Mohammed Siraj: ಬಾಲ್ ಹಾಕಲು ಬಂದಾಗ ಕ್ರೀಸ್ ಬಿಟ್ಟು ನಿಂತ ಸ್ಮಿತ್: ಕೋಪದಲ್ಲಿ ಸಿರಾಜ್ ಏನು ಮಾಡಿದ್ರು ನೋಡಿ
India vs Australia, WTC Final 2023: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯುತ್ತಿದೆ. ಮೊಹಮ್ಮದ್ ಸಿರಾಜ್ ಹಾಗೂ ಸ್ಟೀವ್ ಸ್ಮಿತ್ ನಡುವೆ ಚಿಕ್ಕ ಮಟ್ಟದ ಚಕಮಕಿ ನಡೆಯಿತು.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ (WTC Final) ಭಾರತ ವಿರುದ್ಧ ಆಸ್ಟ್ರೇಲಿಯಾ (India vs Australia) ತಂಡ ಬಿಗಿ ಹಿಡಿತ ಸಾಧಿಸಿದೆ. ಮೊದಲ ಎರಡೂ ದಿನ ಯಶಸ್ಸು ಸಾಧಿಸಿರುವ ಕಾಂಗರೂ ಪಡೆ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಭರ್ಜರಿ ಪ್ರದರ್ಶನ ತೋರಿದೆ. ಆಸೀಸ್ ಪಡೆಯನ್ನು 469 ರನ್ಗಳಿಗೆ ಆಲೌಟ್ ಮಾಡಿ ತನ್ನ ಪ್ರಥಮ ಇನ್ನಿಂಗ್ಸ್ ಶುರು ಮಾಡಿರುವ ಭಾರತ ದ್ವಿತೀಯ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದೆಯಷ್ಟೆ. 318 ರನ್ಗಳ ಹಿನ್ನಡೆಯಲ್ಲಿದೆ. ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿರುವ ಟೀಮ್ ಇಂಡಿಯಾಕ್ಕೆ ಅಜಿಂಕ್ಯಾ ರಹಾನೆ (Ajinkya Rahane) ಆಸರೆಯಾಗಿ ನಿಂತಿದ್ದಾರೆ. ಡಬ್ಲ್ಯೂಟಿಸಿ ಫೈನಲ್ನ ದ್ವಿತೀಯ ದಿನ ಕೂಡ ಕೆಲ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು.
ಮೊಹಮ್ಮದ್ ಸಿರಾಜ್ ಹಾಗೂ ಸ್ಟೀವ್ ಸ್ಮಿತ್ ನಡುವೆ ಚಿಕ್ಕ ಮಟ್ಟದ ಚಕಮಕಿ ನಡೆಯಿತು. 86ನೇ ಓವರ್ನಲ್ಲಿ ಮೊಹಮ್ಮದ್ ಸಿರಾಜ್ 4ನೇ ಎಸೆತ ಹಾಕಲು ಓಡಿ ಬರುತ್ತಿದ್ದರು. ಇನ್ನೇನು ಚೆಂಡು ಎಸೆಯ ಬೇಕು ಎನ್ನುವಷ್ಟರಲ್ಲಿ ಸ್ಮಿತ್ ಸ್ಟ್ರೈಕ್ನಿಂದ ಹಿಂದೆ ಸರಿದಿದ್ದಾರೆ. ಈರೀತಿ ಸ್ಮಿತ್ ಮಾಡಿದ್ದು ಇದೇ ಮೊದಲಲ್ಲ. ಈ ಪಂದ್ಯದಲ್ಲಿ ಅನೇಕ ಬಾರಿ ಚೆಂಡು ಎಸೆಯಲು ಬಂದಾಗ ಕ್ರೀಸ್ ನಿಂದ ಹಿಂದಚೆ ಸರಿಯುತ್ತಿದ್ದರು. ಈ ಬಾರಿ ತಾಳ್ಮೆ ಕಳೆದುಕೊಂಡ ಸಿರಾಜ್, ವಿಕೆಟ್‌ಗೆ ಚೆಂಡೆಸೆದಿದ್ದಾರೆ.
Rohit Sharma: ಮತ್ತೊಮ್ಮೆ ಕೈ ಕೊಟ್ಟ ರೋಹಿತ್ ಶರ್ಮಾ..!
View this post on Instagram
ಇಷ್ಟಕ್ಕೆ ಸುಮ್ಮನಾಗದ ಸಿರಾಜ್ ಅವರು ಸ್ಮಿತ್‌ಗೆ ಖಡಕ್ ವಾರ್ನಿಂಗ್ ಕೂಡ ನೀಡಿದ್ದಾರೆ. ಗಮನ ವಿಕೆಟ್‌ನ ಮುಂದಿರಲಿ ಬೇರೆಡೆಗಲ್ಲ ಎಂದು ಸ್ಮಿತ್‌ಗೆ ಖಾರವಾಗಿ ಹೇಳಿದ ಘಟನೆ ಕೂಡ ನಡೆಯಿತು. ಸ್ಪೈಡರ್ ಕ್ಯಾಮೆರಾದಿಂದ ತಮ್ಮ ಏಕಾಗ್ರತೆಗೆ ತೊಂದರೆಯಾಗುತ್ತಿದೆ. ಹೀಗಾಗಿ ಈರೀತಿ ಮಾಡಬೇಕಾಗಿ ಬಂತು ಎಂಬುದು ಸ್ಮಿತ್ ದೂರಾಗಿತ್ತು.
ಸ್ಮಿತ್ರಿಂದ ಶತಕದ ಸಾಧನೆ:
4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಮಿತ್ 268 ಎಸೆತಗಳಲ್ಲಿ 121 ರನ್ ಬಾರಿಸಿ ಶತಕ ಸಿಡಿಸುವುದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್ನ ಜೋ ರೂಟ್ ಭಾರತದ ವಿರುದ್ಧ 9 ಶತಕ ಬಾರಿಸಿದ್ದರು. ಇದೀಗ ಸ್ಮಿತ್ ಕೂಡ 9 ಶತಕ ಸಿಡಿಸಿ ರೂಟ್ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಂತೆಯೆ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಆಸ್ಟ್ರೇಲಿಯಾ ಆಟಗಾರ ಎಂಬ ದಾಖಲೆ ಸ್ಮಿತ್ ಪಾಲಾಗಿದೆ. ಆಸ್ಟ್ರೇಲಿಯಾ ಪರ ಟೆಸ್ಟ್ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ (31) ಮೂರನೇ ಸ್ಥಾನಕ್ಕೇರಿದ್ದಾರೆ. ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಸ್ಟೀವ್ ಸ್ಮಿತ್ 2000 ರನ್ ಕೂಡ ಪೂರೈಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ