
ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಆತಿಥೇಯ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ (New Zealand vs Sri Lanka) ನಡುವಿನ 2026 ರ ಟಿ20 ವಿಶ್ವಕಪ್ನ (T20 World Cup 2026) ಸೂಪರ್ 8 ಸುತ್ತಿನ ಪಂದ್ಯವನ್ನು ಕಿವೀಸ್ ಪಡೆ 61 ರನ್‌ಗಳಿಂದ ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡ ಸೆಮಿಫೈನಲ್ ಸುತ್ತಿಗೆ ಮತ್ತಷ್ಟು ಹತ್ತಿರವಾದರೆ, ಆತಿಥೇಯ ಶ್ರೀಲಂಕಾ ಸೂಪರ್ 8 ಸುತ್ತಿನಲ್ಲಿ ಸತತ ಎರಡನೇ ಸೋಲಿನೊಂದಿಗೆ ಟಿ20 ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 168 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಕನ್ನಡಿಗ ರಚಿನ್ ರವೀಂದ್ರ ಸ್ಪಿನ ಮೋಡಿಗೆ ತತ್ತರಿಸಿ ಕೇವಲ 107 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 168 ರನ್ ಗಳಿಸಿತು. ತಂಡದ ಕೋಲ್ ಮೆಕಾಂಚಿ ಮತ್ತು ಮಿಚೆಲ್ ಸ್ಯಾಂಟ್ನರ್ 7ನೇ ವಿಕೆಟ್ಗೆ ದಾಖಲೆಯ 47 ಎಸೆತಗಳಲ್ಲಿ 84 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು 168 ರನ್‌ಗಳಿಗೆ ಕೊಂಡೊಯ್ದರು. ಒಂದು ಹಂತದಲ್ಲಿ 84 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕಿವೀಸ್ಗೆ ಆಸರೆಯಾದ ಇವರಿಬ್ಬರು ಕೊನೆಯ 4 ಓವರ್‌ಗಳಲ್ಲಿ 70 ರನ್ ಕಲೆಹಾಕಿದರು.
169 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ಪವರ್‌ಪ್ಲೇನಲ್ಲಿಯೇ ಶರಣಾಯಿತು. ಪವರ್‌ಪ್ಲೇನಲ್ಲಿ ತಂಡ ಕೇವಲ 20 ರನ್ ಗಳಿಸಲಷ್ಟೇ ಶಕ್ತವಾಯಿತು. ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ 4 ವಿಕೆಟ್‌ಗಳನ್ನು ಕಬಳಿಸಿದರು. ಅಂತಿಮವಾಗಿ ಶ್ರೀಲಂಕಾ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 107 ರನ್‌ಗಳಿಸಿ 61 ರನ್‌ಗಳಿಂದ ಪಂದ್ಯ ಸೋತಿರು. ಈ ಸೋಲಿನೊಂದಿಗೆ, ಶ್ರೀಲಂಕಾ ಸೆಮಿಫೈನಲ್ ರೇಸ್ನಿಂದ ಹೊರಬಿದ್ದರೆ, ನ್ಯೂಜಿಲೆಂಡ್ ಸೂಪರ್ -8 ರ ಗ್ರೂಪ್ ಬಿ ನಲ್ಲಿ 3 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ 2 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ತಲುಪಿದೆ. ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ.
SL vs NZ: 6,6,6,6.. ಲಂಕಾ ವಿರುದ್ಧ ಅಬ್ಬರಿಸಿ ವಿಶೇಷ ದಾಖಲೆ ಬರೆದ ಮಿಚೆಲ್ ಸ್ಯಾಂಟ್ನರ್
ಪಾಕಿಸ್ತಾನ ತಂಡವು ಸೂಪರ್ 8 ಗ್ರೂಪ್ ಬಿ ಪಾಯಿಂಟ್ ಪಟ್ಟಿಯಲ್ಲಿ ಕೇವಲ ಒಂದು ಪಾಯಿಂಟ್ ಮಾತ್ರ ಹೊಂದಿರುವುದರಿಂದ ತಂಡವು ಹೊರಹೋಗುವ ಸಾಧ್ಯತೆಗಳು ಹೆಚ್ಚಾಗಿದೆ. ಅದರ ರನ್ ದರ -0.461 ಆಗಿದ್ದು, ಅತ್ಯಂತ ಕಳಪೆಯಾಗಿದೆ. ಶ್ರೀಲಂಕಾ ವಿರುದ್ಧದ ತನ್ನ ಕೊನೆಯ ಸೂಪರ್ 8 ಪಂದ್ಯವನ್ನು ಗೆದ್ದರೂ ಸಹ, ಅದರ ರನ್ ರೆಟ್ ನ್ಯೂಜಿಲೆಂಡ್‌ಗಿಂತ ಹೆಚ್ಚಾಗುವ ಸಾಧ್ಯತೆ ಕಡಿಮೆ. ಈ ಸನ್ನಿವೇಶದಲ್ಲಿ, ಪಾಕಿಸ್ತಾನ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿಲ್ಲವಾದರೂ ಸೆಮಿಫೈನಲ್ಗೇರುವ ಸಾಧ್ಯತೆಗಳು ಅಸಾಧ್ಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 pm, Wed, 25 February 26