ಅಭ್ಯಾಸದ ವೇಳೆ ಚೆಂಡು ಬಡಿದು ಆಸ್ಟ್ರೇಲಿಯಾ ಕ್ರಿಕೆಟಿಗ ಸಾವು..!
2014 ರಲ್ಲಿ ಆಸ್ಟ್ರೇಲಿಯಾ ಆಟಗಾರ ಫಿಲ್ ಹ್ಯೂಸ್ ಚೆಂಡು ಬಡಿದು ಸಾವನ್ನಪ್ಪಿದ್ದರು. ಶೀಲ್ಡ್ ಫೀಲ್ಡ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಹ್ಯೂಸ್, ಶಾನ್ ಅಬಾಟ್ ಎಸೆದ ಚೆಂಡನ್ನು ಗುರುತಿಸುವಲ್ಲಿ ವಿಫಲರಾಗಿದ್ದರು. ಪರಿಣಾಮ ಚೆಂಡು ಅವರ ತಲೆಯ ಹಿಂಭಾಗಕ್ಕೆ ತಾಗಿತ್ತು. ಇದರಿಂದ ಅವರು ಕೋಮಾಕ್ಕೆ ಜಾರಿ ಅಸುನೀಗಿದ್ದರು. ಇದೀಗ ಈ ಘಟನೆಯನ್ನು ನೆಪಿಸುವಂತಹ ಮತ್ತೊಂದು ದುರ್ಘಟನೆ ನಡೆದಿದೆ.

ಆಸ್ಟ್ರೇಲಿಯಾ ಆಟಗಾರ ಫಿಲ್ ಹ್ಯೂಸ್ (Phil Hughes) ಸಾವಿನ ಸುದ್ದಿಯನ್ನು ಮತ್ತೆ ನೆನಪಿಸುವಂತಹ ಮತ್ತೊಂದು ದಾರುಣ ಘಟನೆ ಕಾಂಗರೂನಾಡಿನಲ್ಲಿ ಸಂಭವಿಸಿದೆ. ಆಸ್ಟ್ರೇಲಿಯಾದ ಯುವ ಆಟಗಾರ ಬೆನ್ ಆಸ್ಟಿನ್ (Ben Austin) ಅಭ್ಯಾಸದ ವೇಳೆ ಚೆಂಡು ಬಡಿದು ಸಾವನ್ನಪ್ಪಿದ್ದಾರೆ. ಮೆಲ್ಬೋರ್ನ್‌ನ ಕ್ರಿಕೆಟ್ ಕ್ಲಬ್ನಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ಚೆಂಡು ತಗುಲಿ ಆಸ್ಟಿನ್ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ, ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.
17 ವರ್ಷದ ಬೆನ್ ಆಸ್ಟಿನ್ ಮೆಲ್ಬೋರ್ನ್‌ನ ಈಸ್ಟಸ್ನಲ್ಲಿರುವ ಫರ್ನ್‌ಟ್ರೀ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿಯುತ್ತಿದ್ದರು. ಅದರಂತೆ ಅಕ್ಟೋಬರ್ 28 ರಂದು ಮುಂದಿನ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ್ದರು. ಬೌಲಿಂಗ್ ಯಂತ್ರದ ಮೂಲಕ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ಬೆನ್ ಆಸ್ಟಿನ್ ಹೆಲ್ಮೆಟ್ ಕೂಡ ಧರಿಸಿದ್ದರು.
ಆದರೆ ದುರಾದೃಷ್ಟ ವೇಗವಾಗಿ ಬಂದ ಚೆಂಡನ್ನು ಗುರುತಿಸುವಲ್ಲಿ ಬೆನ್ ಆಸ್ಟಿನ್ ವಿಫಲರಾಗಿದ್ದಾರೆ. ಪರಿಣಾಮ ಬಾಲ್ ಅವರ ಕುತ್ತಿಗೆ ಭಾಗಕ್ಕೆ ಜೋರಾಗಿ ಬಡಿದಿದೆ. ಇದರಿಂದ ಕುಸಿದು ಬಿದ್ದ ಆಸ್ಟಿನ್ ಅವರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಕಳೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಬೆನ್ ಆಸ್ಟಿನ್ ಅಕ್ಟೋಬರ್ 30 ರಂದು ನಿಧನರಾಗಿದ್ದಾರೆ ಎಂದು ಫರ್ನ್‌ಟ್ರೀ ಕ್ರಿಕೆಟ್ ಕ್ಲಬ್ ತಿಳಿಸಿದೆ.
ಫಿಲ್ ಹ್ಯೂಸ್ ಕಹಿ ಘಟನೆ:
ನವೆಂಬರ್ 25, 2014 ಕ್ರಿಕೆಟ್ ಅಂಗಳದ ಕರಾಳ ದಿನ. ಈ ದಿನದಂದು ಆಸ್ಟ್ರೇಲಿಯಾದಲ್ಲಿ ನಡೆದ ದೇಶೀಯ ಟೂರ್ನಿಯ ಪಂದ್ಯದ ವೇಳೆ ಶಾನ್ ಅಬಾಟ್ ಎಸೆದ ಚೆಂಡು ಆಸ್ಟ್ರೇಲಿಯಾ ಫಿಲ್ ಹ್ಯೂಸ್ ಅವರ ತಲೆಯ ಹಿಂಭಾಗಕ್ಕೆ ತಾಗಿತ್ತು. ತಕ್ಷಣವೇ ಕುಸಿದು ಬಿದ್ದಿದ್ದ ಫಿಲಿಪ್ ಹ್ಯೂಸ್ ಕೋಮಾಕ್ಕೆ ಜಾರಿದ್ದರು. ಇದಾಗಿ 2 ದಿನಗಳ ನಂತರ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಇದನ್ನೂ ಓದಿ: ದಾಖಲೆಯ ಸರದಾರನನ್ನು ಕೂರಿಸಿ ಹರ್ಷಿತ್ ರಾಣಾರನ್ನು ಕಣಕ್ಕಿಳಿಸಿದ ಗಂಭೀರ್..!
ಇದೀಗ ಇದೇ ಘಟನೆಯನ್ನು ನೆನಪಿಸುವಂತೆ ಬೆನ್ ಆಸ್ಟಿನ್ ದುರಂತ ಅಂತ್ಯಕಂಡಿದ್ದಾರೆ. ಆಸ್ಟ್ರೇಲಿಯಾ ಅಂಡರ್-19 ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಟ್ಟಿಕೊಂಡಿದ್ದ ಆಸ್ಟಿನ್ ಮುಂದೊಂದು ದಿನ ರಾಷ್ಟ್ರೀಯ ತಂಡದ ಪರ ಆಡುವ ವಿಶ್ವಾಸದಲ್ಲಿದ್ದರು. ಇದಕ್ಕಾಗಿ ಕಠಿಣ ಅಭ್ಯಾಸದಲ್ಲೂ ತೊಡಗಿಸಿಕೊಂಡಿದ್ದರು. ಆದರೆ ದುರಾದೃಷ್ಟವಶಾತ್ ಯುವ ಬ್ಯಾಟರ್ ತಮ್ಮ ಜೀವನದ ಇನಿಂಗ್ಸ್ ಅನ್ನೇ ಅಂತ್ಯಗೊಳಿಸಿದ್ದಾರೆ.
Published On - 10:57 am, Thu, 30 October 25
