ಚೇತರಿಸಿಕೊಳ್ಳುತ್ತಿರುವೆ… ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ಶ್ರೇಯಸ್ ಅಯ್ಯರ್

Shreyas Iyer Health Update: ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಅವರನ್ನು ಸಿಡ್ನಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ವೈದ್ಯರ ಮೇಲ್ವಿಚಾರಣೆಯಲ್ಲಿರುವ ಅಯ್ಯರ್ ಅವರು ತಮ್ಮ ಆರೋಗ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಚೇತರಿಸಿಕೊಳ್ಳುತ್ತಿರುವೆ... ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ಶ್ರೇಯಸ್ ಅಯ್ಯರ್
Shreyas Iyer

Updated on: Oct 30, 2025 | 12:23 PM

ಸಿಡ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ತನ್ನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿರುವ ಅಯ್ಯರ್, ಇದೀಗ ನಾನು ಚೇತರಿಕೆಯ ಹಂತದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ಶ್ರೇಯಸ್ ಅಯ್ಯರ್, ನಾನು ಪ್ರಸ್ತುತ ಚೇತರಿಕೆಯ ಪ್ರಕ್ರಿಯೆಯಲ್ಲಿದ್ದೇನೆ ಮತ್ತು ದಿನ ಕಳೆದಂತೆ ಸುಧಾರಿಸುತ್ತಿದ್ದೇನೆ. ನಿಮ್ಮಿಂದ ದೊರೆತ ಎಲ್ಲಾ ರೀತಿಯ ಹಾರೈಕೆ ಮತ್ತು ಬೆಂಬಲಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇವೆಲ್ಲವೂ ನನ್ನ ಪಾಲಿಗೆ ಬಹಳ ಅರ್ಥಪೂರ್ಣ ವಿಷಯ. ನನ್ನನ್ನು ನಿಮ್ಮ ಆಲೋಚನೆಗಳಲ್ಲಿ ಇರಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಶ್ರೇಯಸ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ಇದರೊಂದಿಗೆ ಶ್ರೇಯಸ್ ಅಯ್ಯರ್ ಅವರ ಆರೋಗ್ಯದ ಬಗ್ಗೆ ಮೂಡಿದ್ದ ಆತಂಕಗಳು ದೂರವಾಗಿದೆ. ಅಲ್ಲದೆ ಚೇತರಿಕೆಯು ಪ್ರಗತಿಯಲ್ಲಿರುವ ಕಾರಣ ಅವರು ಇನ್ನೊಂದು ವಾರದಲ್ಲಿ ಡಿಸ್ಚಾರ್ಚ್ ಆಗಿ ಭಾರತಕ್ಕೆ ಮರಳಬಹುದು. ಅಲ್ಲದೆ ಮುಂಬೈನಲ್ಲಿ ಚಿಕಿತ್ಸೆ ಮುಂದುವರೆಸುವ ಸಾಧ್ಯತೆಯಿದೆ.

ಶ್ರೇಯಸ್ ಅಯ್ಯರ್​ ಗಾಯಗೊಂಡಿದ್ದೇಗೆ?

ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಹರ್ಷಿತ್ ರಾಣಾ ಅವರ ಎಸೆತದಲ್ಲಿ ಅಲೆಕ್ಸ್​ ಕ್ಯಾರಿ ಭರ್ಜರಿ ಹೊಡೆತ ಬಾರಿಸಿದ್ದರು. ಈ ವೇಳೆ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ನಿಂತಿದ್ದ ಅಯ್ಯರ್ ವೇಗವಾಗಿ ಓಡಿ ಹೋಗಿ ಡೈವಿಂಗ್ ಕ್ಯಾಚ್ ಹಿಡಿದಿದ್ದರು.

ಈ ಡೈವಿಂಗ್ ವೇಳೆ ಅವರ ಎಡ ಪಕ್ಕೆಲುಬುಗಳಿಗೆ ಗಂಭೀರ ಪೆಟ್ಟಾಗಿದೆ. ಇದರಿಂದ ಅವರ ಪೆಕ್ಕೆಲುಬಿನ ಮೇಲ್ಭಾಗದ ಅಂಗದಲ್ಲಿ (ಗುಲ್ಮ) ಆಂತರಿಕ ರಕ್ತಸ್ರಾವವಾಗಿತ್ತು. ಇದರಿಂದಾಗಿ ಅವರು ಅಸ್ವಸ್ಥರಾಗಿದ್ದರು. ಸ್ಕ್ಯಾನಿಂಗ್ ರಿಪೋರ್ಟ್​ನಲ್ಲಿ ಶ್ರೇಯಸ್ ಅಯ್ಯರ್ ಅವರ ಗುಲ್ಮದ ಭಾಗವು ಛಿದ್ರವಾಗಿರುವುದು ಕಂಡು ಬಂದಿದೆ. ಹೀಗಾಗಿ ಅವರನ್ನು ಇಂಟರ್ವೆನ್ಷನಲ್ ಟ್ರಾನ್ಸ್-ಕ್ಯಾತಿಟರ್ ಎಂಬೋಲೈಸೇಶನ್‌ ಚಿಕಿತ್ಸೆಗೆ ಒಳಪಡಿಸಲಾಗಿತ್ತು.

ಇದೀಗ ಚೇತರಿಸಿಕೊಂಡಿರುವ ಅವರನ್ನು ಐಸಿಯುನಿಂದ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ಹೀಗಾಗಿ ಇನ್ನೊಂದು ವಾರದಲ್ಲಿ ಶ್ರೇಯಸ್ ಅಯ್ಯರ್ ಭಾರತಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅಭ್ಯಾಸದ ವೇಳೆ ಚೆಂಡು ಬಡಿದು ಆಸ್ಟ್ರೇಲಿಯಾ ಕ್ರಿಕೆಟಿಗ ಸಾವು..!

ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಅಲಭ್ಯ:

ಸದ್ಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುವ ಶ್ರೇಯಸ್ ಅಯ್ಯರ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಒಂದೆರಡು ತಿಂಗಳುಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ನವೆಂಬರ್​ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ಜನವರಿಯೊಳಗೆ ಸಂಪೂರ್ಣ ಫಿಟ್​ನೆಸ್ ಸಾಧಿಸಿದರೆ ಮಾತ್ರ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.