ಟೀಮ್ ಇಂಡಿಯಾ ಗೆದ್ದರೂ ನಿರಾಶೆ ವ್ಯಕ್ತಪಡಿಸಿದ ರಿಯಾನ್ ಪರಾಗ್
India vs Sri Lanka: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದ ರಿಯಾನ್ ಪರಾಗ್ 1.2 ಓವರ್ಗಳಲ್ಲಿ 5 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಆದರೆ ಆ ಬಳಿಕ ನಡೆದ ಎರಡು ಪಂದ್ಯಗಳಲ್ಲಿ ಒಟ್ಟು 8 ಓವರ್ಗಳನ್ನು ಎಸೆದರೂ ಒಂದೇ ಒಂದು ವಿಕೆಟ್ ಕಬಳಿಸಿಲ್ಲ. ಇನ್ನು ಬ್ಯಾಟಿಂಗ್ನಲ್ಲಿ ಉಪಯುಕ್ತ ಕಾಣಿಕೆ ನೀಡುವಲ್ಲಿ ಯುವ ದಾಂಡಿಗ ಯಶಸ್ವಿಯಾಗಿದ್ದಾರೆ.
ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 137 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಪಂದ್ಯವು ಸೂಪರ್ ಓವರ್ನತ್ತ ಸಾಗಿತು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವನ್ನು 2 ರನ್ಗಳಿಗೆ ನಿಯಂತ್ರಿಸುವಲ್ಲಿ ವಾಷಿಂಗ್ಟನ್ ಸುಂದರ್ ಯಶಸ್ವಿಯಾದರು. ಕೇವಲ 3 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲೇ ಫೋರ್ ಬಾರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಭಾರತ ತಂಡವು 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾದ ಯುವ ಆಲ್ರೌಂಡರ್ ರಿಯಾನ್ ಪರಾಗ್, ನನ್ನ ಪ್ರದರ್ಶನದ ಬಗ್ಗೆ ನಿಜವಾಗಿಯೂ ನಿರಾಶೆಗೊಂಡಿದ್ದೇನೆ. ಏಕೆಂದರೆ ಬ್ಯಾಟಿಂಗ್ ವೇಳೆ ನಾನು ಕೊನೆಯವರೆಗೂ ಬ್ಯಾಟಿಂಗ್ ಮಾಡಬೇಕಾಗಿತ್ತು. ಬಹುಶಃ ನಾನು ಔಟಾಗದಿದ್ದರೆ ಭಾರತ ತಂಡವು 160 ಗಳಿಸುತ್ತಿತ್ತು ಎಂದು ತಿಳಿಸಿದ್ದಾರೆ.
ಇದಾಗ್ಯೂ ಕಡಿಮೆ ಮೊತ್ತಗಳಿಸಿದರೂ ನಾನು ಉತ್ತಮ ಬೌಲಿಂಗ್ ಮಾಡಿದ್ದೆವು. ಬೌಲಿಂಗ್ನಲ್ಲಿ ನನ್ನ ಪ್ರದರ್ಶನ ಖುಷಿ ನೀಡಿದೆ. ನಾನು ನನ್ನ ಪ್ಲ್ಯಾನ್ಗಳನ್ನು ತುಂಬಾ ಸರಳವಾಗಿ ಇರಿಸಲು ಬಯಸುತ್ತೇನೆ. ಹೀಗಾಗಿಯೇ ನಾನು ಲೆಗ್-ಬ್ರೇಕ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ.
ದೇಶೀಯ ಕ್ರಿಕೆಟ್ನಲ್ಲಿ ಲೆಗ್ ಬ್ರೇಕ್ ಎಸೆತಗಳನ್ನು ಪ್ರಯತ್ನಿಸಿದ್ದೆ. ಕೆಲವು ನೆಟ್ ಸೆಷನ್‌ಗಳನ್ನು ಅಭ್ಯಾಸ ಮಾಡಿದ್ದೇನೆ. ಇದೀಗ ನನ್ನ ಬೌಲಿಂಗ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ನಾಯಕ ಸೂರ್ಯಕುಮಾರ್ ಯಾದವ್ ಕೂಡ ಲೆಗ್ ಬ್ರೇಕ್ ಎಸೆಯುವಂತೆ ಸೂಚಿಸಿದ್ದರು. ಇದು ಸಹ ನನಗೆ ಖುಷಿ ನೀಡಿತು ಎಂದು ರಿಯಾನ್ ಪರಾಗ್ ಹೇಳಿದ್ದಾರೆ.
ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಯಾನ್ ಪರಾಗ್ 18 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ 26 ರನ್ ಕಲೆಹಾಕಿದ್ದರು. ಹಾಗೆಯೇ ಬೌಲಿಂಗ್ನಲ್ಲಿ 4 ಓವರ್ ಎಸೆದಿದ್ದ ಪರಾಗ್ 27 ರನ್ ನೀಡಿದರೂ ಯಾವುದೇ ವಿಕೆಟ್ ಪಡೆದಿರಲಿಲ್ಲ.
ಇದನ್ನೂ ಓದಿ: IPL 2025: RCB ತಂಡದಿಂದ ಗ್ಲೆನ್ ಮ್ಯಾಕ್ಸ್ವೆಲ್ ಔಟ್?
ಇನ್ನು ರಿಯಾನ್ ಪರಾಗ್ ಭಾರತ ಏಕದಿನ ತಂಡದಲ್ಲೂ ಸ್ಥಾನ ಪಡೆದಿದ್ದು, ಅದರಂತೆ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾದಾರ್ಪಣೆ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.