ಮತ್ತೊಮ್ಮೆ… ಮಗದೊಮ್ಮೆ… 27 ವರ್ಷಗಳ ಬಳಿಕ ಟ್ರೋಫಿ ಮೇಲೆ ಸೌತ್ ಆಫ್ರಿಕಾ ಕಣ್ಣು

WTC Final 2025: ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ಹಾಗೂ ಸೌತ್ ಆಫ್ರಿಕಾ (South Africa) ತಂಡಗಳು ಮುಖಾಮುಖಿಯಾಗಲಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಉಭಯ ತಂಡಗಳು ಬಲಿಷ್ಠ ಪಡೆಯನ್ನು ಪ್ರಕಟಿಸಿದೆ.

ಮತ್ತೊಮ್ಮೆ... ಮಗದೊಮ್ಮೆ... 27 ವರ್ಷಗಳ ಬಳಿಕ ಟ್ರೋಫಿ ಮೇಲೆ ಸೌತ್ ಆಫ್ರಿಕಾ ಕಣ್ಣು
South Africa

Updated on: Jun 09, 2025 | 11:10 AM

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ (WTC Final) ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್​ ಕ್ರಿಕೆಟ್​ನ ಫೈನಲ್ ಫೈಟ್ ಜೂನ್ 11 ರಿಂದ ಶುರುವಾಗಲಿದೆ. ಲಂಡನ್​ನ ಲಾರ್ಡ್ಸ್​ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಗೆದ್ದರೆ 27 ವರ್ಷಗಳ ಕಾಯುವಿಕೆ ಅಂತ್ಯಗೊಳ್ಳಲಿದೆ. ಏಕೆಂದರೆ ಸೌತ್ ಆಫ್ರಿಕಾ ತಂಡ ಐಸಿಸಿ ಟ್ರೋಫಿ ಗೆದ್ದು ಬರೋಬ್ಬರಿ 27 ವರ್ಷಗಳೇ ಕಳೆದಿವೆ.

ಸೌತ್ ಆಫ್ರಿಕಾ ತಂಡವು ಕೊನೆಯ ಬಾರಿ ಐಸಿಸಿ ಟ್ರೋಫಿ ಗೆದ್ದಿರುವುದು 1998 ರಲ್ಲಿ. ಢಾಕಾದಲ್ಲಿ ನಡೆದ ಐಸಿಸಿ ನಾಕೌಟ್ ಟೂರ್ನಿಯ ( ಈಗಿನ ಚಾಂಪಿಯನ್ಸ್ ಟ್ರೋಫಿ) ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 49.3 ಓವರ್​ಗಳಲ್ಲಿ 245 ರನ್​ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಪರ ಆರಂಭಿಕ ದಾಂಡಿಗ ಮಾರ್ಕ್​ ರಿಂಡಲ್ 49 ರನ್ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಜಾಕ್ ಕಾಲಿಸ್ 37 ರನ್​ಗಳ ಕೊಡುಗೆ ನೀಡಿದರು. ಆ ಬಳಿಕ ಬಂದ ಹ್ಯಾನ್ಸಿ ಕ್ರೊನಿಯೆ ಅಜೇಯ 60 ರನ್ ಬಾರಿಸುವ ಮೂಲಕ 47 ಓವರ್​ಗಳಲ್ಲಿ ಸೌತ್ ಆಫ್ರಿಕಾ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಮೂಲಕ ಸೌತ್ ಆಫ್ರಿಕಾ ತಂಡವು ಚೊಚ್ಚಲ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಇದಾದ ಬಳಿಕ ಆಫ್ರಿಕಾ ಪಡೆಗೆ ಐಸಿಸಿ ಫೈನಲ್ ಎಂಬುದು ಮರೀಚಿಕೆಯಾಗಿಯೇ ಉಳಿಯಿತು. ಆದರೆ 2024ರ ಟಿ20 ವಿಶ್ವಕಪ್ ಫೈನಲ್​ಗೆ ಎಂಟ್ರಿ ಕೊಟ್ಟಿದ್ದ ಸೌತ್ ಆಫ್ರಿಕಾ, ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಸೋಲನುಭವಿಸಿತು.

ಇದೀಗ ಮತ್ತೊಮ್ಮೆ ಫೈನಲ್​ ಸುತ್ತಿನಲ್ಲಿ ಕಣಕ್ಕಿಳಿಯಲು ಸೌತ್ ಆಫ್ರಿಕಾ ತಂಡ ಸಜ್ಜಾಗಿದೆ. ಅದು ಕೂಡ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಎಂಬುದು ವಿಶೇಷ. ಅಂದರೆ ಈ ಬಾರಿ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ ಸೌತ್ ಆಫ್ರಿಕಾ. ಈ ಮೂಲಕ 27 ವರ್ಷಗಳ ಕಪ್ ಗೆಲ್ಲುವ ಕನಸನ್ನು ಸೌತ್ ಆಫ್ರಿಕಾ ನನಸಾಗಿಸಲಿದೆಯಾ ಕಾದು ನೋಡಬೇಕಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ಉಭಯ ತಂಡಗಳು:

ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್ , ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್, ಸ್ಯಾಮ್ ಕೊನ್​ಸ್ಟಾಸ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಬ್ಯೂ ವೆಬ್‌ಸ್ಟರ್, ಅಲೆಕ್ಸ್ ಕ್ಯಾರಿ , ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್, ನಾಥನ್ ಲಿಯಾನ್ , ಸ್ಕಾಟ್ ಬೋಲ್ಯಾಂಡ್, ಮ್ಯಾಥ್ಯೂ ಕುಹ್ನೆಮನ್.

ಇದನ್ನೂ ಓದಿ: ಚಾಂಪಿಯನ್ಸ್​ ಲೀಗ್ ಆಯೋಜನೆಗೆ ಭರ್ಜರಿ ಪ್ಲ್ಯಾನ್

ಸೌತ್ ಆಫ್ರಿಕಾ ಟೆಸ್ಟ್ ತಂಡ: ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಐಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಮಾರ್ಕೊ ಯಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಕಾರ್ಬಿನ್ ಬಾಷ್, ಕೈಲ್ ವೆರ್ರಿನ್ನೆ, ಡೇವಿಡ್ ಬೆಡಿಂಗ್‌ಹ್ಯಾಮ್, ಟ್ರಿಸ್ಟಾನ್ ಸ್ಟಬ್ಸ್, ರಯಾನ್ ರಿಕಲ್ಟನ್, ಸೆನುರಾನ್ ಮುತ್ತುಸಾಮಿ, ಡೇನ್ ಪೀಟರ್ಸನ್.