ವಿರಾಟ್ ಕೊಹ್ಲಿ (Virat Kohli) ಅವರ ಕಳಪೆ ಫಾರ್ಮ್ ಇಂಗ್ಲೆಂಡ್ ಪ್ರವಾಸದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತು. ಕೇವಲ ಭಾರತದ ಮಾಜಿ ಆಟಗಾರರು ಮಾತ್ರವಲ್ಲದೆ ವಿದೇಶಿ ದಿಗ್ಗಜ ಪ್ಲೇಯರ್ಸ್ ಕೂಡ ಕೊಹ್ಲಿ ಕಳಪೆ ಆಟದ ಬಗ್ಗೆ ಹೇಳಿಕೆ ನೀಡಿದರು. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar Azam) ಕೂಡ ಕೊಹ್ಲಿ ಆದಷ್ಟು ಬೇಗ ಲಯ ಕಂಡುಕೊಳ್ಳಲಿ ಎಂದು ಹೇಳಿದರು. ಇಂಗ್ಲೆಂಡ್ ವಿರದ್ಧದ ಟೆಸ್ಟ್ನ ಎರಡು ಇನ್ನಿಂಗ್ಸ್ನಲ್ಲಿ 11 ಮತ್ತು 10 ರನ್ ಗಳಿಸಿ ಔಟಾಗಿದ್ದ ಕೊಹ್ಲಿ ಆಡಿದ ಎರಡು ಟಿ20 ಪಂದ್ಯಗಳಲ್ಲೂ 1 ಮತ್ತು 11 ರನ್ಗೆ ನಿರ್ಗಮಿಸಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ 25 ಎಸೆತಗಳಲ್ಲಿ 16 ರನ್ಗೆ ಔಟಾದರೆ ಮೂರನೇ ಏಕದಿನದಲ್ಲಿ 17 ರನ್ಗೆ ಬ್ಯಾಟ್ ಕೆಳಗಿಟ್ಟರು. ಸದ್ಯ ಕೊಹ್ಲಿ ವೆಸ್ಟ್ ಇಂಡೀಸ್ (West Indies) ಪ್ರವಾಸಕ್ಕೆ ಆಯ್ಕೆಯಾಗದೆ ವಿಶ್ರಾಂತಿಯ ಮೊರೆ ಹೋಗಿದ್ದಾರೆ. ಈ ಬಗ್ಗೆ ಕೂಡ ಅನೇಕ ಭಿನ್ನಾಭಿಪ್ರಾಯಗಳು ಕೇಳಿಬರುತ್ತಿವೆ.
ಹೀಗಿರುವಾಗ ಕೆಲವರು ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳು ಸಲಹೆ ನೀಡುತ್ತಿದ್ದಾರೆ. ಇದೀಗ ಟೀಮ್ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಕೊಹ್ಲಿಗೆ ಕಿವಿ ಮಾತೊಂದನ್ನು ಹೇಳಿದ್ದಾರೆ. “ನನಗೆ ಕೊಹ್ಲಿ ಜೊತೆ ಸುಮಾರು 20 ನಿಮಿಷ ಸಮಯ ಕೊಡಿ. ಅವರು ಏನು ಬದಲಾವಣೆ ಮಾಡಬೇಕು ಎಂಬ ವಿಷಯಗಳನ್ನು ನಾನು ಹೇಳಬಲ್ಲೆ. ಇದು ಅವರಿಗೆ ಸಹಾಯ ಮಾಡಬಹುದು. ಹಾಗಂತ ಇದು ಅವರಿಗೆ ಸಹಾಯ ಮಾಡುತ್ತದೆ ಎಂದು ನಾನು ಹೇಳುತ್ತಿಲ್ಲ, ಆದರೆ ಇದು ವಿಶೇಷವಾಗಿ ಆಫ್–ಸ್ಟಂಪ್ ಲೈನ್‌ಗೆ ಸಂಬಂಧಿಸಿದ್ದಾಗಿದೆ,” ಎಂದು ಗವಾಸ್ಕರ್ ಇಂಡಿಯಾ ಟುಡೆಗೆ ಹೇಳಿದ್ದಾರೆ.
“ಕೊಹ್ಲಿ ಯಾವಾಗ ಕಮ್ಬ್ಯಾಕ್ ಮಾಡುತ್ತಾರೆ ಎಂಬುದನ್ನು ನಾವು ಕಾಯಬೇಕು. ಅದು ಅವರಿಗೆ ಸಹಾಯ ಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕು ಎಂದು ನಾನು ಭಾವಿಸುತ್ತೇನೆ. ಭಾರತಕ್ಕಾಗಿ ಅವರ ದಾಖಲೆ ನೋಡಿದರೆ ಅದ್ಭುತ, 70 ಅಂತರರಾಷ್ಟ್ರೀಯ ಶತಕಗಳನ್ನು ನೋಡಿ. ನನ್ನ ಪ್ರಕಾರ, ಅವರು ಆಟದ ಎಲ್ಲಾ ಸ್ವರೂಪಗಳಲ್ಲಿ ಎಲ್ಲಾ ಪರಿಸ್ಥಿತಿಗಳಲ್ಲಿ ರನ್ ಗಳಿಸಿದ್ದಾರೆ,” ಎಂದು ಗವಾಸ್ಕರ್ ಹೇಳಿದ್ದಾರೆ.
ಕೊಹ್ಲಿ ಟ್ವಿಟರ್ ಪೋಸ್ಟ್:
ಇನ್ನು ಇದೆಲ್ಲ ಟೀಕೆಗಳ ನಡುವೆ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೆ ತಮ್ಮ ಟ್ವಿಟರ್ ಖಾತೆಯಲ್ಲಿ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದರು. ಯಾವುದೇ ರೀತಿಯಲ್ಲಿ ಬಿಟ್ಟುಕೊಡುವುದಿಲ್ಲ ಎಂದು ಕೊಹ್ಲಿ ತಮ್ಮ ಪೋಸ್ಟ್‌ವೊಂದರಲ್ಲಿ ಹೇಳಿಕೊಂಡಿದ್ದರು. ಕೊಹ್ಲಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಗೆ ‘ಪರ್ಸ್ಪೆಕ್ಟಿವ್’ ಎಂಬ ಶಿರ್ಷಿಕೆ ನೀಡಿದ್ದಾರೆ. ಜೊತೆಗೆ ಕೊಹ್ಲಿ ಹಂಚಿಕೊಂಡಿರುವ ಫೋಟೋದಲ್ಲಿ, ವಾಟ್ ಇಫ್ ಐ ಫಾಲ್? ಓ, ಬಟ್ ಡಾರ್ಲಿಂಗ್, ವಾಟ್ ಇಫ್ ಯು ಫ್ಲೈ (What if I fall? Oh, but darling, what if you fly?”) ಎಂಬ ಅದ್ಭುತ ಅರ್ಥ ನೀಡುವ ಹೇಳಿಕೆ ಕೂಡ ಇದೆ. ಇದರರ್ಥ ಯಾರು ಸೋಲಿನಿಂದ ಹತಾಷರಾಗಿದ್ದಾರೋ ಅಥವಾ ತಾವು ಮಾಡುತ್ತಿರುವ ನಿರ್ದಿಷ್ಟ ಕೆಲಸ ನನ್ನಿಂದ ಸಾಧ್ಯವಾಗುತ್ತಾ ಎಂಬ ಅನುಮಾನದಿಂದ ಚಿಂತಿಸುತ್ತಿರುತ್ತಾರೋ ಅಂತಹವರಿಗೆ ಪ್ರೋತ್ಸಾಹಿಸುವಂತ್ತಾದಾಗಿದೆ.
Published On - 10:06 am, Tue, 19 July 22