ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ (Sri Lanka vs Afghanistan) ನಡುವೆ ಇಂದಿನಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ಲಂಕಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಪಾತುಮ್ ನಿಸ್ಸಾಂಕ (Pathum Nissanka) ಅಜೇಯ 210 ರನ್‌ಗಳ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದು ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 50 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಬರೋಬ್ಬರಿ 381 ರನ್ ಕಲೆಹಾಕಿದೆ. ತಂಡದ ಪರ ಕೇವಲ 139 ಎಸೆತಗಳನ್ನು ಎದುರಿಸಿದ ನಿಸ್ಸಾಂಕ 20 ಬೌಂಡರಿ ಮತ್ತು 8 ಸಿಕ್ಸರ್‌ಗಳ ಸಹಿತ ಅಜೇಯ ದ್ವಿಶತಕದ ಇನ್ನಿಂಗ್ಸ್ ಆಡಿದರು. ಈ ಮೂಲಕ ಶ್ರೀಲಂಕಾ ಪರ ಏಕದಿನದಲ್ಲಿ ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಪಾತುಮ್ ನಿಸ್ಸಾಂಕ ಹಾಗೂ ಅವಿಷ್ಕಾ ಫೆರ್ನಾಂಡೋ ಮೊದಲ ವಿಕೆಟ್ಗೆ 181 ರನ್‌ಗಳ ಜೊತೆಯಾಟವನ್ನಾಡಿದರು. ಈ ವೇಳೆ ಫೆರ್ನಾಂಡೋ 88 ರನ್‌ಗಳ ಇನ್ನಿಂಗ್ಸ್ ಆಡಿ ವಿಕೆಟ್ ಒಪ್ಪಿಸಿದರೆ, ನಿಸ್ಸಾಂಕ ಮಾತ್ರ ಶತಕ ಸಿಡಿಸಿ ತಮ್ಮ ಇನ್ನಿಂಗ್ಸ್ ಮುಂದುವರೆಸಿದರು. ಬಳಿಕ ನಿಸ್ಸಾಂಕಗೆ ಜೊತೆಯಾದ ಸದೀರ ಸಮರವಿಕ್ರಮ 45 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ನಿಸ್ಸಾಂಕ ಪೂರ್ಣ 50 ಓವರ್ಗಳನ್ನು ಆಡಿ ಅಜೇಯರಾಗಿ ಪೆವಿಲಿಯನ್ಗೆ ಮರಳಿದರು.
ಇಂದಿನ ಪಂದ್ಯದಲ್ಲಿ ಅಜೇಯ 210 ರನ್‌ಗಳ ಇನ್ನಿಂಗ್ಸ್ ಆಡಿದ ನಿಸ್ಸಾಂಕ, ಈ ದ್ವಿಶತಕದ ಇನ್ನಿಂಗ್ಸ್ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಲಂಕಾ ತಂಡದ ಮಾಜಿ ಆಟಗಾರ ಸನತ್ ಜಯಸೂರ್ಯ ಅವರ 24 ವರ್ಷಗಳ ಹಳೆಯ ದಾಖಲೆಯೂ ಸೇರಿದೆ. ನಿಸ್ಸಾಂಕಗೂ ಮೊದಲು ಸನತ್ ಜಯಸೂರ್ಯ ಸಿಡಿಸಿದ್ದ 189 ರನ್‌ಗಳು ಏಕದಿನದಲ್ಲಿ ಶ್ರೀಲಂಕಾದ ಯಾವುದೇ ಬ್ಯಾಟ್ಸ್‌ಮನ್ ಕಲೆಹಾಕಿದ್ದ ಅತ್ಯುತ್ತಮ ಸ್ಕೋರ್ ಆಗಿತ್ತು. ಇದೀಗ ಆ ದಾಖಲೆಯನ್ನು ನಿಸ್ಸಾಂಕ ಮುರಿದಿದ್ದಾರೆ.
Pathum Nissanka becomes the first-ever Sri Lanka batter to score a Men’s ODI double hundred 🎉#SLvAFG pic.twitter.com/1VxXk664SQ
— ICC (@ICC) February 9, 2024
2000ರಲ್ಲಿ ನಡೆದ ಭಾರತದ ವಿರುದ್ಧದ ಏಕದಿನ ಪಂದ್ಯದಲ್ಲಿ ಲಂಕಾ ತಂಡದ ಮಾಜಿ ಆಟಗಾರ ಜಯಸೂರ್ಯ 189 ರನ್‌ಗಳ ಇನಿಂಗ್ಸ್ ಆಡಿದ್ದರು. ಇದೀಗ 24 ವರ್ಷಗಳ ನಂತರ ಅಫ್ಘಾನಿಸ್ತಾನ ವಿರುದ್ಧ 210 ರನ್ ಬಾರಿಸುವ ಮೂಲಕ ನಿಸ್ಸಾಂಕ ಇತಿಹಾಸ ಸೃಷ್ಟಿಸಿದ್ದಾರೆ. ಇದರೊಂದಿಗೆ ನಿಸ್ಸಾಂಕ, 2018 ರಲ್ಲಿ ಜಿಂಬಾಬ್ವೆ ವಿರುದ್ಧ 210 ರನ್ ಗಳಿಸಿದ್ದ ಪಾಕಿಸ್ತಾನದ ಫಖರ್ ಜಮಾನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್‌ನಲ್ಲಿ ಆಟಗಾರನೊಬ್ಬ ಸಿಡಿಸಿದ 12ನೇ ದ್ವಿಶತಕದ ದಾಖಲೆ ನಿಸ್ಸಾಂಕ ಪಾಲಾಗಿದೆ.
ಪಾತುಮ್ ನಿಸ್ಸಾಂಕ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ 10ನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಭಾರತದ ರೋಹಿತ್ ಶರ್ಮಾ, ಇಶಾನ್ ಕಿಶನ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಶುಭ್ಮನ್ ಗಿಲ್ ಈ ಸಾಧನೆ ಮಾಡಿದ್ದರು. ಇವರಲ್ಲದೇ ಕ್ರಿಸ್ ಗೇಲ್, ಮಾರ್ಟಿನ್ ಗಪ್ಟಿಲ್, ಗ್ಲೆನ್ ಮ್ಯಾಕ್ಸ್ವೆಲ್, ಫಖರ್ ಜಮಾನ್ ಕೂಡ ಏಕದಿನದಲ್ಲಿ ದ್ವಿಶತಕ ಸಿಡಿಸಿದ್ದರು. ರೋಹಿತ್ ಶರ್ಮಾ ಒಬ್ಬರೇ ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ದ್ವಿಶತಕ ಸಿಡಿಸಿದ್ದು, ಈ ಸಾಧನೆ ಮಾಡಿದ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಇವರನ್ನು ಬಿಟ್ಟರೆ ಏಕದಿನ ಕ್ರಿಕೆಟ್‌ನಲ್ಲಿ ಯಾರೂ ಒಂದಕ್ಕಿಂತ ಹೆಚ್ಚು ದ್ವಿಶತಕ ಸಿಡಿಸಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:17 pm, Fri, 9 February 24