AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವು ಉದ್ದೇಶಪೂರ್ವಕವಾಗಿಯೇ ಹೀಗೆ ಆಡಿದ್ದೇವೆ: ಸೂರ್ಯಕುಮಾರ್ ಅಚ್ಚರಿ ಹೇಳಿಕೆ

India vs New Zealand: ಭಾರತದ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 215 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 165 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಕಿವೀಸ್ ಪಡೆ 50 ರನ್​ಗಳ ಜಯ ಸಾಧಿಸಿದೆ.

ನಾವು ಉದ್ದೇಶಪೂರ್ವಕವಾಗಿಯೇ ಹೀಗೆ ಆಡಿದ್ದೇವೆ: ಸೂರ್ಯಕುಮಾರ್ ಅಚ್ಚರಿ ಹೇಳಿಕೆ
Suryakumar Yadav
ಝಾಹಿರ್ ಯೂಸುಫ್
|

Updated on: Jan 29, 2026 | 8:24 AM

Share

ಭಾರತದ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಜಯಭೇರಿ ಬಾರಿಸಿದೆ. ವಿಶಾಖಪಟ್ಟಣದ ಎಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ 215 ರನ್​ ಕಲೆಹಾಕಿತು.

ಈ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 18.4 ಓವರ್​ಗಳಲ್ಲಿ 165 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 50 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ನಾವು ಉದ್ದೇಶಪೂರ್ವಕವಾಗಿ ಆರು ಬ್ಯಾಟ್ಸ್‌ಮನ್‌ಗಳೊಂದಿಗೆ ಆಡಿದ್ದೇವೆ. ಏಕೆಂದರೆ ನಾವು ತಂಡದಲ್ಲಿ ಐದು ಪರಿಪೂರ್ಣ ಬೌಲರ್‌ಗಳನ್ನು ಹೊಂದಲು ಬಯಸಿದ್ದೆವು. ಅದಕ್ಕಾಗಿ ಉದ್ದೇಶಪೂರ್ವಕವಾಗಿಯೇ ಹೀಗೆ ಆಡಲು ನಿರ್ಧರಿಸಿದ್ದೆವು.

ಇಂತಹದೊಂದು ನಿರ್ಧಾರಕ್ಕೆ ಮುಖ್ಯ ಕಾರಣ, ನಮಗೆ ನಾವೇ ಸವಾಲೆಸೆಯುವುದಾಗಿದೆ. ಉದಾಹರಣೆಗೆ, ನಾವು 200 ಅಥವಾ 180 ರನ್‌ಗಳನ್ನು ಬೆನ್ನಟ್ಟುತ್ತಿದ್ದರೆ, ಎರಡು ಅಥವಾ ಮೂರು ವಿಕೆಟ್ ಕಳೆದುಕೊಂಡ ಬಳಿಕ ನಾವು ಹೇಗೆ ಚೇಸ್ ಮಾಡುತ್ತೇವೆ ಎಂಬುದು ಗೊತ್ತಾಗಬೇಕಿತ್ತು. ಈ ಮೂಲಕ ನಮ್ಮ ಸ್ಟ್ರಾಟಜಿಯನ್ನು ಪರೀಕ್ಷಿಸಲು ಬಯಸಿದ್ದೆವು.

ಅದಕ್ಕಾಗಿ ವಿಶ್ವಕಪ್ ತಂಡದ ಭಾಗವಾಗಿರುವ ಎಲ್ಲಾ ಆಟಗಾರರನ್ನು ಆಡಿಸಲು ನಿರ್ಧರಿಸಿದ್ದೆವು. ಈ ಮೂಲಕ ಇತರೆ ಬ್ಯಾಟರ್​ಗಳಿಗೂ ಹೆಚ್ಚಿನ ಓವರ್​ ಆಡಲು ಅನುಕೂಲ ಮಾಡಲು ಬಯಸಿದ್ದೆವು. ಏಕೆಂದರೆ ನಾವು ಮೊದಲು ಬ್ಯಾಟಿಂಗ್ ಮಾಡಿದಾಗ ನಿಜವಾಗಿಯೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೇವೆ. ಆದರೆ 180 ಅಥವಾ 200 ರನ್​ಗಳ ಚೇಸಿಂಗ್ ವೇಳೆ ಹೇಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂಬ ಪ್ರಯೋಗ ನಡೆಸಬೇಕಿತ್ತು. ಹೀಗಾಗಿ ಉದ್ದೇಶಪೂರ್ವಕವಾಗಿ ನಾವು ಕೇವಲ 6 ಬ್ಯಾಟರ್​ಗಳೊಂದಿಗೆ ಮಾತ್ರ ಕಣಕ್ಕಿಳಿದಿದ್ದೇವೆ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಮುಂದಿನ ಪಂದ್ಯದಲ್ಲೂ ನಾವು ಚೇಸಿಂಗ್ ಮಾಡಲು ಬಯಸುತ್ತೇವೆ. ಈ ಮೂಲಕ ಬೃಹತ್ ಗುರಿಯನ್ನು ಚೇಸ್ ಮಾಡುವುದನ್ನು ಕರಗತ ಮಾಡಿಕೊಳ್ಳಬೇಕಿದೆ. ಇದೀಗ ನಾವು 50 ರನ್​ಗಳಿಂದ ಸೋತಿದ್ದೇವೆ, ಆದರೆ ಪರವಾಗಿಲ್ಲ. ನಾನು ಹೇಳಿದಂತೆ, ಈ ರೀತಿಯ ರನ್-ಚೇಸ್‌ನಲ್ಲಿ ಈ ರೀತಿಯ ಒಂದು ಅಥವಾ ಎರಡು ಪಾಲುದಾರಿಕೆಗಳು ವ್ಯತ್ಯಾಸವನ್ನುಂಟುಮಾಡಬಹುದು. ಹೀಗಾಗಿ ಟಿ20 ವಿಶ್ವಕಪ್​ಗೂ ಮುನ್ನ ಈ ಪ್ರಯೋಗ ಮುಂದುವರೆಸಲು ಬಯಸುತ್ತೇನೆ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.

ಇದನ್ನೂ ಓದಿ: ಹೀಗಾದ್ರೆ RCB ನೇರವಾಗಿ ಫೈನಲ್​ಗೇರುತ್ತೆ..!

ಸೂರ್ಯಕುಮಾರ್ ಯಾದವ್ ಹೇಳಿದಂತೆ ಜನವರಿ 31 ರಂದು ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಟಾಸ್ ಗೆದ್ದರೆ ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆಯಿದೆ. ಈ ಮೂಲಕ ಬೃಹತ್ ಮೊತ್ತದ ಚೇಸಿಂಗ್​ಗೆ ಪ್ರಯತ್ನಿಸಲಿದೆ. ಏಕೆಂದರೆ ಭಾರತ ತಂಡವು ಟಿ20 ಕ್ರಿಕೆಟ್​ನಲ್ಲಿ ಈವರೆಗೆ 210 ಕ್ಕಿಂತ ಹೆಚ್ಚಿನ ಮೊತ್ತ ಚೇಸ್ ಮಾಡಿ ಗೆದ್ದ ಇತಿಹಾಸ ಹೊಂದಿಲ್ಲ. ಹೀಗಾಗಿ ಟಿ20 ವಿಶ್ವಕಪ್​ಗೂ ಮುನ್ನ ಭಾರತ ತಂಡವು ತನ್ನ ಈ ದೌರ್ಬಲ್ಯವನ್ನು ಸರಿಪಡಿಸಲು ಪ್ಲ್ಯಾನ್ ರೂಪಿಸುತ್ತಿದೆ.