ಟಿ20 ಇತಿಹಾಸದಲ್ಲೇ ಹೀನಾಯವಾಗಿ ಸೋತ ಟೀಮ್ ಇಂಡಿಯಾ
England vs India, 3rd T20I: ಭಾರತದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 201 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 11.4 ಓವರ್‌ಗಳಲ್ಲಿ ಕೇವಲ 76 ರನ್ಗಳಿಸಿ ಆಲೌಟ್ ಆಗಿದೆ.

ಸೋಲು… ಹೀನಾಯ ಸೋಲು… ಟೀಮ್ ಇಂಡಿಯಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು ಕಂಡಿದೆ. ಅದು ಸಹ ಬರೋಬ್ಬರಿ 125 ರನ್‌ಗಳ ಅಂತರದಿಂದ. ಜುಲೈ 7, 2026 ರಂದು ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಬರೋಬ್ಬರಿ 125 ರನ್‌ಗಳ ಭಾರಿ ಅಂತರದ ಹೀನಾಯ ಸೋಲು ಅನುಭವಿಸಿದೆ. ರನ್‌ಗಳ ಲೆಕ್ಕಾಚಾರದಲ್ಲಿ ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಭಾರತ ಅನುಭವಿಸಿದ ಅತಿ ದೊಡ್ಡ ಸೋಲಾಗಿದೆ.
ಇಂಗ್ಲೆಂಡ್ ಬ್ಯಾಟರ್‌ಗಳ ಅಬ್ಬರ:
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿತು. ಈ ಮೂಲಕ ಆತಿಥೇಯ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಕೇವಲ 76 ರನ್‌ಗಳಿಗೆ ಆಲೌಟ್:
202 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಇಂಗ್ಲೆಂಡ್ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಭಾರತೀಯ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನಿಲ್ಲುವ ಧೈರ್ಯವನ್ನೇ ತೋರಲಿಲ್ಲ. ಹಿರಿಯ ಆಟಗಾರರಿಂದ ಹಿಡಿದು ಯುವ ಆಟಗಾರರವರೆಗೆ ಎಲ್ಲರೂ ಪೆವಿಲಿಯನ್ ಪೆರೇಡ್ ನಡೆಸಿದರು.
ಅಂತಿಮವಾಗಿ ಭಾರತ ತಂಡ ಕೇವಲ 76 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರೀ ಮುಖಭಂಗ ಅನುಭವಿಸಿತು. ಇದು ಟಿ20 ಕ್ರಿಕೆಟ್‌ನಲ್ಲಿ ಭಾರತ ದಾಖಲಿಸಿದ ಎರಡನೇ ಅತ್ಯಂತ ಕನಿಷ್ಠ ಮೊತ್ತವಾಗಿದೆ.
ಟಿ20 ಇತಿಹಾಸದಲ್ಲಿ ಭಾರತದ ಅತಿ ದೊಡ್ಡ ಸೋಲುಗಳು (ರನ್‌ಗಳ ಆಧಾರದಲ್ಲಿ):
-
- vs ಇಂಗ್ಲೆಂಡ್ (2026): 125 ರನ್‌ಗಳ ಸೋಲು (ನಾಟಿಂಗ್‌ಹ್ಯಾಮ್)
- vs ನ್ಯೂಝಿಲೆಂಡ್ (2019): 80 ರನ್‌ಗಳ ಸೋಲು (ವೆಲ್ಲಿಂಗ್ಟನ್)
- vs ಸೌತ್ ಆಫ್ರಿಕಾ (2026): 76 ರನ್‌ಗಳ ಸೋಲು (ಅಹಮದಾಬಾದ್)
ಗಂಭೀರ್-ಅಯ್ಯರ್ ಜೋಡಿಗೆ ಭಾರಿ ಹಿನ್ನಡೆ:
ಶ್ರೇಯಸ್ ಅಯ್ಯರ್ ನಾಯಕತ್ವ ಹಾಗೂ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಆಡುತ್ತಿರುವ ಭಾರತ ತಂಡಕ್ಕೆ ಈ ಸೋಲು ದೊಡ್ಡ ಆಘಾತ ನೀಡಿದೆ. ಈ ಮುಖಭಂಗದೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಅಂತರದ ಹಿನ್ನಡೆ ಅನುಭವಿಸಿದೆ. ಇನ್ನು ಈ ಸರಣಿ ಸೋಲನ್ನು ತಪ್ಪಿಸಿಕೊಳ್ಳಬೇಕಾದರೆ ಟೀಮ್ ಇಂಡಿಯಾ ಮುಂದಿನ ಪಂದ್ಯಗಳಲ್ಲಿ ಗೆಲ್ಲುವುದು ಅನಿವಾರ್ಯ.
ಇತ್ತ ಈಗಾಗಲೇ ಎರಡು ಮ್ಯಾಚ್ ಗೆದ್ದಿರುವ ಇಂಗ್ಲೆಂಡ್ ತಂಡವು ಮುಂದಿನ ಪಂದ್ಯದ ಮೂಲಕ ಸರಣಿಯನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದೆ. ಹೀಗಾಗಿ ಜುಲೈ 9 ರಂದು ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು.
ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜಾಕ್ಸ್, ಲಿಯಾಮ್ ಡಾಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಜೋಶ್ ಟಂಗ್.
ಇದನ್ನೂ ಓದಿ: ಕ್ರಿಸ್ಟಿಯಾನೊ ಕಡೆಯಿಂದ ಈಡೇರಲಿದೆಯಾ ರೊನಾಲ್ಡೊ ವಿಶ್ವಕಪ್ ಕನಸು!
ಭಾರತ ಪ್ಲೇಯಿಂಗ್ 11: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ವರುಣ್ ಚಕ್ರವರ್ತಿ.




