110 ರನ್‌ಗಳ ಗುರಿ… 94 ರನ್ಗಳಿಸಿ ಗೆದ್ದ TKR!
Caribbean Premier League 2026: ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು ಶುಭಾರಂಭ ಮಾಡಿದೆ. ಈ ಟೂರ್ನಿಯ ದ್ವಿತೀಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವು 20 ಓವರ್‌ಗಳಲ್ಲಿ 109 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ 15 ಓವರ್‌ಗಳಲ್ಲಿ 94 ರನ್ಗಳಿಸಿದರೂ ವಿಜಯವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್ನ (CPL 2026) 2ನೇ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ (TKR) ತಂಡ ಭರ್ಜರಿ ಜಯ ಸಾಧಿಸಿದೆ. ಅದು ಕೂಡ ಕೇವಲ 94 ರನ್ಗಳಿಸುವ ಮೂಲಕ. ಕಿಂಗ್ಸ್ಟೌನ್ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ನಾಯಕ ಅಕೀಲ್ ಹೊಸೈನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಟಿಕೆಆರ್ ಬೌಲರ್ಗಳ ಮಾರಕ ದಾಳಿ ಮುಂದೆ ರನ್ಗಳಿಸಲು ಪರದಾಡಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 109 ರನ್ಗಳಿಸಲಷ್ಟೇ ಶಕ್ತವಾಯಿತು.
ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡದ ಪರ ಕೆವಿನ್ ವಿಕಾಮ್ (38 ರನ್, 44 ಎಸೆತ) ಏಕಾಂಗಿ ಹೋರಾಟ ನಡೆಸಿದರೆ, ಉಳಿದ ಆಟಗಾರರು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಟ್ರಿನ್‌ಬಾಗೊ ಪರ ಮಾಂತ್ರಿಕ ಬೌಲಿಂಗ್ ಪ್ರದರ್ಶಿಸಿದ ಸುನಿಲ್ ನರೈನ್ ಕೇವಲ 7 ರನ್ ನೀಡಿ 3 ಪ್ರಮುಖ ವಿಕೆಟ್ ಉರುಳಿಸಿದರೆ, ಟೆರೆನ್ಸ್ ಹಿಂಡ್ಸ್ 33 ರನ್‌ಗಳಿಗೆ 3 ವಿಕೆಟ್ ಪಡೆದು ಸಾಥ್ ನೀಡಿದರು.
ಮಳೆ ತಂದ ಮುನ್ನಡೆ, ಟಿಕೆಆರ್ಗೆ ಜಯ:
110 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಟ್ರಿನ್‌ಬಾಗೊ ನೈಟ್ ರೈಡರ್ಸ್ ಉತ್ತಮ ಆರಂಭ ಪಡೆಯಿತು. ಮ್ಯಾಥ್ಯೂ ಬ್ರೀಟ್ಝ್ಕೆ ಅಜೇಯ 35 ರನ್ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಈ ಮೂಲಕ ಟಿಕೆಆರ್ ತಂಡವು 15 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದ್ದಾಗ ಪಂದ್ಯಕ್ಕೆ ಭಾರೀ ಮಳೆ ಅಡ್ಡಿಪಡಿಸಿತು.
ಸತತವಾಗಿ ಸುರಿದ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಅಲ್ಲದೆ ಫಲಿತಾಂಶ ನಿರ್ಧಾರಕ್ಕಾಗಿ ಡಿಎಲ್ಎಸ್ ನಿಯಮದ ಮೊರೆ ಹೋಗಲಾಯಿತು. ಈ ವೇಳೆ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು ನಿಗದಿತ ಪಾರ್ ಸ್ಕೋರ್‌ಗಿಂತ 19 ರನ್‌ಗಳ ಮುನ್ನಡೆಯಲ್ಲಿದ್ದ ಕಾರಣ ಅಧಿಕೃತವಾಗಿ ವಿಜೇತರೆಂದು ಘೋಷಿಸಲಾಯಿತು.
ಅಂದರೆ 110 ರನ್‌ಗಳ ಗುರಿ ಪಡೆದಿದ್ದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು ಪಂದ್ಯ ಸ್ಥಗಿತಗೊಂಡಾಗ 94 ರನ್ಗಳಿಸಿದ್ದರೂ ಡಿಎಲ್ಎಸ್ ನಿಯಮದ ಪ್ರಕಾರ ವಿಜಯಿಯಾಗಿ ಹೊರಹೊಮ್ಮಿದರು. ಈ ಮೂಲಕ ಟ್ರಿನ್‌ಬಾಗೊ ನೈಟ್ ರೈಡರ್ಸ್ ನೈಟ್ ರೈಡರ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ನ 14ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.
ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಪ್ಲೇಯಿಂಗ್ 11: ಜಾನ್ಸನ್ ಚಾರ್ಲ್ಸ್ , ಆಂಡ್ರೆ ಫ್ಲೆಚರ್ (ವಿಕೆಟ್ ಕೀಪರ್ ), ಕೈಲ್ ಮೇಯರ್ಸ್ , ಅಲಿಕ್ ಅಥನಾಝ್ , ಜೇಸನ್ ಹೋಲ್ಡರ್ (ನಾಯಕ) , ಕೆವಿನ್ ವಿಕ್ಹ್ಯಾಮ್ , ನವೀನ್ ಬಿದೈಸಿ , ಆಶ್ಮೀದ್ ನೆಡ್ , ಓಬೆಡ್ ಮೆಕಾಯ್ , ಸೌರಭ್ ನೇತ್ರವಲ್ಕರ್ , ವಕಾರ್ ಸಲಾಂಖೈಲ್.
ಇದನ್ನೂ ಓದಿ: ಭಾರತ ಟೆಸ್ಟ್ ತಂಡದ ಐವರು ಆಟಗಾರರು ಗಾಯಾಳು!
ಟ್ರಿನ್‌ಬಾಗೊ ನೈಟ್ ರೈಡರ್ಸ್ ಪ್ಲೇಯಿಂಗ್ 11: ಅಲೆಕ್ಸ್ ಹೇಲ್ಸ್ , ಕಾಲಿನ್ ಮನ್ರೋ , ಮ್ಯಾಥ್ಯೂ ಟ್ರಂಪ್ , ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಮ್ಯಾಥ್ಯೂ ಬ್ರೀಟ್ಝ್ಕೆ, ಟೆರೆನ್ಸ್ ಹಿಂದ್ಸ್ , ಅಕೀಲ್ ಹೊಸೈನ್ (ನಾಯಕ) , ಸುನಿಲ್ ನರೈನ್ , ಡೊಮಿನಿಕ್ ಡ್ರೇಕ್ಸ್ , ಜೈದ್ ಗೂಲಿ , ಡೆಕ್ಸ್ಟರ್ ಸ್ವೀನ್.




