ಫಾರ್ಮ್​ನಲ್ಲಿರುವ ಸೂರ್ಯನಿಗೆ ಟೀಂ ಇಂಡಿಯಾದಿಂದ ಕೋಕ್; ರಣಜಿ ಆಡಲು ಮುಂದಾದ ಮಿ. 360..!

| Updated By: ಪೃಥ್ವಿಶಂಕರ

Updated on: Dec 05, 2022 | 12:52 PM

Suryakumar Yadav: ಮುಂದಿನ ಆವೃತ್ತಿಯ ರಣಜಿ ಟ್ರೋಫಿ ಡಿಸೆಂಬರ್ 13 ರಿಂದ ಪ್ರಾರಂಭವಾಗಲಿದ್ದು, ಅದರ ಕೊನೆಯ ಪಂದ್ಯ ಮುಂದಿನ ವರ್ಷ ಫೆಬ್ರವರಿ 16 ರಿಂದ 20 ರ ನಡುವೆ ನಡೆಯಲಿದೆ. ಟೈಮ್ಸ್ ಆಫ್ ಇಂಡಿಯಾ ವರದಿಗಳ ಪ್ರಕಾರ, ಈ ಟೂರ್ನಿಯ ಎರಡನೇ ಗುಂಪು ಹಂತದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ಪರ ಆಡಲಿದ್ದಾರೆ.

ಫಾರ್ಮ್​ನಲ್ಲಿರುವ ಸೂರ್ಯನಿಗೆ ಟೀಂ ಇಂಡಿಯಾದಿಂದ ಕೋಕ್; ರಣಜಿ ಆಡಲು ಮುಂದಾದ ಮಿ. 360..!
Suryakumar Yadav
Follow us on

ನ್ಯೂಜಿಲೆಂಡ್ ಪ್ರವಾಸದಲ್ಲಿ ಮಿಶ್ರ ಪ್ರದರ್ಶನ ನೀಡಿದ್ದ ಸೂರ್ಯಕುಮಾರ್ (Suryakumar Yadav ) ಇದೀಗ ಬಾಂಗ್ಲಾ ಪ್ರವಾಸದಿಂದ ಹೊರಗುಳಿದಿದ್ದಾರೆ. ಕಿವೀಸ್ ಪ್ರವಾಸದಲ್ಲಿ ನಡೆದ ಟಿ20 ಸರಣಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ಸೂರ್ಯ, ಏಕದಿನ ಸರಣಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಹಲವರು ಸೂರ್ಯಕುಮಾರ್ ಏಕದಿನ ಮಾದರಿಗೆ ಸರಿಹೊಂದುವಂತಹ ಆಟಗಾರನಲ್ಲ ಎಂದು ದೂರಿದ್ದರು. ಈಗ ಟೀಂ ಇಂಡಿಯಾದಿಂದ (Team India) ದೂರ ಉಳಿದಿರುವ ಸೂರ್ಯ ತನ್ನನ್ನು ಏಕದಿನ ಕ್ರಿಕೆಟ್​ಗೆ ಹಾಗೂ ಕ್ರಿಕೆಟ್​ನ ದೀರ್ಘ ಸ್ವರೂಪಕ್ಕೆ ಸರಿಹೊಂದಿಸಿಕೊಳ್ಳಲು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರ ಅಂಗವಾಗಿ ಮುಂಬರುವ ರಣಜಿ ಸೀಸನ್​ನಲ್ಲಿ (Ranji Trophy) ಸೂರ್ಯ ಮುಂಬೈ ಪರ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದಾರೆ.

ಮುಂಬೈ ಪರ ರಣಜಿ ಟ್ರೋಫಿ ಆಡಲಿರುವ ಸೂರ್ಯ

ಮುಂದಿನ ಆವೃತ್ತಿಯ ರಣಜಿ ಟ್ರೋಫಿ ಡಿಸೆಂಬರ್ 13 ರಿಂದ ಪ್ರಾರಂಭವಾಗಲಿದ್ದು, ಅದರ ಕೊನೆಯ ಪಂದ್ಯ ಮುಂದಿನ ವರ್ಷ ಫೆಬ್ರವರಿ 16 ರಿಂದ 20 ರ ನಡುವೆ ನಡೆಯಲಿದೆ. ಟೈಮ್ಸ್ ಆಫ್ ಇಂಡಿಯಾ ವರದಿಗಳ ಪ್ರಕಾರ, ಈ ಟೂರ್ನಿಯ ಎರಡನೇ ಗುಂಪು ಹಂತದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ಪರ ಆಡಲಿದ್ದಾರೆ. ಅಂದರೆ ಡಿಸೆಂಬರ್ 27 ರಿಂದ ಮುಂಬೈ, ಸೌರಾಷ್ಟ್ರ ವಿರುದ್ಧ ಪಂದ್ಯವನ್ನು ಆಡಬೇಕಾಗಿದ್ದು, ಆ ಪಂದ್ಯದಲ್ಲಿ ಸೂರ್ಯಕುಮಾರ್ ಮುಂಬೈ ಪರ ಆಡುವುದನ್ನು ಕಾಣಬಹುದಾಗಿದೆ.

ವಿಶ್ರಾಂತಿ ಬಿಟ್ಟು ರಣಜಿ ಏಕೆ?

ಯಾವುದೇ ಒಬ್ಬ ಆಟಗಾರ ಕಳಪೆ ಫಾರ್ಮ್​ನಿಂದಾಗಿ ರಾಷ್ಟ್ರೀಯ ತಂಡದಿಂದ ಹೊರಗಿದ್ದರೆ, ಆತ ದೇಶೀಯ ಕ್ರಿಕೆಟ್‌ನಲ್ಲಿ ಆಡುವುದು ಸಹಜ. ಆದರೆ ಫಾರ್ಮ್​ನ ಉತ್ತುಂಗದಲ್ಲಿರುವ ಸೂರ್ಯಕುಮಾರ್ ಯಾದವ್ ಅವರನ್ನು ವಿಶ್ರಾಂತಿಯ ಹೆಸರಿನಲ್ಲಿ ತಂಡದಿಂದ ಏಕೆ ಹೊರಗಿಟ್ಟಿದ್ದಾರೆ ಎಂಬ ಪ್ರಶ್ನೆಯನ್ನು ಕ್ರಿಕೆಟ್ ಪಂಡಿತರು ಬಿಸಿಸಿಐ ಮುಂದಿಟ್ಟಿದ್ದಾರೆ. ಅದಾಗ್ಯೂ ಉತ್ತಮ ಫಾರ್ಮ್​ನಲ್ಲಿದ್ದರೂ ವಿಶ್ರಾಂತಿ ತೆಗೆದುಕೊಳ್ಳುವುದನ್ನು ಬಿಟ್ಟು ಸೂರ್ಯಕುಮಾರ್ ಏಕೆ ರಣಜಿ ಆಡುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಕೆಲವು ಅನುಭವಿ ಆಟಗಾರರು ಕೇಳುತ್ತಿದ್ದಾರೆ.

ಇದನ್ನೂ ಓದಿ:  IND vs BAN: ಆಡಿರುವ 30 ಇನ್ನಿಂಗ್ಸ್​ಗಳ ಪೈಕಿ 23 ಇನ್ನಿಂಗ್ಸ್​ ಗಳಲ್ಲಿ ಖಾತೆಯನ್ನೇ ತೆರೆದಿಲ್ಲ ಈ ಬಾಂಗ್ಲಾ ಆಟಗಾರ..!

2022ರಲ್ಲಿ 13 ಏಕದಿನ, 31 ಟಿ20 ಪಂದ್ಯಗಳನ್ನಾಡಿರುವ ಸೂರ್ಯ

ಅಂದಹಾಗೆ, ವಿಶ್ರಾಂತಿ ರೂಪದಲ್ಲಿ ತಂಡದಿಂದ ದೂರವಿರುವ ಸೂರ್ಯಕುಮಾರ್ ಯಾದವ್ ಯಾವಾಗ ಸುಸ್ತಾದರು ಎಂಬ ಪ್ರಶ್ನೆಯೂ ಅಷ್ಟೇ ದೊಡ್ಡದಾಗಿದೆ. ಸಾಮಾನ್ಯವಾಗಿ ಒಬ್ಬ ಆಟಗಾರು ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದರೆ ಆತನಿಗೆ ವಿಶ್ರಾಂತಿ ಅಗತ್ಯವಾಗಿರುತ್ತದೆ. ಆದರೆ ಇದುವರೆಗೆ ವೈಟ್​ ಬಾಲ್​ ಕ್ರಿಕೆಟ್​ ಮಾತ್ರ ಆಡಿರುವ ಸೂರ್ಯ ಏಕದಿನ ಮತ್ತು ಟಿ20 ಸೇರಿದಂತೆ 44 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅದರಲ್ಲೂ ಕೇವಲ 13 ಏಕದಿನ ಪಂದ್ಯಗಳು ಮಾತ್ರ ಆಡಿರುವ ಸೂರ್ಯನನ್ನು ವಿಶ್ರಾಂತಿ ರೂಪದಲ್ಲಿ ತಂಡದಿಂದ ಹೊರಗಿಡುವ ಅವಶ್ಯಕತೆ ಏನಿತ್ತು ಎಂಬುದು ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರ ವಾದವಾಗಿದೆ.

ಆಯಾಸ ಇದ್ದರೆ ಪ್ರದರ್ಶನದ ಮೇಲೆ ಏಕೆ ಪರಿಣಾಮ ಬೀರಿಲ್ಲ?

ಕೇವಲ 31 ಟಿ20 ಪಂದ್ಯಗಳನ್ನಾಡಿರುವ ಸೂರ್ಯನಿಗೆ ಸುಸ್ತಾಗಿದೆ ಎಂಬದುನ್ನು ಬಿಸಿಸಿಐ ಯಾವ ಆಧಾರದ ಮೇಲೆ ನಿರ್ಧಾರ ಮಾಡಿತು ಎಂಬುದು ಇಲ್ಲಿ ಎಲ್ಲರನ್ನು ಕಾಡುವ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಒಂದು ಟಿ20 ಪಂದ್ಯವನ್ನು ಆಡಲು 3 ರಿಂದ 4 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಇನ್ನುಳಿದಂತೆ ಮಿಕ್ಕ ಸಮಯದಲ್ಲಿ ಆಟಗಾರರು ವಿಶ್ರಾಂತಿಯಲ್ಲೇ ಇರುತ್ತಾರೆ. ಒಂದು ವೇಳೆ ಆಟಗಾರನಿಗೆ ವಿಶ್ರಾಂತಿ ಬೇಕಿದೆ ಎಂಬುದು ಆತನ ಆಟದಿಂದಲಾದರೂ ಗೋಚರಿಸಬೇಕು. ಆದರೆ, ಸೂರ್ಯಕುಮಾರ್ ಯಾದವ್ ವಿಷಯದಲ್ಲಿ ಅಂಥದ್ದೇನೂ ಆಗಿಲ್ಲ. ಬದಲಿಗೆ, ಅವರ ಪ್ರದರ್ಶನ ಪ್ರತಿ ಪಂದ್ಯದಲ್ಲೂ ಸುಧಾರಿಸುತ್ತಿದೆ. ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ ಸೂರ್ಯ ನಂಬರ್ ಒನ್ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಹೀಗಿರುವಾಗ ಇನ್​ಫಾರ್ಮ್​ ಆಟಗಾರನಿಗೆ ಬಿಸಿಸಿಐ ತಂಡದಿಂದ ಕೋಕ್ ನೀಡಿದ್ದು ಯಾಕೆ?

ಪ್ರತಿಭಾವಂತ ಆಟಗಾರನ ಭವಿಷ್ಯ ಬೆಂಚ್​ ಮೇಲೆಯೇ ಮುಕ್ತಾಯವಾಗುತ್ತಾ?

ಬಾಂಗ್ಲಾದೇಶ ಪ್ರವಾಸದಿಂದ ಸೂರ್ಯಕುಮಾರ್ ಯಾದವ್ ಅವರಿಗೆ ವಿಶ್ರಾಂತಿ ನೀಡುವ ನಿರ್ಧಾರ ಬಿಸಿಸಿಐ ಬೇಕಂತಲೇ ತೆಗೆದುಕೊಂಡಿರುವ ನಿರ್ಧಾರ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಯಾವುದೇ ತಂಡವಾಗಲಿ, ಒಬ್ಬ ಫಾರ್ಮ್​ನಲ್ಲಿರುವ ಆಟಗಾರನನ್ನು ಇದ್ದಕ್ಕಿದಂತೆ ತಂಡದಿಂದ ಕೈಬಿಡುವುದಿಲ್ಲ. ಬದಲಿಗೆ ಆತನಿಗೆ ತಂಡದಲ್ಲಿ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡುತ್ತದೆ. ಅಲ್ಲದೆ ಸೂರ್ಯಕುಮಾರ್ ಯಾದವ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಆರಂಭವಾಗಿರುವುದೇ ಅತ್ಯಂತ ತಡವಾಗಿ. ಸೂರ್ಯನಿಗೆ ಈಗಾಗಲೇ 31 ವರ್ಷ. ಹೀಗಾಗಿ ಸೂರ್ಯ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬೇಕೆಂದರೆ ಅವರಿಗೆ ತಂಡದಲ್ಲಿ ಹೆಚ್ಚು ಅವಕಾಶ ನೀಡಬೇಕಾಗಿರುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ. ಅದನ್ನು ಬಿಟ್ಟು ಒಬ್ಬ ಪ್ರತಿಭಾವಂತ ಆಟಗಾರನನ್ನು ತಂಡದಿಂದ ಹೊರಗಿಟ್ಟು ಆತನ ಪ್ರತಿಭೆಯನ್ನು ಬೆಂಚ್​ ಮೇಲೆಯೇ ಕಳೆಯುವಂತೆ ಮಾಡುವುದು ಸರಿಯಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Mon, 5 December 22