IPL 2022: ವಿವೋಗಿಂತ ಕಡಿಮೆ ಮೊತ್ತ ಪಾವತಿಸಲಿರುವ ಟಾಟಾ: ಆದ್ರೂ ಬಿಸಿಸಿಐಗೆ 100 ಕೋಟಿ ರೂ. ಲಾಭ..!
TATA IPL 2022: ಮುಂಬರುವ ಎರಡು ಸೀಸನ್ಗಳಲ್ಲಿನ ಪಂದ್ಯಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಐಪಿಎಲ್ 2022ಕ್ಕಾಗಿ 484 ಕೋಟಿ ರೂ ಮತ್ತು IPL 2023 ಗಾಗಿ 512 ಕೋಟಿಗಳನ್ನು ಪಾವತಿಸಲು ವಿವೋ ಕಂಪೆನಿ ಒಪ್ಪಿಕೊಂಡಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಶೀರ್ಷಿಕೆ ಪ್ರಾಯೋಜಕತ್ವ ಬದಲಾಗಿದೆ. ಮುಂದಿನ ಸೀಸನ್ನಿಂದ ವಿವೋ ಐಪಿಎಲ್ ಬದಲಿಗೆ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (TATA IPL 2022) ಹೆಸರಿನಲ್ಲಿ ಟೂರ್ನಿ ನಡೆಯಲಿದೆ. ಆದರೆ ಈ ಟೈಟಲ್ ಸ್ಪಾನ್ಸರ್ಗಾಗಿ ಟಾಟಾ ಕಂಪೆನಿ ಪಾವತಿಸಿರುವ ಮೊತ್ತ ಎಷ್ಟು ಎಂದು ನೋಡುವುದಾದರೆ, ವಿವೋ ನೀಡಿದ ಮೊತ್ತಕ್ಕಿಂತ ಕಡಿಮೆ ಎಂಬುದೇ ಅಚ್ಚರಿ. ಇದಾಗ್ಯೂ ಬಿಸಿಸಿಐ ಮಾತ್ರ ಸುಮಾರು 120 ಕೋಟಿಗೂ ಅಧಿಕ ಲಾಭಗಳಿಸುತ್ತಿರುವುದು ಇಲ್ಲಿ ವಿಶೇಷ. ಹೌದು, ಟಾಟಾ ಗ್ರೂಪ್ ಐಪಿಎಲ್ ಟೈಟಲ್ ಪ್ರಾಯೋಜಕತ್ವನ್ನು ಪಡೆದಿರುವುದು ಪ್ರತಿ ಸೀಸನ್‌ಗೆ 335 ಕೋಟಿಗೆ. ಅಂದರೆ ಈ ಹಿಂದೆ ವಿವೋ ಕಂಪೆನಿ ಪಾವತಿಸದಕ್ಕಿಂತ ಸುಮಾರು 25% ಕಡಿಮೆ. ಆದರೆ ಇಲ್ಲಿ ಒಪ್ಪಂದದ ಲೆಕ್ಕಚಾರಗಳು ಬಿಸಿಸಿಐಗೆ ಲಾಭದಾಯಕವಾಗಿದೆ. ಅದು ಹೇಗೆಂದರೆ…
VIVO ಡೀಲ್: ಪ್ರತಿ ಸೀಸನ್‌ಗೆ 440 ಕೋಟಿ ರೂ.
TATA ಗ್ರೂಪ್ ಡೀಲ್: ಪ್ರತಿ ಸೀಸನ್‌ಗೆ 335 ಕೋಟಿ ರೂ.
ಡೀಲ್ ನಷ್ಟ: 105 ಕೋಟಿ ರೂ.
2 ಸೀಸನ್‌ಗಳಿಂದ ಒಟ್ಟು ನಷ್ಟ: 210 ಕೋಟಿ ರೂ.
ಆದರೆ ಇಲ್ಲಿ ವಿವೋ ಬಿಸಿಸಿಐ ಜೊತೆ 2023 ರವರೆಗೆ ಒಪ್ಪಂದ ಮಾಡಿಕೊಂಡಿತ್ತು ಎಂಬುದೇ ವಿಶೇಷ. 2018 ರಲ್ಲಿ ವಿವೋ ಕಂಪೆನಿ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಪ್ರತಿ ಸೀಸನ್‌ಗೆ 440 ಕೋಟಿ ರೂ. ಒಪ್ಪಂದ ಮಾಡಿಕೊಂಡಿತ್ತು. ಈ ಪ್ರಾಯೋಜಕತ್ವದ ಒಪ್ಪಂದವು ಐಪಿಎಲ್ 2023 ರ ನಂತರ ಮುಕ್ತಾಯಗೊಳ್ಳಬೇಕಿತ್ತು. ಆದರೆ ಬಿಸಿಸಿಐ ಹಾಗೂ ವಿವೋ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪ್ರಾಯೋಜಕತ್ವ ಬದಲಾಗುತ್ತಿದೆ.
ಮುಂಬರುವ ಎರಡು ಸೀಸನ್ಗಳಲ್ಲಿನ ಪಂದ್ಯಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಐಪಿಎಲ್ 2022ಕ್ಕಾಗಿ 484 ಕೋಟಿ ರೂ ಮತ್ತು IPL 2023 ಗಾಗಿ 512 ಕೋಟಿಗಳನ್ನು ಪಾವತಿಸಲು ವಿವೋ ಕಂಪೆನಿ ಒಪ್ಪಿಕೊಂಡಿತ್ತು. ಅದರಂತೆ 2 ಸೀಸನ್ಗಾಗಿ ವಿವೋ 996 ಕೋಟಿ ರೂ. ಪಾವತಿಸಲು ಮುಂದಾಗಿತ್ತು. ಇದಾಗ್ಯೂ ಬಿಸಿಸಿಐ-ವಿವೋ ನಡುವೆ ಡೀಲ್ ಕುದುರದ ಕಾರಣ ಪ್ರಾಯೋಜಕತ್ವದಿಂದ ವಿವೋ ಹಿಂದೆ ಸರಿಯಲು ನಿರ್ಧರಿಸಿದೆ. ಈಗ ಅದೇ ಅವಧಿಗೆ ಟಾಟಾ ಗ್ರೂಪ್ ಕೇವಲ 670 ಕೋಟಿ ರೂ.ಗಳನ್ನು ಪಾವತಿಸಲಿದೆ. ಈ ಹಿಂದಿನ ಒಪ್ಪಂದದ ಷರತ್ತಿನಂತೆ ಉಳಿದ ಮೊತ್ತವನ್ನು (ವರ್ಗಾವಣೆ ಶುಲ್ಕ) ವಿವೋ ಕಂಪೆನಿ ಭರಿಸಬೇಕಿದೆ.
ಈ ಹಿಂದೆ OPPO ಕಂಪೆನಿಯು ತಮ್ಮ ಹಕ್ಕುಗಳನ್ನು BYJU ಸಂಸ್ಥೆಗೆ ವರ್ಗಾಯಿಸಿದಾಗ ಒಪ್ಪಂದ ‘ವರ್ಗಾವಣೆ ಶುಲ್ಕ’ ವನ್ನು ಬಿಸಿಸಿಐಗೆ ಪಾವತಿಸಿತ್ತು. ಇದೀಗ ಅದೇ ಮಾದರಿಯಲ್ಲಿ ಒಪ್ಪಂದ ಷರತ್ತಿನ ಅನ್ವಯ ವಿವೋ ಕಂಪೆನಿ ಕೂಡ ಟಾಟಾ ಗ್ರೂಪ್ ನೀಡುತ್ತಿರುವ 670 ಕೋಟಿಗಳ ಪಾವತಿಯ ಮೇಲೆ ಸುಮಾರು 450 ಕೋಟಿ ರೂ. ಬಿಸಿಸಿಐಗೆ ಪಾವತಿಸಬೇಕಿದೆ. ಇದರಿಂದಾಗಿ ಬಿಸಿಸಿಐಗೆ ಸುಮಾರು 120 ಕೋಟಿ ರೂ. ಅಧಿಕ ಮೊತ್ತ ಸಿಗಲಿದೆ. ಅಂದರೆ ಈ ಹಿಂದೆ ವಿವೋ ಎರಡು ಸೀಸನ್ಗಾಗಿ 996 ಕೋಟಿ ರೂ. ನೀಡಲು ಒಪ್ಪಿಗೆ ಸೂಚಿಸಿತ್ತು. ಇದೀಗ ಟಾಟಾ 670 ಕೋಟಿ + ವಿವೋ ವರ್ಗಾವಣೆ ಶುಲ್ಕವಾಗಿ 450 ಕೋಟಿ ರೂ. ಪಾವತಿಸಬೇಕಿದೆ. ಇದರಿಂದ ಬಿಸಿಸಿಐಗೆ ಈ ಹಿಂದೆ ವಿವೋ ಮುಂದಿಟ್ಟಿದ್ದ 996 ಕೋಟಿಗಿಂತ ಹೆಚ್ಚುವರಿ 124 ಕೋಟಿ ರೂ. ಸಿಗಲಿದೆ.
ಈ ಮೂಲಕ ಬಿಸಿಸಿಐ ಎರಡು ಸೀಸನ್ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದಿಂದ 1120 ಕೋಟಿ ರೂ. ಅನ್ನು ಪಡೆಯಲಿದೆ. ಒಟ್ಟಿನಲ್ಲಿ ವಿವೋ ಟೈಟಲ್ ಸ್ಪಾನ್ಸರ್ಶಿಪ್ನಿಂದ ಹಿಂದೆ ಸರಿದರೂ, ಟಾಟಾ ಗ್ರೂಪ್ ಶೀರ್ಷಿಕೆ ಪ್ರಾಯೋಕತ್ವಕ್ಕೆ ಕಡಿಮೆ ಪಾವತಿಸಿದರೂ…ಬಿಸಿಸಿಐ ಮಾತ್ರ 124 ಕೋಟಿ ರೂ. ಅಧಿಕ ಲಾಭ ಪಡೆಯುತ್ತಿರುವುದು ವಿಶೇಷ.
ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(IPL 2022: Tata Group to pay less than VIVO)
Published On - 2:58 pm, Wed, 12 January 22