ಕೇಪ್ ಟೌನ್ನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಣ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟ ಸೌತ್ ಆಫ್ರಿಕಾ ಮೇಲುಗೈ ಸಾಧಿಸಿದೆ. ಮೊದಲ ದಿನದಾಟದಲ್ಲೇ ಟೀಮ್ ಇಂಡಿಯಾವನ್ನು ಆಲೌಟ್ ಮಾಡಿರುವ ಹರಿಣರು, ಇದೀಗ ಮೊದಲ ಇನಿಂಗ್ಸ್ ಆರಂಭಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 33 ಆಗುವಷ್ಟರಲ್ಲಿ ಆರಂಭಿಕರಾದ ಕೆಎಲ್ ರಾಹುಲ್ (12) ಹಾಗೂ ಮಯಾಂಕ್ ಅಗರ್ವಾಲ್ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರಾ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
3ನೇ ವಿಕೆಟ್ಗೆ 62 ರನ್ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಅಂತಿಮವಾಗಿ ಮಾರ್ಕೊ ಜಾನ್ಸನ್ ಯಶಸ್ವಿಯಾದರು. ಅದರಂತೆ 43 ರನ್ ಕಲೆಹಾಕಿ ಪೂಜಾರಾ ಹೊರನಡೆದರು. ಇದರ ಬೆನ್ನಲ್ಲೇ ಅಜಿಂಕ್ಯ ರಹಾನೆ (9) ವಿಕೆಟ್ ಒಪ್ಪಿಸಿದರು. ಇನ್ನು ರಿಷಭ್ ಪಂತ್ ಒಂದಷ್ಟು ಹೊತ್ತು ಕ್ರೀಸ್ ಕಚ್ಚಿ ನಿಂತರೂ 27 ರನ್ಗಳಿಸಿ ಹೊರನಡೆದರು.
ಆದರೆ ಮತ್ತೊಂದೆಡೆ ಏಕಾಂಗಿಯಾಗಿ ಇನಿಂಗ್ಸ್ ಕಟ್ಟಿದ ವಿರಾಟ್ ಕೊಹ್ಲಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಂತೆ 158 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು. ಆದರೆ ಮತ್ತೊಂದೆಡೆ ಕೊಹ್ಲಿಗೆ ಉತ್ತಮ ಸಾಥ್ ದೊರೆತಿರಲಿಲ್ಲ. ಅಶ್ವಿನ್ (2), ಶಾರ್ದೂಲ್ ಠಾಕೂರ್ (12), ಬುಮ್ರಾ (0) ಬಂದ ವೇಗದಲ್ಲೇ ವಿಕೆಟ್ ಕೈಚೆಲ್ಲಿದರು.
ಈ ಹಂತದಲ್ಲಿ ತಂಡದ ಸ್ಕೋರ್ ಗತಿಯನ್ನು ಹೆಚ್ಚಿಸುವತ್ತ ಗಮನ ಹರಿಸಿದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಗೇರ್ ಬದಲಿಸಿದರು. ಇತ್ತ ಶತಕ ಬಾರಿಸುವ ನಿರೀಕ್ಷಯೆನ್ನು ಹುಟ್ಟುಹಾಕಿದರೂ, ಅಂತಿಮ ಹಂತದಲ್ಲಿ ಟೀಮ್ ಇಂಡಿಯಾ ಆಟಗಾರರು ಬ್ಯಾಕ್ ಟು ಬ್ಯಾಕ್ ವಿಕೆಟ್ ಕೈಚೆಲ್ಲಿದ ಪರಿಣಾಮ ಕೊಹ್ಲಿ ಕೂಡ ಬಿರುಸಿನ ಆಟಕ್ಕೆ ಮುಂದಾದರು. ಇದರಿಂದಾಗಿ 79 ರನ್ಗಳಿಸಿ 9ನೇ ವಿಕೆಟ್ ಆಗಿ ವಿರಾಟ್ ಕೊಹ್ಲಿ ಹಿಂತಿರುಗಿದರು. ಅಂತಿಮವಾಗಿ ಟೀಮ್ ಇಂಡಿಯಾ 223 ರನ್ಗೆ ಸರ್ವಪತನ ಕಂಡಿತು. ದಕ್ಷಿಣ ಆಫ್ರಿಕಾ ಪರ ರಬಾಡ 4 ವಿಕೆಟ್ ಕಬಳಿಸಿದರೆ, ಮಾರ್ಕೊ ಜಾನ್ಸನ್ 3 ವಿಕೆಟ್ ಪಡೆದರು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 17 ರನ್ಗಳಿಸಿದೆ. ಕ್ರೀಸ್ನಲ್ಲಿ ನಾಯಕ ಡೀನ್ ಎಲ್ಗರ್ ಹಾಗೂ ಕೇಶವ್ ಮಹಾರಾಜ್ ಬ್ಯಾಟ್ ಮಾಡುತ್ತಿದ್ದಾರೆ. ಟೀಮ್ ಇಂಡಿಯಾ ಪರ ಒಂದು ವಿಕೆಟ್ ಕಬಳಿಸುವ ಮೂಲಕ ಜಸ್ಪ್ರೀತ್ ಬುಮ್ರಾ ವಿಕೆಟ್ ಖಾತೆ ತೆರೆದಿದ್ದಾರೆ.
ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(South Africa vs India, 3rd Test 1st Day Highlights)