Suresh Raina: ವಿವಾದವನ್ನು ಮೈಮೇಲೆ ಎಳೆದುಕೊಂಡ CSK ಸ್ಟಾರ್ ಸುರೇಶ್ ರೈನಾ..!

ಟೀಮ್ ಇಂಡಿಯಾ ಪರ 2005ರಲ್ಲಿ ಪದಾರ್ಪಣೆ ಮಾಡಿದ್ದ ಸುರೇಶ್ ರೈನಾ 2020, ಆಗಸ್ಟ್ 15 ರಂದು ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. 15 ವರ್ಷಗಳ ವೃತ್ತಿಜೀವನದಲ್ಲಿ ರೈನಾ 226 ಏಕದಿನ ಪಂದ್ಯಗಳನ್ನು ಆಡಿದ್ದು 5,615 ರನ್ ಬಾರಿಸಿದ್ದಾರೆ.

Suresh Raina: ವಿವಾದವನ್ನು ಮೈಮೇಲೆ ಎಳೆದುಕೊಂಡ CSK ಸ್ಟಾರ್ ಸುರೇಶ್ ರೈನಾ..!
Suresh Raina

ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರನಾಗಿರುವ ರೈನಾ ಕೆಲ ದಿನಗಳ ಹಿಂದೆ ತಮಿಳುನಾಡು ಪ್ರೀಮಿಯರ್ ಲೀಗ್ ಕಾಮೆಂಟರಿ ಚಿಟ್​ಚಾಟ್​ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಕಮೆಂಟೇಟರ್ ಚೆನ್ನೈ ಸಂಸ್ಕೃತಿ ಕುರಿತಾದ ಪ್ರಶ್ನೆಗಳನ್ನು ಕೇಳಿದ್ದರು.

ನೀವು ಚೆನ್ನೈನ ಪಂಚೆ, ನೃತ್ಯ ಹಾಗೂ ಶಿಳ್ಳೆ ಸಂಸ್ಕೃತಿಗೆ ಹೇಗೆ ಒಗ್ಗಿಕೊಂಡಿದ್ದೀರಿ ಎಂದು ವೀಕ್ಷಕ ವಿವರಣೆಗಾರ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ರೈನಾ, ನಾನು ಕೂಡ ಬ್ರಾಹ್ಮಣ. 2004 ರಿಂದ ಚೆನ್ನೈನಲ್ಲಿ ಆಡುತ್ತಿದ್ದೇನೆ. ನಾನು ಸಹ ತಮಿಳು ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ನನ್ನ ಸಹ ಆಟಗಾರರನ್ನು ಹೆಚ್ಚು ಇಷ್ಟಪಡುತ್ತೇನೆ. ತಮಿಳುನಾಡು ಕ್ರಿಕೆಟಿಗರಾದ ಬಾಲಾಜಿ, ಅನಿರುದ್ಧ್ ಶ್ರೀಕಾಂತ್, ಬದರಿನಾಥ್ ಮುಂತಾದವರ ಜೊತೆ ಆಡಿದ್ದೇನೆ. ಸಿಎಸ್‌ಕೆ ತಂಡದ ಭಾಗವಾಗಿರುವುದು ನನ್ನ ಅದೃಷ್ಟ ಎಂದು ಸುರೇಶ್ ರೈನಾ ತಿಳಿಸಿದ್ದರು.

ಆದರೆ ಚೆನ್ನೈ ಸಂಸ್ಕೃತಿ ಎಂಬುದು ಬ್ರಾಹ್ಮಣರು ಅಲ್ಲ ಎಂದು ಇದೀಗ ರೈನಾ ಹೇಳಿಕೆ ವಿರುದ್ದ ಇದೀಗ ಅಪಸ್ವರಗಳು ಕೇಳಿ ಬಂದಿವೆ. ಅಷ್ಟೇ ಅಲ್ಲದೆ ಒಂದು ಪ್ರದೇಶದ ಸಂಸ್ಕೃತಿ ಬಗ್ಗೆ ಕೇಳಿದಾಗ ಜಾತಿಯನ್ನು ಪ್ರಸ್ತಾಪಿಸಿದ್ದರ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ರೈನಾ ವಿರುದ್ದ ಆಕ್ರೋಶಗಳು ವ್ಯಕ್ತವಾಗುತ್ತಿದೆ. ರೈನಾ ಅವರ ಹೇಳಿಕೆಯನ್ನು ಇದೀಗ ಸಿಎಸ್​ಕೆ ತಂಡದ ಕೆಲ ಅಭಿಮಾನಿಗಳೇ ಟ್ರೋಲ್ ಮಾಡುತ್ತಿದ್ದು, ಕ್ರಿಕೆಟ್​ ವಿಷಯದಲ್ಲೂ ಜಾತಿಯನ್ನು ಎಳೆದು ತರುತ್ತಿದ್ದೀರಿ ಎಂದು ರೈನಾ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಏನೋ ಹೇಳಲು ಹೋಗಿ ಇದೀಗ ಸುರೇಶ್ ರೈನಾ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದು ಎಲ್ಲಿಗೆ ಹೋಗಿ ತಲುಪಲಿದೆ ಕಾದು ನೋಡಬೇಕಿದೆ.

ಟೀಮ್ ಇಂಡಿಯಾ ಪರ 2005ರಲ್ಲಿ ಪದಾರ್ಪಣೆ ಮಾಡಿದ್ದ ಸುರೇಶ್ ರೈನಾ 2020, ಆಗಸ್ಟ್ 15 ರಂದು ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. 15 ವರ್ಷಗಳ ವೃತ್ತಿಜೀವನದಲ್ಲಿ ರೈನಾ 226 ಏಕದಿನ ಪಂದ್ಯಗಳನ್ನು ಆಡಿದ್ದು 5,615 ರನ್ ಬಾರಿಸಿದ್ದಾರೆ. ಇನ್ನು 78 ಟಿ20 ಪಂದ್ಯಗಳಿಂದ 1,605 ರನ್ ಕಲೆಹಾಕಿದ್ದಾರೆ. ಹಾಗೆಯೇ 19 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 768 ರನ್ ಬಾರಿಸಿದ್ದಾರೆ.

 

ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!

ಇದನ್ನೂ ಓದಿ: Mary Kom: ಇದು ನಮ್ಮ ಸಂಸ್ಕೃತಿ: ಟೋಕಿಯೋ ಒಲಿಂಪಿಕ್ಸ್​ಗೂ ಮುನ್ನ ಎಲ್ಲರ ಹೃದಯ ಗೆದ್ದ ಮೇರಿ ಕೋಮ್