ಬ್ಯಾಟರ್… ಫೀಲ್ಡರ್… ಈಗ ಸ್ಪಿನ್ನರ್ ಸೂರ್ಯ
India vs Sri Lanka: ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 20 ಓವರ್ಗಳಲ್ಲಿ 137 ರನ್ಗಳಿಸಲಷ್ಟೇ ಶಕ್ತರಾದರು. ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್ ಆಡಿಲಾಯಿತು. ಸೂಪರ್ ಓವರ್ನಲ್ಲಿ ಕೇವಲ 2 ರನ್ಗಳಿಸಿ ಶ್ರೀಲಂಕಾ ತಂಡದ ಇಬ್ಬರು ಬ್ಯಾಟರ್ಗಳು ಔಟಾದರು. ಅದರಂತೆ 3 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲೇ ಫೋರ್ ಬಾರಿಸಿದರು.
ಸೂರ್ಯಕುಮಾರ್ ಯಾದವ್ ಎಂದರೆ ಕಣ್ಮುಂದೆ ಬರುತ್ತಿದದ್ದು 360 ಡಿಗ್ರಿಯ ಬ್ಯಾಟಿಂಗ್… ಆದರೆ ಈ ಬಾರಿಯ ಟಿ20 ವಿಶ್ವಕಪ್ ಫೈನಲ್ನಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ತಾನು ಅತ್ಯುತ್ತಮ ಫೀಲ್ಡರ್ ಎಂಬುದನ್ನು ನಿರೂಪಿಸಿದ್ದರು. ಹೀಗಾಗಿಯೇ ಇದೀಗ ಸೂರ್ಯಕುಮಾರ್ ಎಂದರೆ ಸೌತ್ ಆಫ್ರಿಕಾ ವಿರುದ್ಧದ ಅವಿಸ್ಮರಣೀಯ ಕ್ಯಾಚ್ ಕಣ್ಮುಂದೆ ಬಂದು ಹೋಗುತ್ತೆ. ಇದೀಗ ತಾನು ಆಲ್ರೌಂಡರ್ ಎಂಬುದನ್ನು ಸಹ ನಿರೂಪಿಸಲು ಹೊರಟಿದ್ದಾರೆ. ಹೌದು, ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರುವಾರಿಗಳೆಂದರೆ ಸೂರ್ಯಕುಮಾರ್ ಯಾದವ್ ಹಾಗೂ ರಿಂಕು ಸಿಂಗ್.
ಕೊನೆಯ 2 ಓವರ್ಗಳಲ್ಲಿ 9 ರನ್ ಬೇಕಿದ್ದಾಗ ಕ್ಯಾಪ್ಟನ್ ಸೂರ್ಯ ಚೆಂಡು ನೀಡಿದ್ದು ರಿಂಕು ಸಿಂಗ್ ಕೈಗೆ. ಅದರಂತೆ 19ನೇ ಓವರ್ ಎಸೆದ ರಿಂಕು ಸಿಂಗ್ 2 ವಿಕೆಟ್ ಕಬಳಿಸಿ ಕೇವಲ 3 ರನ್ ಮಾತ್ರ ನೀಡಿದ್ದರು. ಇದಾಗ್ಯೂ ಕೊನೆಯ ಓವರ್ನಲ್ಲಿ ಲಂಕಾ ತಂಡಕ್ಕೆ ಕೇವಲ 6 ರನ್ಗಳ ಅವಶ್ಯಕತೆಯಿತ್ತು. ಎಲ್ಲರೂ ಮೊಹಮ್ಮದ್ ಸಿರಾಜ್ ಅಥವಾ ಖಲೀಲ್ ಅಹ್ಮದ್ಗೆ ಚೆಂಡು ನೀಡುತ್ತಾರೆ ಎಂದು ಭಾವಿಸಿದ್ದರು.
ಆದರೆ ಕೊನೆಯ ಓವರ್ನ ಸಂಪೂರ್ಣ ಹೊಣೆಯನ್ನು ಖುದ್ದು ಸೂರ್ಯಕುಮಾರ್ ಯಾದವ್ ಹೊತ್ತುಕೊಂಡರು. ಅಲ್ಲದೆ ಅದ್ಭುತ ಸ್ಪಿನ್ ಮೋಡಿ ಮಾಡಿದ ಸೂರ್ಯ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡದೇ ಲಂಕಾ ಬ್ಯಾಟರ್ಗಳ ಮೇಲೆ ಒತ್ತ ಹೇರಿದರು. ಇನ್ನು 2ನೇ ಮತ್ತು 3ನೇ ಎಸೆತಗಳಲ್ಲಿ ವಿಕೆಟ್ ಕಬಳಿಸಿದರು. 4ನೇ ಎಸೆತದಲ್ಲಿ ಒಂದು ರನ್. 5ನೇ ಎಸೆತದಲ್ಲಿ ಲಂಕಾ ಬ್ಯಾಟರ್ಗಳು 2 ರನ್ ಓಡಿದರು. ಕೊನೆಯ ಎಸೆತದಲ್ಲಿ 3 ರನ್ಗಳು ಬೇಕಿತ್ತು. ಈ ವೇಳೆ ಕೇವಲ 2 ರನ್ ಮಾತ್ರ ನೀಡುವ ಮೂಲಕ ಸೂರ್ಯಕುಮಾರ್ ಯಾದವ್ ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ನಾನು ಬ್ಯಾಟರ್, ಫೀಲ್ಡರ್ ಮಾತ್ರವಲ್ಲ ಬೌಲರ್ ಕೂಡ ಎಂಬುದನ್ನು ಸೂರ್ಯಕುಮಾರ್ ಯಾದವ್ ಸಾರಿ ಹೇಳಿದ್ದಾರೆ. ಇದೀಗ ಸೂರ್ಯನ ಕೊನೆಯ ಓವರ್ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ವಿಡಿಯೋವನ್ನು ಈ ಮೇಲೆ ನೀಡಲಾಗಿದೆ.