬಳಿಕ ಭಾರತ ತಂಡವು ಒಂದೇ ಒಂದು ಪಂದ್ಯ ಗೆದ್ದಿಲ್ಲ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಕಪ್ತಾನನಾಗಿ ಪಾದಾರ್ಪಣೆ ಮಾಡಿದ್ದ ಅಯ್ಯರ್ ಮೊದಲ ಸರಣಿಯಲ್ಲೇ 2-0 ಅಂತರದಿಂದ ಸೋಲಿನ ರುಚಿ ನೋಡಿದ್ದರು. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧ ಆಡಿದ ಮೂರು ಮ್ಯಾಚ್​ಗಳಲ್ಲಿ ಮೊದಲ ಪಂದ್ಯ ಮಳೆಯಿಂದ ರದ್ದಾದರೆ, ಉಳಿದೆರಡು ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ. ಈ ಸೋಲುಗಳ ಬೆನ್ನಲ್ಲೇ ಅಯ್ಯರ್ ಅವರ ನಾಯಕತ್ವದ ವಿರುದ್ಧ ಪ್ರಶ್ನೆಗಳೆದ್ದಿವೆ. ಈ ಟೀಕೆ-ಟಿಪ್ಪಣಿಗಳ ನಡುವೆ ಸೌತ್ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಶ್ರೇಯಸ್ ಅಯ್ಯರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಎಬಿಡಿ ಬೆಂಬಲ:

ಐಪಿಎಲ್ ಟೂರ್ನಿಗಳಲ್ಲಿ ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಶೈಲಿಯನ್ನು ಎಬಿ ಡಿವಿಲಿಯರ್ಸ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಹೊಂದಿರುವ ಅಯ್ಯರ್, ಮೈದಾನದಲ್ಲಿ ತೋರುವ ಶಾಂತ ಮತ್ತು ಸಂಯಮದ ವರ್ತನೆ ತಂಡಕ್ಕೆ ದೊಡ್ಡ ಬಲ ಎಂದು ಡಿವಿಲಿಯರ್ಸ್ ನೆನಪಿಸಿದ್ದಾರೆ.

ಐಪಿಎಲ್‌ನಲ್ಲಿ ಕಠಿಣ ಸಂದರ್ಭಗಳಲ್ಲೂ ತಂಡವನ್ನು ಮುನ್ನಡೆಸಿದ ಅವರ ಈ ಗುಣವೇ ಅವರನ್ನು ಅತ್ಯುತ್ತಮ ನಾಯಕನನ್ನಾಗಿ ಮಾಡುತ್ತದೆ. ಹೀಗಾಗಿ ಆರಂಭದಲ್ಲೇ ಅವರ ನಾಯಕತ್ವವನ್ನು ದೂರುವುದರಲ್ಲಿ ಅರ್ಥವಿಲ್ಲ ಎಂದು ಎಂಬುದು ಮಿಸ್ಟರ್ 360 ಅಭಿಪ್ರಾಯಪಟ್ಟಿದ್ದಾರೆ.

ಕಾಲಾವಕಾಶ ನೀಡಿ:

ಶ್ರೇಯಸ್ ಅಯ್ಯರ್ ಅವರಿಗೆ ನಾಯಕನಾಗಿ ತಮ್ಮನ್ನು ತಾವು ಸಾಬೀತುಪಡಿಸಲು ದೀರ್ಘಾವಧಿಯ ಅವಕಾಶವನ್ನು ನೀಡಬೇಕು. ಕೇವಲ 2 ಅಥವಾ 3 ಪಂದ್ಯಗಳ ಫಲಿತಾಂಶವನ್ನು ಆಧರಿಸಿ ಒಬ್ಬ ನಾಯಕನ ಸಾಮರ್ಥ್ಯವನ್ನು ನಿರ್ಣಯಿಸುವುದು ಸಂಪೂರ್ಣವಾಗಿ ತಪ್ಪು ಮತ್ತು ಅನ್ಯಾಯ ಎಂದು ಎಬಿಡಿ ತಿಳಿಸಿದ್ದಾರೆ.

ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಯಶಸ್ವಿ ನಾಯಕತ್ವದ ಅವಧಿಯ ನಂತರ, ಭಾರತದ ಟಿ20 ತಂಡದ ಚುಕ್ಕಾಣಿ ಹಿಡಿದಿರುವ ಅಯ್ಯರ್ ಸದ್ಯ ತೀವ್ರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟ್ರೆಂಟ್ ಬ್ರಿಡ್ಜ್ ಪಂದ್ಯದಲ್ಲಿ ದಾಖಲಾದ ಭಾರಿ ಸೋಲಿನ ನಂತರ ತಂಡದ ಮೇಲೆ ಒತ್ತಡ ಹೆಚ್ಚಾಗಿದೆ.

ಈ ಸೋಲಿನ ಹೊರತಾಗಿಯೂ ಶ್ರೇಯಸ್ ಅಯ್ಯರ್ ಉತ್ತಮ ನಾಯಕ. 2-3 ಪಂದ್ಯಗಳ ಫಲಿತಾಂಶಗಳಿಂದ ಯಾರನ್ನೂ ಅಳೆಯಬೇಡಿ. ಒಂದಷ್ಟು ಕಾಲಾವಕಾಶ ನೀಡಿ, ಶ್ರೇಯಸ್ ಅಯ್ಯರ್ ಅವರ ನಾಯಕತ್ವ ಹೇಗಿರಲಿದೆ ಎಂಬುದು ಗೊತ್ತಾಗಲಿದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಅಯ್ಯರ್ ಮುಂದಿರುವ ಸವಾಲು:

ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಯಶಸ್ವಿಯಾಗಿ ಮುನ್ನಡೆಸಿದ್ದ ವಿಶ್ವ ಚಾಂಪಿಯನ್ ತಂಡವನ್ನು ಮುಂದಿನ ಭವಿಷ್ಯಕ್ಕಾಗಿ ಸಜ್ಜುಗೊಳಿಸುವ ಜವಾಬ್ದಾರಿ ಈಗ ಶ್ರೇಯಸ್ ಅಯ್ಯರ್ ಮೇಲಿದೆ. ಆರಂಭಿಕ ಪಂದ್ಯಗಳ ಸೋಲಿನಿಂದಾಗಿ ಸದ್ಯ ತೀವ್ರ ಒತ್ತಡ ಸೃಷ್ಟಿಯಾಗಿದ್ದರೂ, ಸುನಿಲ್ ಗವಾಸ್ಕರ್ ಅವರಂತಹ ಭಾರತದ ದಿಗ್ಗಜರು ಕೂಡ “ಹೊಸ ನಾಯಕನಿಗೆ ಹೊಂದಿಕೊಳ್ಳಲು ಸಮಯದ ಅಗತ್ಯವಿದೆ” ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 59 ಫೌಲ್​​ಗಳು… ಅರ್ಜೆಂಟೀನಾ ಬಂಡವಾಳ ಬಯಲು!

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮತ್ತು ಮುಂಬರುವ ಟಿ20 ವಿಶ್ವಕಪ್‌ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ಶ್ರೇಯಸ್ ಅಯ್ಯರ್ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಿದ್ದು,  ಹೀಗಾಗಿ ತರಾತುರಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳದೆ, ನಾಯಕನಿಗೆ ದೀರ್ಘಾವಧಿಯ ಅವಕಾಶ ನೀಡುವುದು ಭಾರತೀಯ ಕ್ರಿಕೆಟ್‌ನ ದೃಷ್ಟಿಯಿಂದ ಒಳಿತು ಎನ್ನುವುದು ಕ್ರಿಕೆಟ್ ಪಂಡಿತರ ಒಮ್ಮತದ ಅನಿಸಿಕೆಯಾಗಿದೆ.

 

 

Follow Us