ಐಪಿಎಲ್ 2022 ರ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್ (SRH vs RR) ವಿರುದ್ದ ಹೀನಾಯವಾಗಿ ಸೋಲನುಭವಿಸಿತು. ಈ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಔಟಾದ ರೀತಿ ಹೊಸ ವಿವಾದವನ್ನು ಹುಟ್ಟು ಹಾಕಿದೆ. ಅಲ್ಲದೆ ಅಂಪೈರ್ ನೀಡಿದ ತೀರ್ಪಿನ ಬಗ್ಗೆ ಅಭಿಮಾನಿಗಳು ಟ್ವಿಟರ್‌ನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ 3ನೇ ಅಂಪೈರ್‌ನ ಈ ನಿರ್ಧಾರದ ವಿರುದ್ದ ಹೈದರಾಬಾದ್ ಕೋಚ್ ಟಾಮ್ ಮೂಡಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್ಆರ್ಹೆಚ್ ತಂಡದ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ, ಪ್ರಸಿದ್ಧ ಕೃಷ್ಣ ಅವರ ಚೆಂಡು ಕೇನ್ ವಿಲಿಯಮ್ಸನ್ ಅವರ ಬ್ಯಾಟ್‌ನ ಹೊರ ಅಂಚಿಗೆ ಬಡಿದು ವಿಕೆಟ್ ಕೀಪರ್ನತ್ತ ಚಿಮ್ಮಿತ್ತು. ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಕ್ಯಾಚ್ ಹಿಡಿಯಲು ಯತ್ನಿಸಿದರೂ ಚೆಂಡು ಗ್ಲೌಸ್ನಿಂದ ಜಾರಿತು.
ಚೆಂಡು ಸ್ಯಾಮ್ಸನ್ ಕೈಯಿಂದ ಸ್ಲಿಪ್ನತ್ತ ಚಿಮ್ಮುತ್ತಿದ್ದಂತೆ ಸ್ಲಿಪ್ನಲ್ಲಿ ನಿಂತಿದ್ದ ದೇವದತ್ ಪಡಿಕ್ಕಲ್ ಮುಂದೆ ಡೈವ್ ಮಾಡಿ ಚೆಂಡನ್ನು ಹಿಡಿದರು. ಆದರೆ ಫೀಲ್ಡ್ ಅಂಪೈರ್‌ಗೆ ಕ್ಯಾಚ್ ಸರಿಯಾಗಿ ಹಿಡಿದಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸಂಪೂರ್ಣವಾಗಿ ಖಚಿತತೆ ಇರಲಿಲ್ಲ. ಹಾಗಾಗಿ ಮೂರನೇ ಅಂಪೈರ್‌ಗೆ ಮನವಿ ಸಲ್ಲಿಸಲಾಯಿತು. ರಿಪ್ಲೇಗಳನ್ನು ಪರಿಶೀಲಿಸಿದ ಟಿವಿ ಅಂಪೈರ್ ವಿಲಿಯಮ್ಸನ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ರಿಪ್ಲೇ ವೇಳೆ ಚೆಂಡು ಪಡಿಕ್ಕಲ್ ಅವರ ಕೈಗೆ ಹೋಗುವ ಮೊದಲು ನೆಲಕ್ಕೆ ತಾಗಿರುವುದು ಕಂಡು ಬಂದಿದೆ. ಇದಾಗ್ಯೂ 3ನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದು ಅಚ್ಚರಿಗೆ ಕಾರಣವಾಗಿತ್ತು.
ಇದೀಗ ಎಸ್ಆರ್ಹೆಚ್ ತಂಡದ ಕೋಚ್ ಟಾಮ್ ಮೂಡಿ ಅಂಪೈರ್ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಪಂದ್ಯದ ನಂತರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೂಡಿ, “ಕೇನ್ ಅವರನ್ನು ಔಟ್ ನೀಡಿರುವುದು ನಮಗೆ ತುಂಬಾ ಆಶ್ಚರ್ಯವಾಯಿತು. ವಿಶೇಷವಾಗಿ ನಾವು ರಿಪ್ಲೇಗಳನ್ನು ಪರಿಶೀಲಿಸಿ ಔಟ್ ಎಂದಿರುವುದೇ ಅಚ್ಚರಿ. ಏಕೆಂದರೆ ಚೆಂಡು ನೆಲಕ್ಕೆ ಬಡಿದಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಇದಾಗ್ಯೂ ಔಟ್ ನೀಡಿರುವುದೇಕೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಟಾಮ್ ಮೂಡಿ ಹೇಳಿದ್ದಾರೆ.
How this is OUT ?
Horrible decision by Umpire K Ananthapadmanabhan.
Another umpiring blunder in #IPL .#IPL2022 #Williamson #SunrisersHyderabad #SRH #SRHvRR #Pune #SanjuSamson pic.twitter.com/5dlxq38fCO— Mr A ?? (@amMrfeed) March 29, 2022
ಈ ಒಂದು ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಿಸಿತು. ಏಕೆಂದರೆ ವಿಲಿಯಮ್ಸನ್ ಅವರು ಹೈದರಾಬಾದ್‌ನ ಬ್ಯಾಟಿಂಗ್‌ನಲ್ಲಿ ಪ್ರಮುಖ ಕೊಂಡಿಯಾಗಿದ್ದರು. ಅವರ ಔಟಾದ ನಂತರ ಹೈದರಾಬಾದ್‌ನ ಬ್ಯಾಟಿಂಗ್ ಸಂಪೂರ್ಣವಾಗಿ ತತ್ತರಿಸಿತು. ಇದಾದ ಬಳಿಕ 211 ರನ್ ಗಳ ಗುರಿ ಬೆನ್ನತ್ತಿದ ಹೈದರಾಬಾದ್ 10 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 37 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದಾದ ನಂತರ ಏಡೆನ್ ಮಾರ್ಕ್ರಾಮ್ ಅರ್ಧಶತಕ ಬಾರಿಸಿದರು. ಹಾಗೆಯೇ ವಾಷಿಂಗ್ಟನ್ ಸುಂದರ್ ಕೇವಲ 14 ಎಸೆತಗಳಲ್ಲಿ 40 ರನ್ ಗಳಿಸಿದರು. ಇದಾಗ್ಯೂ ಎಸ್ಆರ್ಹೆಚ್ ತಂಡವು 61 ರನ್ಗಳಿಂದ ಸೋಲನುಭವಿಸಬೇಕಾಯಿತು.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು