ದಾಖಲೆಯ ಸರದಾರನನ್ನು ಕೂರಿಸಿ ಹರ್ಷಿತ್ ರಾಣಾರನ್ನು ಕಣಕ್ಕಿಳಿಸಿದ ಗಂಭೀರ್..!
India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಆದರೆ ಈ ಪಂದ್ಯಕ್ಕಾಗಿ ಯುವ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಚರ್ಚೆಗಳು ಶುರುವಾಗಿದೆ. ಅದರಲ್ಲೂ ಹರ್ಷಿತ್ ರಾಣಾ ಅವರಿಗೆ ಅವಕಾಶ ನೀಡಿರುವ ಬಗ್ಗೆ ಪ್ರಶ್ನೆಗಳೆದ್ದಿವೆ.
Updated on: Oct 30, 2025 | 9:57 AM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಸರಣಿ ಶುರುವಾಗಿದೆ. ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಪರ ಹರ್ಷಿತ್ ರಾಣಾ (Harshit Rana) ಕಣಕ್ಕಿಳಿದಿದ್ದರು. ಅದು ಕೂಡ ಜಸ್ಪ್ರೀತ್ ಬುಮ್ರಾ ಜೊತೆ ಎರಡನೇ ಪ್ರಮುಖ ವೇಗಿಯಾಗಿ ಎಂಬುದು ವಿಶೇಷ.

ಇತ್ತ ಹರ್ಷಿತ್ ರಾಣಾಗೆ ಚಾನ್ಸ್ ನೀಡಿದ್ದರಿಂದ ಅವಕಾಶ ವಂಚಿತರಾಗಿದ್ದು ಅರ್ಷದೀಪ್ ಸಿಂಗ್. ವಿಶೇಷ ಎಂದರೆ ಅರ್ಷದೀಪ್ ಟೀಮ್ ಇಂಡಿಯಾ ಕಂಡಂತಹ ಅತ್ಯಂತ ಯಶಸ್ವಿ ವೇಗಿ. ಅಂದರೆ ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಅರ್ಷದೀಪ್ ಸಿಂಗ್ ಹೆಸರಿನಲ್ಲಿದೆ.

ಟೀಮ್ ಇಂಡಿಯಾ ಪರ ಕೇವಲ 65 ಟಿ20 ಪಂದ್ಯಗಳನ್ನಾಡಿರುವ ಅರ್ಷದೀಪ್ ಸಿಂಗ್ 1358 ಎಸೆತಗಳಲ್ಲಿ 101 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಭಾರತದ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ವಿಶೇಷ ಎಂದರೆ ಅರ್ಷದೀಪ್ ಸಿಂಗ್ ಹೊರತಾಗಿ ಭಾರತದ ಯಾವುದೇ ಬೌಲರ್ ಟಿ20 ಕ್ರಿಕೆಟ್ನಲ್ಲಿ 100 ವಿಕೆಟ್ಗಳ ಸಾಧನೆ ಮಾಡಿಲ್ಲ.

ಇದಾಗ್ಯೂ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅರ್ಷದೀಪ್ ಸಿಂಗ್ಗೆ ಅವಕಾಶ ಸಿಕ್ಕಿರಲಿಲ್ಲ. ಬದಲಾಗಿ 4 ಮ್ಯಾಚ್ಗಳಿಂದ ಒಟ್ಟು 5 ವಿಕೆಟ್ಗಳನ್ನು ಮಾತ್ರ ಕಬಳಿಸಿರುವ ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಲಾಗಿತ್ತು. ಟೀಮ್ ಇಂಡಿಯಾ ಕೋಚ್ನ ಈ ನಿರ್ಧಾರವು ಇದೀಗ ಚರ್ಚಗೆ ಗ್ರಾಸವಾಗಿದೆ.

ಇದಕ್ಕೂ ಮುನ್ನ ಮೊಹಮ್ಮದ್ ಶಮಿ ಬದಲಿಗೆ ಗೌತಮ್ ಗಂಭೀರ್ ಹರ್ಷಿತ್ ರಾಣಾಗೆ ಆದ್ಯತೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದೀಗ ಯಶಸ್ವಿ ವೇಗಿಯನ್ನು ಬೆಂಚ್ನಲ್ಲಿ ಕೂರಿಸಿ ಹರ್ಷಿತ್ ರಾಣಾಗೆ ಚಾನ್ಸ್ ನೀಡಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
