ಜನವರಿ 18 ರಿಂದ ಆರಂಭವಾಗಿರುವ ಐಸಿಸಿ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಮಲೇಷ್ಯಾದಲ್ಲಿ ನಡೆಯುತ್ತಿದೆ. ಟೂರ್ನಿಯ ಮೂರನೇ ದಿನವಾದ ಇಂದು ದಕ್ಷಿಣ ಆಫ್ರಿಕಾ ಹಾಗೂ ಸಮೋವಾ ತಂಡವಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಸಮೋವಾ ತಂಡವನ್ನು ಹೀನಾಯವಾಗಿ ಮಣಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ ಈ ಟೂರ್ನಿಯಲ್ಲಿ ಅತಿ ದೊಡ್ಡ ಗೆಲುವು ಸಾಧಿಸಿದ ದಾಖಲೆ ಬರೆದಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಮೋವಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 16 ರನ್‌ಗಳಿಗೆ ಆಲೌಟ್ ಆಯಿತು. ಇತ್ತ 16 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸಮೋವಾ ತಂಡ ಕೂಡ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ಗೆ ಆಲೌಟ್ ಆದ ತಂಡವೆಂಬ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿತು.
ವಾಸ್ತವವಾಗಿ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿದ ತಂಡಗಳ ಪಟ್ಟಿಯಲ್ಲಿ ಮಲೇಷ್ಯಾ ಮೊದಲ ಸ್ಥಾನದಲ್ಲಿತ್ತು. ಟೂರ್ನಿಯ ಪ್ರಸಕ್ತ ಸೀಸನ್ನಲ್ಲಿಯೇ ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ಮಲೇಷ್ಯಾ ಕೇವಲ 23 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೀಗ ಸಮೋವಾ 16 ರನ್‌ಗಳಿಗೆ ಆಲೌಟ್ ಆಗಿ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಮೋವಾ ತಂಡ 9.1 ಓವರ್ಗಳಲ್ಲಿ ಆಲೌಟ್ ಆಗಿ ಕೇವಲ 16 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದರಲ್ಲಿ 6 ರನ್ಗಳು ದಕ್ಷಿಣ ಆಫ್ರಿಕಾ ಉಚಿತವಾಗಿ ನೀಡಿತ್ತು. ಅಂದರೆ ಸಮೋವಾ ತಂಡದ ಆಟಗಾರ್ತಿಯರು ಬ್ಯಾಟ್ನಿಂದ ಕಲೆಹಾಕಿದ್ದು ಕೇವಲ 10 ರನ್ ಮಾತ್ರ. ತಂಡದ ಪರ ನಾಯಕಿ ಅವೆಟಿಯಾ ಮಾಪು ಹಾಗೂ ಸ್ಟೆಲ್ಲಾ ಸಗಲಾಲಾ ಗರಿಷ್ಠ 3 ರನ್ ಕಲೆಹಾಕಿದರೆ, ನಾಲ್ವರು ಆಟಗಾರ್ತಿಯರು ತಲಾ 1 ರನ್ ಬಾರಿಸಿ ಔಟಾದರು. ಉಳಿದ ಐವರಿಗೆ ಖಾತೆಯನ್ನು ತೆರೆಯಲಾಗಲಿಲ್ಲ.
South Africa continue their unbeaten run with another impressive win 👏#U19WorldCup | #SAvSAM 📝: https://t.co/dg5pqFgaSd pic.twitter.com/LrqlDGFPbz
— ICC (@ICC) January 20, 2025
ಸಮೋವಾ ತಂಡ ನೀಡಿದ 17 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೇವಲ 10 ಎಸೆತಗಳಲ್ಲಿಯೇ ಜಯದ ನಗೆ ಬೀರಿತು. ಇದು ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಆಡಿರುವ 2 ಪಂದ್ಯಗಳಲ್ಲಿ ಸತತ ಎರಡನೇ ಗೆಲುವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ