ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿಂದು ಕುತೂಹಲಕಾರಿ ಪಂದ್ಯ ನಡೆಯಲಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ 42ನೇ ಪಂದ್ಯದಲ್ಲಿ ತೆಂಬ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ಹಾಗೂ ಹಶ್ಮತುಲ್ಲಾ ಶಾಹಿದಿ ನೇತೃತ್ವದ ಅಫ್ಘಾನಿಸ್ತಾನ (South Africa vs Afghanistan) ತಂಡ ಮುಖಾಮುಖಿ ಆಗುತ್ತಿದೆ. ಆಫ್ರಿಕಾ ಈಗಾಗಲೇ ಸೆಮಿ ಫೈನಲ್ಗೆ ಲಗ್ಗೆಯಿಟ್ಟಿದ್ದರೆ, ಇತ್ತ ಅಫ್ಘಾನ್ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಆದರೆ, ಈ ಬಾರಿ ಕ್ರಿಕೆಟ್ ಶಿಶುಗಳು ನೀಡಿರುವ ಪ್ರದರ್ಶನ ಎಲ್ಲರಲ್ಲೂ ಅಚ್ಚರಿ ಮೂಡಿಸಿರುವ ಕಾರಣ ಇಂದಿನ ಪಂದ್ಯ ರೋಚಕತೆ ಸೃಷ್ಟಿಸಿದೆ.
ವಿಶ್ವಕಪ್ 2023 ರಲ್ಲಿ ಎರಡನೇ ಯಶಸ್ವಿ ತಂಡವಾಗಿರುವ ಆಫ್ರಿಕಾ ಆಡಿರುವ ಎಂಟು ಪಂದ್ಯಗಳಲ್ಲಿ ಸೋತಿದ್ದು ಕೇವಲ ಎರಡು ಮಾತ್ರ. ಕಳೆದ ಪಂದ್ಯದಲ್ಲಿ ಭಾರತ ವಿರುದ್ಧ ಹೀನಾಯವಾಗಿ ಸೋತಿತ್ತು. ಈ ಪ್ರದರ್ಶನ ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ. ಆದರೆ, ಹಿಂದಿನ ಪಂದ್ಯಗಳನ್ನು ಗಮನಿಸಿದರೆ ದಕ್ಷಿಣ ಆಫ್ರಿಕಾ ಬ್ಯಾಟರ್ಗಳು ಭಾರತೀಯ ಪಿಚ್ನಲ್ಲಿ ಸ್ಪಿನ್ನರ್‌ಗಳ ವಿರುದ್ಧ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಅದರಲ್ಲೂ ಹೆನ್ರಿಚ್ ಕ್ಲಾಸೆನ್ ಈ ವಿಶ್ವಕಪ್‌ನಲ್ಲಿ ಸ್ಪಿನ್ನರ್‌ಗಳ ವಿರುದ್ಧ ಅಬ್ಬರಿಸಿದ್ದಾರೆ. ಸ್ಪಿನ್ ಶಕ್ತಿ ಹೊಂದಿರುವ ಅಫ್ಘಾನ್ ಇವರನ್ನು ಹೇಗೆ ತಡೆಯುತ್ತೆ ನೋಡಬೇಕು. ತಂಡದ ಪರ ನಾಯಕ ಬವುಮಾ ಬಿಟ್ಟರೆ ಉಳಿದ ಎಲ್ಲ ಬ್ಯಾಟರ್ಗಳು ಭರ್ಜರಿ ಫಾರ್ಮ್ನಲ್ಲಿದ್ದಾರೆ. ಆಫ್ರಿಕಾ ಬೌಲರ್ಗಳು ಕೂಡ ಸಂಘಟಿತ ಪ್ರದರ್ಶನ ನೀಡುತ್ತಿದ್ದಾರೆ.
ನ.9 ರಿಂದ ವಿಶ್ವಕಪ್ ಸೆಮಿಫೈನಲ್, ಫೈನಲ್ ಪಂದ್ಯದ ಟಿಕೆಟ್ ಮಾರಾಟ ಆರಂಭ; ಖರೀದಿಸುವುದು ಹೇಗೆ?
ಅಫ್ಘಾನಿಸ್ತಾನ ಹಿಂದಿನ ಆಸ್ಟ್ರೇಲಿಯಾ ವಿರುದ್ಧದ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು. ಒಂದು ಕಳಪೆ ಫೀಲ್ಡಿಂಗ್ ಪಂದ್ಯದ ಗತಿಯನ್ನೇ ಬದಲಾಯಿಸಿತು. ಆದರೆ, ಕ್ರಿಕೆಟ್ ಶಿಶುಗಳು ಆಸ್ಟ್ರೇಲಿಯಾ ವಿರುದ್ಧ ನೀಡಿದ ಪ್ರದರ್ಶನ ಅದ್ಭುತವಾಗಿತ್ತು. ಸೆಮಿ ಫೈನಲ್ ಆಸೆ ಬಹುತೇಕ ಕಮರಿ ಹೋಗಿರುವ ಅಫ್ಘಾನ್ ಇಂದು ಯಾವ ರೀತಿ ಆಡುತ್ತೆ ನೋಡಬೇಕು. ಪಾಯಿಂಟ್ ಟೇಬಲ್ನಲ್ಲಿ ಅಫ್ಘಾನಿಸ್ತಾನವು ಪ್ರಸ್ತುತ ಆರನೇ ಸ್ಥಾನದಲ್ಲಿದೆ. ಆಡಿದ ಎಂಟು ಪಂದ್ಯಗಳ ಪೈಕಿ ತಲಾ ನಾಲ್ಕರಲ್ಲಿ ಸೋಲು-ಗೆಲುವು ಕಂಡಿದೆ. ಬ್ಯಾಟರ್ಗಳು ಉತ್ತಮ ಫಾರ್ಮ್ನಲ್ಲಿದ್ದಾರೆ. ರಶೀದ್ ಪರಿಣಾಮಕಾರಿ ಆಗಿ ಕಾಣುತ್ತಿದ್ದರೂ ವಿಕೆಟ್ ಪಡೆಯುತ್ತಿಲ್ಲ.
ಅತಿ ದೊಡ್ಡ ಕ್ರೀಡಾಂಗಣ ಎಂಬ ಹೆಸರು ಪಡೆದುಕೊಂಡಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಪಂದ್ಯದ ಆರಂಭದಲ್ಲಿ ಬ್ಯಾಟಿಂಗ್‌ಗೆ ಯೋಗ್ಯವಾಗಿದ್ದರೆ, ಪಂದ್ಯ ಸಾಗುತ್ತಿದ್ದಂತೆ ಇಲ್ಲಿನ ವಿಕೆಟ್ ಸ್ಪಿನ್ನರ್‌ಗಳು ಪರಿಣಾಮಕಾರಿಯಾಗಲಿದ್ದಾರೆ. ಇಲ್ಲಿರುವ ಕಪ್ಪು ಮಣ್ಣಿನ ಪಿಚ್‌ಗಳು ಉತ್ತಮ ಬೌನ್ಸ್‌ನೊಂದಿಗೆ ಬೌಲರ್‌ಗಳಿಗೆ ಯೋಗ್ಯವಾಗಿದೆ. ಬ್ಯಾಟರ್‌ಗಳಿಗೆ ಆರಂಭಿಕ ಓವರ್‌ಗಳು ಸವಾಲಾಗಿರಬಹುದು. ಆಟಗಾರರು ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದರಿಂದ, ಪಿಚ್ ಸ್ವಲ್ಪಮಟ್ಟಿಗೆ ಬ್ಯಾಟಿಂಗ್ ಸ್ವರ್ಗವಾಗಿ ಬದಲಾಗುತ್ತದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಪರಿಸ್ಥಿತಿಗಳನ್ನು ಹೆಚ್ಚಿಸಲು ಇಬ್ಬನಿ ಅಂಶವು ಸಹ ಸಹಾಯ ಮಾಡುತ್ತದೆ.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್, ತೆಂಬ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡುಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ ಕಗಿಸೊ ರಬಾಡ, ಲಿಜಾಡ್ ವಿಲಿಯಮ್ಸ್ ಹೆಂಡ್ರಿಕ್ಸ್, ಆಂಡಿಲೆ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ.
ಅಫ್ಘಾನಿಸ್ತಾನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಷಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಝೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ಫಝಲ್ಹಕ್ ಫಾರೂಖಿ, ಅಬ್ದುಲ್ ರಹಮಾನ್, ನವೀನ್ ಉಲ್ ಹಕ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ