Andries Gous: ಸೌತ್ ಆಫ್ರಿಕಾಗೆ ಭಯ ಹುಟ್ಟಿಸಿದ ದಕ್ಷಿಣ ಆಫ್ರಿಕಾ ಮೂಲದ ಕ್ರಿಕೆಟಿಗ..!
Andries Gous: ಯುಎಸ್ಎ ಪರ 10 ಟಿ20 ಪಂದ್ಯಗಳನ್ನಾಡಿರುವ ಆ್ಯಂಡ್ರೀಸ್ ಗೌಸ್ 4 ಅರ್ಧಶತಕಗಳೊಂದಿಗೆ ಒಟ್ಟು 343 ರನ್ ಕಲೆಹಾಕಿದ್ದಾರೆ. ಅದರಲ್ಲೂ ಸೌತ್ ಆಫ್ರಿಕಾ ವಿರುದ್ಧ ಬಾರಿಸಿದ 80 ರನ್ಗಳು ಅವರ ಗರಿಷ್ಠ ಸ್ಕೋರ್ ಎಂಬುದು ವಿಶೇಷ. ಇದೀಗ ಸೂಪರ್-8 ರ ಮೊದಲ ಪಂದ್ಯದಲ್ಲೇ ಅಬ್ಬರಿಸಿರುವ ಗೌಸ್ ಕಡೆಯಿಂದ ಮುಂಬರುವ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.
T20 World Cup 2024: ಟಿ20 ವಿಶ್ವಕಪ್ನ ಸೂಪರ್-8 ಸುತ್ತಿನ ಮೊದಲ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಏಕಪಕ್ಷೀಯವಾಗಿ ಸಾಗಲಿದೆ ಅಂದುಕೊಂಡಿದ್ದ ಸೌತ್ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಯುಎಸ್ಎ ತಂಡವು ಕೆಚ್ಚೆದೆಯ ಪ್ರದರ್ಶನ ನೀಡಿದೆ. ಸೌತ್ ಆಫ್ರಿಕಾ ವಿರುದ್ಧ ಇಂತಹ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದ್ದು ದಕ್ಷಿಣ ಆಫ್ರಿಕಾ ಮೂಲದ ಕ್ರಿಕೆಟಿಗ ಆ್ಯಂಡ್ರೀಸ್ ಗೌಸ್ ಎಂಬುದು ವಿಶೇಷ.
ಅಂದರೆ ಸೌತ್ ಆಫ್ರಿಕಾ ಪರ ಅಂಡರ್-19 ವಿಶ್ವಕಪ್ ಆಡಿದ್ದ ಆ್ಯಂಡ್ರೀಸ್ ಗೌಸ್ ಇದೀಗ ಯುಎಸ್ಎ ಪರ ಕಣಕ್ಕಿಳಿಯುತ್ತಿದ್ದಾರೆ. ಅದರಲ್ಲೂ ಇದೇ ಮೊದಲ ಬಾರಿಗೆ ತವರು ತಂಡದ ವಿರುದ್ಧ ಸಿಕ್ಕ ಅವಕಾಶದಲ್ಲಿ ಗೌಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಅಂಟಿಗುವಾದ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 194 ರನ್ ಕಲೆಹಾಕಿತು. ಅತ್ತ ಬೃಹತ್ ಮೊತ್ತ ಪೇರಿಸಿದ್ದರಿಂದ ಸೌತ್ ಆಫ್ರಿಕಾ ಸುಲಭವಾಗಿ ಪಂದ್ಯ ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಯುಎಸ್ಎ ಪರ ಆರಂಭಿಕನಾಗಿ ಕಣಕ್ಕಿಳಿದ ಆ್ಯಂಡ್ರೀಸ್ ಗೌಸ್ ಎಲ್ಲರ ಲೆಕ್ಕಚಾರವನ್ನು ತಲೆಕೆಳಗಾಗಿಸಿದರು. ಅಲ್ಲದೆ ಸೌತ್ ಆಫ್ರಿಕಾ ಬೌಲರ್ಗಳ ಬೆಂಡೆತ್ತುವ ಮೂಲಕ ಪಂದ್ಯವನ್ನು ರೋಚಕಘಟತ್ತ ಸಾಗಿಸಿದರು.
5 ಭರ್ಜರಿ ಸಿಕ್ಸ್ – 5 ಫೋರ್:
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಆ್ಯಂಡ್ರೀಸ್ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ ಸಿಡಿಸಿದರು. ಪರಿಣಾಮ ಕೊನೆಯ 12 ಎಸೆತಗಳಲ್ಲಿ ಯುಎಸ್ಎ ತಂಡಕ್ಕೆ 28 ರನ್ಗಳ ಅವಶ್ಯಕತೆಯಿತ್ತು.
ಈ ಹಂತದಲ್ಲಿ ಅನುಭವಿ ವೇಗಿ ಕಗಿಸೊ ರಬಾಡ ಎಸೆದ 19ನೇ ಓವರ್ನಲ್ಲಿ ಕೇವಲ 2 ರನ್ ನೀಡಿದರು. ಈ ಓವರ್ನಲ್ಲಿ ಆ್ಯಂಡ್ರೀಸ್ ಗೌಸ್ಗೆ ಸ್ಟ್ರೈಕ್ ಕೂಡ ಸಿಗಲಿಲ್ಲ.
ಪರಿಣಾಮ ಕೊನೆಯ ಓವರ್ನಲ್ಲಿ 26 ರನ್ಗಳ ಟಾರ್ಗೆಟ್ ಪಡೆಯಿತು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಆ್ಯಂಡ್ರೀಸ್ ಗೌಸ್ 47 ಎಸೆತಗಳಲ್ಲಿ ಅಜೇಯ 80 ರನ್ ಬಾರಿಸಿದರು. ಈ ಮೂಲಕ ಯುಎಸ್ಎ ತಂಡ 18 ರನ್ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ: Phil Salt: 6,6,6,6,6: ಹೊಸ ದಾಖಲೆ ಬರೆದ ಫಿಲ್ ಸಾಲ್ಟ್
ರಬಾಡ-ಗೌಸ್:
ಸೌತ್ ಆಫ್ರಿಕಾ ಮೂಲದವರಾಗಿರುವ ಆ್ಯಂಡ್ರೀಸ್ ಗೌಸ್ ಈ ಹಿಂದೆ ಕಗಿಸೊ ರಬಾಡ, ಲಿಝಾಡ್ ವಿಲಿಯಮ್ಸ್ ಸೇರಿದಂತೆ ಪ್ರಮುಖ ಆಟಗಾರರೊಂದಿಗೆ ಅಂಡರ್-19 ಕ್ರಿಕೆಟ್ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ 30 ವರ್ಷದ ಗೌಸ್ ಯುಎಸ್ಎ ಪರ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ಇಲ್ಲಿ ಕಗಿಸೊ ರಬಾಡ ಹಾಗು ಆ್ಯಂಡ್ರೀಸ್ ಗೌಸ್ ಟಿ20 ವಿಶ್ವಕಪ್ನಲ್ಲಿ ಎದುರಾಳಿಗಳಾಗಿ ಕಣಕ್ಕಿಳಿದಿರುವುದು ವಿಶೇಷ.