Super Smash 2022: ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್ ಟಿ20 ಲೀಗ್ನ 4ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಸೆಂಟ್ರಲ್ ಡಿಸ್ಟ್ರಿಕ್ಸ್ ಹಾಗೂ ವೆಲ್ಲಿಂಗ್ಟನ್ ತಂಡಗಳು ಮುಖಾಮುಖಿಯಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೆಂಟ್ರಲ್ ತಂಡದ ನಾಯಕ ಟಾಮ್ ಬ್ರೂಸ್ ಬೌಲಿಂಗ್ ಆಯ್ದುಕೊಂಡರು. ಆದರೆ ಪವರ್ಪ್ಲೇನಲ್ಲೇ ನಾಯಕನ ನಿರ್ಧಾರ ತಪ್ಪು ಎಂಬಂತೆ ಫಿನ್ ಅಲೆನ್ ಹಾಗೂ ನಿಕ್ ಕೆಲ್ಲಿ ಬ್ಯಾಟ್ ಬೀಸಿದ್ದರು. ಏಕೆಂದರೆ ಮೊದಲ ವಿಕೆಟ್ಗೆ ಈ ಜೋಡಿ 5.5 ಓವರ್ಗಳಲ್ಲಿ 80 ರನ್ ಚಚ್ಚಿದ್ದರು.
ಈ ಹಂತದಲ್ಲಿ 20 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 33 ರನ್ ಬಾರಿಸಿದ್ದ ಫಿನ್ ಅಲೆನ್ ಔಟಾದರು. ಇದಾಗ್ಯೂ ಸಿಡಿಲಬ್ಬರ ಮುಂದುವರೆಸಿದ ನಿಕ್ ಕೆಲ್ಲಿ 25 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 8 ಫೋರ್ನೊಂದಿಗೆ 58 ರನ್ ಬಾರಿಸಿದರು. ಪರಿಣಾಮ 8 ಓವರ್ ವೇಳೆ ವೆಲ್ಲಿಂಗ್ಟನ್ ತಂಡದ ಸ್ಕೋರ್ 100ರ ಗಡಿದಾಡಿತು. ಈ ಹಂತದಲ್ಲಿಟಾಮ್ ಬ್ರೂಸ್ ಎಸೆತದಲ್ಲಿ ಕೆಲ್ಲಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ರಚಿನ್ ರವೀಂದ್ರ (16), ಟ್ರಾಯ್ ಜಾನ್ಸನ್ (35) ಹಾಗೂ ವ್ಯಾನ್ ಬ್ರೀಕ್ (21) ಉಪಯುಕ್ತ ಕಾಣಿಕೆ ನೀಡಿದರು. ಅದರಂತೆ ನಿದಿಗತ 20 ಓವರ್ಗಳಲ್ಲಿ ವೆಲ್ಲಿಂಗ್ಟನ್ ತಂಡದ ಸ್ಕೋರ್ 6 ವಿಕೆಟ್ ನಷ್ಟಕ್ಕೆ 214 ಕ್ಕೆ ಬಂದು ನಿಂತಿತು.
215 ರನ್ಗಳ ಬೃಹತ್ ಗುರಿ ಪಡೆದ ಸೆಂಟ್ರಲ್ ಡಿಸ್ಟಿಕ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಗ್ರೇಗ್ ಹೇ ಕೇವಲ 7 ರನ್ಗಳಿಸಿ ನಿರ್ಗಮಿಸಿದರು. ಮತ್ತೊಂದೆಡೆ 29 ರನ್ ಬಾರಿಸಿದ ಬೆನ್ ಸ್ಮಿತ್ ಕೂಡ ಪವರ್ಪ್ಲೇ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಹಿರಿಯ ಆಟಗಾರ ರಾಸ್ ಟೇಲರ್ 5 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.ಇದಾಗ್ಯೂ ಮತ್ತೊಂದೆಡೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಡೇನ್ ಕ್ಲೆವರ್ 32 ಎಸೆತಗಳಲ್ಲಿ 44 ರನ್ ಬಾರಿಸಿದರು. ಕ್ಲೆವರ್ಗೆ ಉತ್ತಮ ಸಾಥ್ ನೀಡಿದ ಜೋಶ್ ಕ್ಲಾರ್ಕ್ಸನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ವೆಲ್ಲಿಂಗ್ಟನ್ ಬೌಲರ್ಗಳನ್ನು ಹಿಗ್ಗಾಮುಗ್ಗ ದಂಡಿಸಿದ ಕ್ಲಾರ್ಕ್ಸನ್ ಪಂದ್ಯದ ಗತಿಯನ್ನೇ ಬದಲಿಸುವ ಸೂಚನೆ ನೀಡಿದರು.
Josh Clarkson can hit em! Big finish to the over for the @CentralStags. Follow the chase LIVE in NZ with @sparknzsport. #SuperSmashNZ pic.twitter.com/vTGFqEHHZ3
— Dream11 Super Smash (@SuperSmashNZ) December 27, 2022
ಅಂತಿಮ ಹಂತದಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 7 ಆಕರ್ಷಕ ಫೋರ್ ಬಾರಿಸುವ ಮೂಲಕ ಸೆಂಟ್ರಲ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. 24 ಎಸೆತಗಳಲ್ಲಿ 55 ರನ್ ಬಾರಿಸಿದ ಜೋಶ್ ಕ್ಲಾರ್ಕ್ಸನ್ ಅಂತಿಮ ಹಂತದಲ್ಲಿ ಎಡವಿ ಔಟಾದರು. ಪರಿಣಾಮ ಕೊನೆಯ ಓವರ್ನಲ್ಲಿ ಸೆಂಟ್ರಲ್ ತಂಡಕ್ಕೆ ಗೆಲ್ಲಲು 16 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಟಾಮ್ ಬ್ರೂಸ್ (43) ರನೌಟ್ ಆಗಿದ್ದು ಸೆಂಟ್ರಲ್ ತಂಡಕ್ಕೆ ಪಾಲಿಗೆ ದುಬಾರಿಯಾಯಿತು. ಅಂತಿಮವಾಗಿ ಸೆಂಟ್ರಲ್ ಡಿಸ್ಟಿಕ್ಸ್ ತಂಡವು 2 ರನ್ಗಳಿಂದ ವಿರೋಚಿತವಾಗಿ ಸೋಲೋಪ್ಪಿಕೊಳ್ಳಬೇಕಾಯಿತು. ಉಭಯ ತಂಡಗಳಿಂದ ಒಟ್ಟು 426 ರನ್ ಮೂಡಿಬಂದಿರುವ ಈ ಪಂದ್ಯವು ಸೂಪರ್ ಸ್ಮ್ಯಾಶ್ ಲೀಗ್ನ ಅತ್ಯಂತ ರೋಚಕ ಪಂದ್ಯವಾಗಿ ಗುರುತಿಸಿಕೊಂಡಿದೆ.
ಬೆನ್ ಸ್ಮಿತ್ , ಗ್ರೆಗ್ ಹೇ , ಡೇನ್ ಕ್ಲೆವರ್ (ವಿಕೆಟ್ ಕೀಪರ್) , ರಾಸ್ ಟೇಲರ್ , ಟಾಮ್ ಬ್ರೂಸ್ (ನಾಯಕ) , ಜೋಶ್ ಕ್ಲಾರ್ಕ್ಸನ್ , ಡೌಗ್ ಬ್ರೇಸ್ವೆಲ್ , ಬ್ರೆಟ್ ಜಾನ್ಸನ್ , ಜೇಡನ್ ಲೆನಾಕ್ಸ್ , ರೇಮಂಡ್ ಟೂಲ್ , ಬ್ರೆಟ್ ರಾಂಡೆಲ್.
ಇದನ್ನೂ ಓದಿ: IPL 2023: RCB ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
ಫಿನ್ ಅಲೆನ್ , ನಿಕ್ ಕೆಲ್ಲಿ , ರಚಿನ್ ರವೀಂದ್ರ , ಟ್ರಾಯ್ ಜಾನ್ಸನ್ , ನಾಥನ್ ಸ್ಮಿತ್ , ಟಿಮ್ ರಾಬಿನ್ಸನ್ , ಕ್ಯಾಲಮ್ ಮೆಕ್ಲಾಚ್ಲಾನ್ (ವಿಕೆಟ್ ಕೀಪರ್) , ಆಡಮ್ ಮಿಲ್ನ್ , ಲೋಗನ್ ವ್ಯಾನ್ ಬೀಕ್ , ಪೀಟರ್ ಯಂಗ್ಹಸ್ಬೆಂಡ್ (ನಾಯಕ) , ಮೈಕೆಲ್ ಸ್ನೆಡೆನ್.
Published On - 3:20 pm, Tue, 27 December 22