ಟೀಮ್ ಇಂಡಿಯಾ ವಿರುದ್ದದ ಸರಣಿಗೂ ಮುನ್ನ ನಿವೃತ್ತಿ ಘೋಷಿಸಿದ ಇಬ್ಬರು ಆಟಗಾರರು..!

India vs West Indies: ಭಾರತ-ವೆಸ್ಟ್ ಇಂಡೀಸ್​ ನಡುವಣ ಏಕದಿನ ಸರಣಿಯು ಜುಲೈ 22 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಮೂರು 3 ಏಕದಿನ ಪಂದ್ಯಗಳನ್ನು ಹಾಗೂ 5 ಟಿ20 ಪಂದ್ಯಗಳನ್ನು ಆಡಲಿದೆ.

ಟೀಮ್ ಇಂಡಿಯಾ ವಿರುದ್ದದ ಸರಣಿಗೂ ಮುನ್ನ ನಿವೃತ್ತಿ ಘೋಷಿಸಿದ ಇಬ್ಬರು ಆಟಗಾರರು..!
West Indies
TV9kannada Web Team

| Edited By: Zahir PY

Jul 19, 2022 | 1:25 PM

ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಣ ಸರಣಿಯು ಜುಲೈ 22 ರಿಂದ ಶುರುವಾಗಲಿದೆ. ಈ ಸರಣಿಗಾಗಿ ಈಗಾಗಲೇ ಉಭಯ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಕೆರಿಬಿಯನ್ ದ್ವೀಪದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಮೊದಲು 3 ಏಕದಿನ ಪಂದ್ಯಗಳು ನಡೆಯಲಿದ್ದು, ಇದಕ್ಕಾಗಿ ಆಯ್ಕೆ ಮಾಡಲಾದ ತಂಡದಲ್ಲಿ ವೆಸ್ಟ್ ಇಂಡೀಸ್​​ ನ ಅನುಭವಿ ಆಟಗಾರರಿಗೆ ಸ್ಥಾನ ನೀಡಲಾಗಿಲ್ಲ. ಇದರ ಬೆನ್ನಲ್ಲೇ ಇದೀಗ ವಿಂಡೀಸ್​​ ತಂಡದ ಇಬ್ಬರು ಆಟಗಾರರು ನಿವೃತ್ತಿ ಘೋಷಿಸಿದ್ದಾರೆ. ಸೋಮವಾರವಷ್ಟೇ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ನಾಯಕ ದಿನೇಶ್ ರಾಮ್‌ದಿನ್ (Dinesh Ramdin) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಮತ್ತೋರ್ವ ಕ್ರಿಕೆಟಿಗ ಲೆಂಡ್ಲ್ ಸಿಮನ್ಸ್ (Lendl Simmons) ಕೂಡ ಇಂಟರ್​ನ್ಯಾಷನಲ್ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ವೆಸ್ಟ್ ಇಂಡೀಸ್ ಪರ 8 ಟೆಸ್ಟ್, 68 ಏಕದಿನ ಮತ್ತು 68 ಟಿ20 ಪಂದ್ಯಗಳನ್ನು ಆಡಿರುವ ಸಿಮನ್ಸ್ ಒಂದು ಕಾಲದಲ್ಲಿ ಸ್ಟಾರ್ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ವಿಂಡೀಸ್ ಪರ ಒಟ್ಟು 3763 ರನ್‌ಗಳನ್ನು ಕಲೆಹಾಕಿದ್ದಾರೆ.

ಟಿ20 ಸ್ಪೆಷಲಿಸ್ಟ್ ಆಗಿದ್ದ ಸಿಮನ್ಸ್ 2016 ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎರಡನೇ ಬಾರಿಗೆ T20 ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂದು ಆತಿಥೇಯ ಭಾರತದ ವಿರುದ್ಧ ಸೆಮಿಫೈನಲ್‌ನಲ್ಲಿ 51 ಎಸೆತಗಳಲ್ಲಿ 82 ರನ್ ಗಳಿಸಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಹಾಗೆಯೇ 2021ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟಿ20 ಪಂದ್ಯವಾಡಿದ್ದ ಸಿಮನ್ಸ್, ಇದೀಗ ನಿವೃತ್ತಿ ಘೋಷಿಸಿದ್ದಾರೆ.

ಇದಾಗ್ಯೂ ಲೀಗ್ ಕ್ರಿಕೆಟ್​ ನಲ್ಲಿ ಸಿಮನ್ಸ್ ಬ್ಯಾಟ್ ಬೀಸಲಿದ್ದಾರೆ. ಈ ಹಿಂದೆ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕನಾಗಿ ಸಿಮನ್ಸ್ ಕಾಣಿಸಿಕೊಂಡಿದ್ದರು. ಅಲ್ಲದೆ 2015 ಮತ್ತು 2017 ರಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ 29 ಇನ್ನಿಂಗ್ಸ್‌ಗಳಲ್ಲಿ 1079 ರನ್ ಗಳಿಸುವ ಮೂಲಕ ಮುಂಬೈ ತಂಡವು ಎರಡು ಐಪಿಎಲ್ ಟ್ರೋಫಿಗಳನ್ನು ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು.

ಇದಲ್ಲದೆ ಟ್ರಿನ್‌ಬಾಗೊ ನೈಟ್ ರೈಡರ್ಸ್, ಕರಾಚಿ ಕಿಂಗ್ಸ್ ಮತ್ತು ಸಿಲ್ಹೆಟ್ ಸನ್‌ರೈಸರ್ಸ್‌ನಂತಹ ಅನೇಕ ತಂಡಗಳನ್ನು ಪ್ರತಿನಿಧಿಸಿದ್ದಾರೆ. ವಿಶೇಷ ಎಂದರೆ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನಿಮನ್ಸ್ ಹೆಸರಿನಲ್ಲಿದೆ. 91 ಇನ್ನಿಂಗ್ಸ್‌ಗಳಲ್ಲಿ 20 ಅರ್ಧಶತಕ ಸೇರಿದಂತೆ ಒಟ್ಟು 2629 ರನ್ ಗಳಿಸುವ ಮೂಲಕ ಸಿಪಿಎಲ್​​ನಲ್ಲಿ 37 ವರ್ಷದ ಲೆಂಡ್ಲ್​ ಸಿಮನ್ಸ್​ ರನ್​ ಸರದಾರ ಎನಿಸಿಕೊಂಡಿದ್ದಾರೆ.

ಮತ್ತೊಂದೆಡೆ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ 37 ವರ್ಷದ ದಿನೇಶ್ ರಾಮ್​ದಿನ್ ಸಹ ನಿವೃತ್ತಿ ಘೋಷಿಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ರಾಮ್​ದಿನ್ ತಮ್ಮ ವೃತ್ತಿಜೀವನದಲ್ಲಿ 74 ಟೆಸ್ಟ್, 139 ODI ಮತ್ತು 71 T20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಟ್ಟು ಐದೂವರೆ ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇನ್ನು ಕ್ಯಾಚ್ ಮತ್ತು ಸ್ಟಂಪಿಂಗ್ ಮೂಲಕ 450 ಕ್ಕೂ ಹೆಚ್ಚು ಬ್ಯಾಟ್ಸ್​ಮನ್​ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ.

ಭಾರತ-ವೆಸ್ಟ್ ಇಂಡೀಸ್​ ನಡುವಣ ಏಕದಿನ ಸರಣಿಯು ಜುಲೈ 22 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಮೂರು 3 ಏಕದಿನ ಪಂದ್ಯಗಳನ್ನು ಹಾಗೂ 5 ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಗಾಗಿ ಆಯ್ಕೆ ಮಾಡಲಾದ ಉಭಯ ತಂಡಗಳು ಹೀಗಿದೆ.

ವೆಸ್ಟ್ ಇಂಡೀಸ್ ಏಕದಿನ ತಂಡ ಹೀಗಿದೆ: ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಶಮ್ರಾ ಬ್ರೂಕ್ಸ್, ಕೆಸಿ ಕಾರ್ಟಿ, ಜೇಸನ್ ಹೋಲ್ಡರ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ಕೈಲ್ ಮೈಯರ್ಸ್, ಗುಡಕೇಶ್ ಮೋತಿ, ಕೀಮೋ ಪಾಲ್, ರೋವ್‌ಮನ್ ಪೊವೆಲ್ ಮತ್ತು ಜೇಡನ್ ಸೀಲ್ಸ್.

ಮೀಸಲು ಆಟಗಾರರು: ರೊಮಾರಿಯೊ ಶೆಫರ್ಡ್, ಹೇಡನ್ ವಾಲ್ಷ್ ಜೂನಿಯರ್.

ಭಾರತ ಏಕದಿನ ತಂಡ ಹೀಗಿದೆ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್‌), ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada