Sunil Gavaskar: ವಿರಾಟ್ ಕೊಹ್ಲಿಯ ಬ್ಯಾಟಿಂಗ್ ವೈಫಲ್ಯಕ್ಕೆ ಇದುವೇ ಕಾರಣ..!
Virat Kohli: ಇಂಗ್ಲೆಂಡ್ ವಿರುದ್ದದ ಸರಣಿಯ ಐದು ಇನ್ನಿಂಗ್ಸ್ ಗಳಲ್ಲಿ ವಿರಾಟ್ ಕೊಹ್ಲಿ ಕೇವಲ ಒಂದು ಅರ್ಧ ಶತಕ ಮಾತ್ರ ಗಳಿಸಿದ್ದಾರೆ. ಇನ್ನೆರಡು ಇನಿಂಗ್ಸ್ಗಳಲ್ಲಿ 42 ಮತ್ತು 20 ರನ್ಗಳಿಸಿ ಔಟ್ ಆಗಿದ್ದಾರೆ.
ಟೀಮ್ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ಶತಕಗಳಿಸಿ ಎರಡು ವರ್ಷಗಳು ಕಳೆದಿವೆ. ಅವರ ಶತಕದ ಕಾಯುವಿಕೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ನೂರನೇ ಶತಕದ ಕಾಯುವಿಕೆಯ ಸಮಯವನ್ನೂ ಮೀರಿದೆ. ಈ ಎರಡು ವರ್ಷಗಳಲ್ಲಿ ವಿರಾಟ್ ಉತ್ತಮ ಇನ್ನಿಂಗ್ಸ್ ಆಡಿಲ್ಲವೆಂದಲ್ಲ. ಉತ್ತಮ ಆರಂಭವನ್ನು ಪಡೆದರೂ ಅದನ್ನು ಶತಕವನ್ನಾಗಿಸಿ ಪರಿವರ್ತಿಸಲು ಕೊಹ್ಲಿಗೆ ಸಾಧ್ಯವಾಗುತ್ತಿಲ್ಲ. ಅಷ್ಟಕ್ಕೂ ಈ ಸಮಸ್ಯೆಗೆ ಕಾರಣವೇನು? ರನ್ ಮೆಷಿನ್ ಬ್ಯಾಟ್ನಿಂದ ಸತತ ವೈಫಲ್ಯ ಏಕೆ ಮೂಡಿಬರುತ್ತಿದೆ ಎಂಬುದನ್ನು ಲಿಟಲ್ ಮಾಸ್ಟರ್, ಟೆಸ್ಟ್ ಸ್ಪೆಷಲಿಸ್ಟ್ ಸುನಿಲ್ ಗವಾಸ್ಕರ್ (Sunil Gavaskar) ವಿವರಿಸಿದ್ದಾರೆ. ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ವಿಶ್ಲೇಷಣೆ ವೇಳೆ ಮಾತನಾಡಿದ ಗವಾಸ್ಕರ್, ಕೊಹ್ಲಿ ಬ್ಯಾಟಿಂಗ್ನ ವೈಫಲ್ಯಗಳನ್ನು ಎತ್ತಿ ತೋರಿಸಿದರು. ಇಂತಹ ಸಣ್ಣ ತಪ್ಪುಗಳನ್ನು ಸರಿ ಮಾಡಿಕೊಂಡರೆ ಖಂಡಿತವಾಗಿಯೂ ಮತ್ತೆ ಟ್ರ್ಯಾಕ್ಗೆ ಮರಳಿದ್ದಾರೆ ಎಂದು ವಿವರಿಸಿದರು.
ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಆಫ್-ಸ್ಟಂಪ್‌ನ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಹಾಗೆಯೇ ಕ್ರೀಸ್‌ನಲ್ಲಿ ಹೆಜ್ಜೆ ಮುಂದಿಡುತ್ತಿದ್ದಾರೆ. ಈ ಎರಡು ಸಣ್ಣ ತಪ್ಪುಗಳು ಕೊಹ್ಲಿಯನ್ನು ಔಟ್ ಮಾಡುವಲ್ಲಿ ಎದುರಾಳಿಗಳಿಗೆ ಸಹಾಯಕವಾಗುತ್ತಿದೆ. ಹೀಗಾಗಿ ಈ ಎರಡು ತಪ್ಪುಗಳ ಬಗ್ಗೆ ವಿರಾಟ್ ಕೊಹ್ಲಿ ಮತ್ತಷ್ಟು ಎಚ್ಚರಿಕೆವಹಿಸಬೇಕಾಗಿದೆ ಎಂದು ಗವಾಸ್ಕರ್ ತಿಳಿಸಿದ್ದಾರೆ.
ಮಾತು ಮುಂದುವರೆಸಿದ ಗವಾಸ್ಕರ್, ಕೊಹ್ಲಿ ಚೆಂಡನ್ನು ಹತ್ತಿರಕ್ಕೆ ಬರುವ ಮೊದಲೇ ತಲುಪಲು ಪ್ರಯತ್ನಿಸುತ್ತಿದ್ದಾರೆ. ಪದೇ ಪದೇ ದೂರದಿಂದ ಚೆಂಡನ್ನು ಆಡುತ್ತಿದ್ದು, ಚೆಂಡು ಬರುವ ಮೊದಲೇ ತನ್ನ ಬ್ಯಾಟ್ ಅನ್ನು ಬಾಲ್ನತ್ತ ತಳ್ಳುತ್ತಿದ್ದಾರೆ. ಹೀಗಾಗಿಯೇ ಚೆಂಡು ಬ್ಯಾಟ್‌ನ ತುದಿಗೆ ತಗುಲಿ ವಿಕೆಟ್ ಕೀಪರ್ ಅಥವಾ ಸ್ಲಿಪ್ ಫೀಲ್ಡರ್ ಕೈ ಸೇರುತ್ತಿದೆ. ಇದೇ ತಪ್ಪಿನಿಂದಾಗಿ ಈ ಸರಣಿಯಲ್ಲೂ ಕೊಹ್ಲಿ ಬೇಗನೆ ವಿಕೆಟ್ ಒಪ್ಪಿಸುತ್ತಿದ್ದಾರೆ ಎಂದು ಲಿಟಲ್ ಮಾಸ್ಟರ್ ಅಭಿಪ್ರಾಯಪಟ್ಟರು.
‘ವಿರಾಟ್ ಕೊಹ್ಲಿ ಈ ಹಿಂದೆ ತಮ್ಮ ದೇಹ ಭಾಗದತ್ತ ಬರುತ್ತಿದ್ದ ಚೆಂಡುಗಳನ್ನು ಹೆಚ್ಚಾಗಿ ಎದುರಿಸುತ್ತಿದ್ದರು. ಇದರಿಂದಾಗಿ ಅವರು ಹೆಚ್ಚಿನ ರನ್ ಗಳಿಸಿದ್ದಾರೆ. ಇದೀಗ ಅವರು ಬ್ಯಾಟಿಂಗ್ ಶೈಲಿ ಬದಲಿಸಿದರೂ ಅದರಿಂದ ಯಾವುದೇ ಹಾನಿಯಾಗಿಲ್ಲ. ಆದರೆ ಯಾವುದೇ ಬ್ಯಾಟ್ಸ್‌ಮನ್ ಶಾಟ್ ಹೊಡೆಯಲು ದೂರದ ಚೆಂಡನ್ನು ಮುಟ್ಟಿ ಔಟ್ ಆಗುವುದನ್ನು ಒಂದು ಕೊರತೆಯೆಂದು ಪರಿಗಣಿಸಲಾಗುತ್ತದೆ. ಅಂತಹ ತಪ್ಪನ್ನು ಕೊಹ್ಲಿ ಮಾಡುತ್ತಿದ್ದಾರೆ. ಹೀಗಾಗಿ ಆ ಶೈಲಿಯನ್ನು ಅವರು ಕೈ ಬಿಡುವುದು ಅಗತ್ಯವಾಗಿದೆ ಎಂದು ಸುನಿಲ್ ಗವಾಸ್ಕರ್ ತಿಳಿಸಿದರು.
ಪ್ರಸ್ತುತ ಇಂಗ್ಲೆಂಡ್ (India vs England Test) ವಿರುದ್ದದ ಸರಣಿಯ ಐದು ಇನ್ನಿಂಗ್ಸ್ ಗಳಲ್ಲಿ ವಿರಾಟ್ ಕೊಹ್ಲಿ ಕೇವಲ ಒಂದು ಅರ್ಧ ಶತಕ ಮಾತ್ರ ಗಳಿಸಿದ್ದಾರೆ. ಇನ್ನೆರಡು ಇನಿಂಗ್ಸ್ಗಳಲ್ಲಿ 42 ಮತ್ತು 20 ರನ್ಗಳಿಸಿ ಔಟ್ ಆಗಿದ್ದಾರೆ. ಅಂದರೆ ಐದರಲ್ಲಿ ಮೂರು ಇನಿಂಗ್ಸ್ನಲ್ಲಿ ಕೊಹ್ಲಿ ಉತ್ತಮ ಆರಂಭ ಪಡೆದಿದ್ದರು. ಆದರೆ ಅದನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ಎಡವುತ್ತಿದ್ದಾರೆ ಎನ್ನಬಹುದು. ಇನ್ನು ಟೀಮ್ ಇಂಡಿಯಾ ನಾಯಕ ಕೊನೆಯ ಬಾರಿ ಶತಕ ಬಾರಿಸಿದ್ದು 2019 ರಲ್ಲಿ. ಸಚಿನ್ ತೆಂಡೂಲ್ಕರ್ ಕೂಡ 100ನೇ ಶತಕ ಬಾರಿಸಲು ಒಂದು ವರ್ಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡಿದ್ದರು. ಇದೀಗ ಕೊಹ್ಲಿ ಶತಕದ ಬರ ಎದುರಿಸುತ್ತಿದ್ದು, ಇಂಗ್ಲೆಂಡ್ ವಿರುದ್ದದ ಮುಂದಿನ 2 ಪಂದ್ಯಗಳಲ್ಲಿ ಶತಕ ಬಾರಿಸಿ ಈ ಕೊರತೆಯನ್ನು ನೀಗಿಸುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ: IPL 2022: ಐಪಿಎಲ್ ಹೊಸ ತಂಡಗಳಿಗೆ ಮೂಲ ಬೆಲೆ ಫಿಕ್ಸ್: ಇಷ್ಟು ಮೊತ್ತ ನೀಡಿ ಖರೀದಿಸುವವರು ಯಾರು?
ಇದನ್ನೂ ಓದಿ: Afghanistan Cricket: ಅಫ್ಘಾನಿಸ್ತಾನದ ಕ್ರಿಕೆಟ್ ಕುರಿತಾಗಿ ಹೊಸ ಆದೇಶ ಹೊರಡಿಸಿದ ತಾಲಿಬಾನ್
(Sunil Gavaskar explains key area Virat Kohli needs to improve)