CSA T20 League: ಹೊಸ ಟಿ20 ಲೀಗ್: ಇದು ಮಿನಿ IPL
CSA T20 League: ಈ ತಿಂಗಳಾಂತ್ಯದಲ್ಲಿ ಫ್ರಾಂಚೈಸಿಗಳ ವಿಜೇತರನ್ನು ಘೋಷಿಸಲಾಗುತ್ತಿದ್ದು, ಅದಕ್ಕೂ ಮುನ್ನ ಯಶಸ್ವಿ ಬಿಡ್‌ದಾರರಿಗೆ ಅವರ ತಂಡಗಳ ನಗರಗಳನ್ನು ಆಯ್ಕೆ ಮಾಡುವಂತೆ ತಿಳಿಸಲಾಗಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಯಶಸ್ಸಿನ ಬೆನ್ನಲ್ಲೇ ಹಲವು ಲೀಗ್ಗಳು ಶುರುವಾಗಿದ್ದವು. ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್, ವೆಸ್ಟ್ ಇಂಡೀಸ್ ನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್, ಇಂಗ್ಲೆಂಡ್ ನಲ್ಲಿ 100 ಲೀಗ್, ಪಾಕಿಸ್ತಾನದಲ್ಲಿ ಪಾಕಿಸ್ತಾನ್ ಸೂಪರ್ ಲೀಗ್, ಶ್ರೀಲಂಕಾದಲ್ಲಿ ಲಂಕಾ ಪ್ರೀಮಿಯರ್ ಲೀಗ್, ನ್ಯೂಜಿಲೆಂಡ್ ನಲ್ಲಿ ಸೂಪರ್ ಸ್ಮ್ಯಾಶ್, ಬಾಂಗ್ಲಾದೇಶದಲ್ಲಿ ಬಾಂಗ್ಲಾ ಪ್ರೀಮಿಯರ್ ಲೀಗ್…ಹೀಗೆ ಲೀಗ್ ಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ಈ ಪಟ್ಟಿಗೆ ಹೊಸ ಸೇರ್ಪಡೆಯೆಂದರೆ ಯುಎಇ ಟಿ20 ಲೀಗ್ ಹಾಗೂ ಸೌತ್ ಆಫ್ರಿಕಾ ಸಿಎಸ್ಎ ಟಿ20 ಲೀಗ್. ಇಲ್ಲಿ ವಿಶೇಷ ಎಂದರೆ ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ಟಿ20 ಲೀಗ್ನ ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿದೆ.
ಈ ಹೊಸ ಲೀಗ್‌ನಲ್ಲಿ ಒಟ್ಟು 6 ತಂಡಗಳಿದ್ದು, ಈ ಎಲ್ಲಾ ತಂಡಗಳನ್ನು ಐಪಿಎಲ್ನಲ್ಲಿ ತಂಡಗಳ ಮಾಲೀಕತ್ವವನ್ನು ಹೊಂದಿರುವ ಫ್ರಾಂಚೈಸಿಗಳೇ ಖರೀದಿಸಿರುವುದು ವಿಶೇಷ. ವರದಿಗಳ ಪ್ರಕಾರ ಐಪಿಎಲ್ ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಸೌತ್ ಆಫ್ರಿಕಾ ಟಿ20 ಲೀಗ್ನ ತಂಡಗಳ ಮಾಲೀಕತ್ವವನ್ನು ಪಡೆದುಕೊಂಡಿವೆ.
ಮುಖೇಶ್ ಅಂಬಾನಿ (MI), ಎನ್ ಶ್ರೀನಿವಾಸನ್ (CSK), ಪಾರ್ಥ್ ಜಿಂದಾಲ್ (DC), ದಿ ಮಾರನ್ ಕುಟುಂಬ (SRH), ಸಂಜೀವ್ ಗೋಯೆಂಕಾ (LSG) ಮತ್ತು ಮನೋಜ್ ಬದಾಲೆ (RR) ಅವರು ಸಿಎಸ್ಎ ತಂಡಗಳ ಹರಾಜಿನಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಲೀಗ್ ಆಯೋಜಕರು ತಂಡಗಳ ಮಾಲೀಕರು ಯಾರು ಎಂಬುದನ್ನು ಇನ್ನೂ ಕೂಡ ಅಧಿಕೃತವಾಗಿ ಘೋಷಿಸಿಲ್ಲ. ಇದಾಗ್ಯೂ ಕೆಲ ಮೂಲಗಳು ಐಪಿಎಲ್ ಫ್ರಾಂಚೈಸಿಗಳ ಮಾಲೀಕತ್ವನ್ನು ದೃಢಪಡಿಸಿದೆ.
ಈ ತಿಂಗಳಾಂತ್ಯದಲ್ಲಿ ಫ್ರಾಂಚೈಸಿಗಳ ವಿಜೇತರನ್ನು ಘೋಷಿಸಲಾಗುತ್ತಿದ್ದು, ಅದಕ್ಕೂ ಮುನ್ನ ಯಶಸ್ವಿ ಬಿಡ್‌ದಾರರಿಗೆ ಅವರ ತಂಡಗಳ ನಗರಗಳನ್ನು ಆಯ್ಕೆ ಮಾಡುವಂತೆ ತಿಳಿಸಲಾಗಿದೆ. ಇನ್ನು ಈ ಬಿಡ್ಡಿಂಗ್ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ 250 ಕೋಟಿಗಳ ಸಮೀಪದಲ್ಲಿ ಅತಿ ದೊಡ್ಡ ಬಿಡ್‌ಗಳನ್ನು ಮಾಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮತ್ತೊಂದೆಡೆ ಯುಎಇ ಟಿ20 ಲೀಗ್ ಕೂಡ ಶೀಘ್ರದಲ್ಲೇ ಶುರುವಾಗಲಿದ್ದು, ಹೀಗಾಗಿ ಹೊಸ ಎರಡು ಲೀಗ್ಗಳ ನಡುವೆ ಪೈಪೋಟಿ ಕಂಡು ಬರಲಿದೆ. ಏಕೆಂದರೆ ಯುಎಇ ಟಿ 20 ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಖರೀದಿಸಿದೆ. ಇದೀಗ ಸೌತ್ ಆಫ್ರಿಕಾ ಲೀಗ್ ನ 6 ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿರುವುದರಿಂದ ಹೊಸ ಲೀಗ್ ಅನ್ನು ಮಿನಿ ಐಪಿಎಲ್ ಎಂದು ಕರೆಯಲಾಗುತ್ತಿದೆ. ಒಟ್ಟಿನಲ್ಲಿ ಐಪಿಎಲ್ ಮೂಲಕ ಕ್ರಿಕೆಟ್ ಪ್ರೇಮಿಯರಿಗೆ ಮನರಂಜನೆಯ ರಸದೌತಣ ಒದಗಿಸಿದ್ದ ಫ್ರಾಂಚೈಸಿಗಳು ಸೌತ್ ಆಫ್ರಿಕಾ ಹಾಗೂ ಯುಎಇ ಟಿ20 ಲೀಗ್ ಮೋಡಿ ಮಾಡಲಿದೆಯಾ ಕಾದು ನೋಡಬೇಕಿದೆ.