Yasir Shah: ಅಬ್ಬಾ ಎಂಥಾ ಸ್ಪಿನ್, ಎಷ್ಟೊಂದು ಟರ್ನ್: ಪಾಕ್ ಬೌಲರ್ನಿಂದ ಶೇನ್ ವಾರ್ನ್ ರೀತಿಯ ಬೌಲಿಂಗ್
SL vs PAK, 1st Test: ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ನ ಮೂರನೇ ದಿನದಾಟದಲ್ಲಿ ಪಾಕಿಸ್ತಾನ ಸ್ಪಿನ್ನರ್ ಯಾಸಿರ್ ಶಾ ಹಾಕಿದ ಒಂದು ಬಾಲ್ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇದನ್ನು ಶೇನ್ ವಾರ್ನ್ ಬಾಲ್ ಆಫ್ ದಿ ಸೆಂಚುರಿಗೆ ಹೋಲಿಸಲಾಗಿದೆ.
ಲಂಕಾದ ಗಲ್ಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಪ್ರಥಮ ಟೆಸ್ಟ್ನಲ್ಲಿ ಶ್ರೀಲಂಕಾ (Sri Lanka vs Pakistan) ಅತ್ಯುತ್ತಮ ಮುನ್ನಡೆ ಪಡೆದುಕೊಂಡಿದ್ದು ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಲಂಕಾ ತನ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ 9 ವಿಕೆಟ್ ನಷ್ಟಕ್ಕೆ 329 ರನ್ ಕಲೆಹಾಕಿ ಒಟ್ಟು 333 ರನ್ಗಳ ಮುನ್ನಡೆ ಸಾಧಿಸಿದೆ. ದಿನೇಶ್ ಚಂದಿಮಲ್ 86 ರನ್ ಗಳಿಸಿ ಹಾಗೂ ಪ್ರಭತ್ ಜಯಸೂರಿಯ 4 ರನ್ಗಳಿಸಿ ಇಂದು ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದರ ನಡುವೆ ಮೂರನೇ ದಿನದಾಟದಲ್ಲಿ ಪಾಕಿಸ್ತಾನ ಸ್ಪಿನ್ನರ್ ಯಾಸಿರ್ ಶಾ (Yasir Shah) ಹಾಕಿದ ಒಂದು ಬಾಲ್ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇದನ್ನು ಶೇನ್ ವಾರ್ನ್ (Shane Warne) ಅವರ ಬಾಲ್ ಆಫ್ ದಿ ಸೆಂಚುರಿಗೆ ಹೋಲಿಸಲಾಗಿದೆ.
ಹೌದು, 1990ರಲ್ಲಿ ಶೇನ್ ವಾರ್ನ್ ಅವರ ಬಾಲ್ ಆಫ್ ದಿ ಸೆಂಚುರಿ ಎಲ್ಲರಿಗೂ ತಿಳಿದಿದೆ. ಆ ಟರ್ನ್ ಆದ ಬಾಲ್ ಅನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದೀಗ ಅದೇರೀತಿಯ ಬಾಲ್ ಅನ್ನು ಯಾಸಿರ್ ಶಾ ಕೂಡ ಎಸೆದಿದ್ದಾರೆ. ಈ ಸ್ಪಿನ್ ಮೋಡಿಯನ್ನು ಅರಿಯಲಾಗದ ಕುಸಲ್ ಮೆಂಡಿಸ್ ಕ್ಲೀನ್ ಬೌಲ್ಡ್ ಆದರು. ಔಟ್ಸೈಡ್ ಲೆಗ್ ಕಡೆ ಬಿದ್ದ ಚೆಂಡು ಸಡನ್ ಆಗಿ ಆಫ್ ಸ್ಟಂಪ್ ಕಡೆ ಟರ್ನ್ ಆಗಿದ್ದು ಯಾರೂ ಊಹಿಸಲಾಗದ ರೀತಿಯಲ್ಲಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Beauty from Yasir Shah like Shane Warne’s Ball to Gatting … pic.twitter.com/EKNgpZqZl6
— Taimoor Zaman (@taimoorze) July 18, 2022
ಪ್ರಥಮ ಟೆಸ್ಟ್ನಲ್ಲಿ ಮೊದಲ ಬ್ಯಾಟ್ ಮಾಡಿದ ಶ್ರೀಲಂಕಾ 66.1 ಓವರ್ನಲ್ಲಿ 222 ರನ್ಗೆ ಅಲೌಟ್ ಆಯಿತು. ದಿನೇಶ್ ಚಂದಿಮಲ್ 115 ಎಸೆತಗಳಲ್ಲಿ 76 ರನ್ಗಳ ಕಾಣಿಕೆ ನೀಡಿದರೆ, ಎಮ್. ತೀಕ್ಷಣ 38 ರನ್ ಒಶಾಡ ಫೆರ್ನಾಂಡೊ 35 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳೆಲ್ಲ ಬೇಗನೆ ಪೆವಿಲಿಯನ್ ಸೇರಿಕೊಂಡರು. ಪಾಕ್ ಪರ ಶಾಹೀನ್ ಅಫ್ರಿದಿ 4 ವಿಕೆಟ್ ಕಿತ್ತರೆ, ಹಸನ್ ಅಲಿ ಮತ್ತು ಯಾಸಿರ್ ಶಾ 2 ವಿಕೆಟ್ ಪಡೆದಿದ್ದರು.
ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ತಂಡದ ಪರ ನಾಯಕ ಬಾಬರ್ ಅಜಾಮ್ 244 ಎಸೆತಗಳಲ್ಲಿ 119 ರನ್ ಬಾರಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್ಗಳ ಸ್ಕೋರ್ 20ರ ಗಡಿ ದಾಟಲಿಲ್ಲ. ಪಾಕ್ 90.5 ಓವರ್ನಲ್ಲಿ 218 ರನ್ಗೆ ಸರ್ವಪತನ ಕಂಡಿತು. ಲಂಕಾ ಪರ ಪ್ರಭತ್ ಜಯಸೂರಿಯ 5 ವಿಕೆಟ್ ಹಾಗೂ ತೀಕ್ಷಣ 2 ವಿಕೆಟ್ ಪಡೆದರು.
ಇದೀಗ ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆಡುತ್ತಿರುವ ಶ್ರೀಲಂಕಾ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದೆ. ಒಶಾಡ ಫೆರ್ನಾಂಡೊ 125 ಎಸೆತಗಳಲ್ಲಿ 64 ರನ್ ಗಳಿಸಿ ನೆರವಾದರು. ಕುಸಲ್ ಮೆಂಡಿಸ್ ಕೂಡ 126 ಎಸೆತಗಳಲ್ಲಿ 76 ರನ್ ಬಾರಿಸಿದರು. ದಿನೇಶ್ ಚಂದಿಮಲ್ 121 ಎಸೆತಗಳಲ್ಲಿ 86 ರನ್ ಬಾರಿಸಿ ಹಾಗೂ ಜಯಸೂರಿಯ 4 ರನ್ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಲಂಕಾ 9 ವಿಕೆಟ್ ನಷ್ಟಕ್ಕೆ 329 ರನ್ ಬಾರಿಸಿ 333 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಪಾಕ್ ಪರ ಮೊಹಮ್ಮದ್ ಸವಾಜ್ 5 ಹಾಗೂ ಯಾಸಿರ್ ಶಾ 3 ವಿಕೆಟ್ ಕಿತ್ತಿದ್ದಾರೆ.