ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಅನೇಕ ಹೊಸ ಮುಖಗಳಿಗೆ ಅವಕಾಶ ನೀಡಿತು. ಒಂದೇ ಒಂದು ಸರಣಿ ಮೂಲಕ ಟೀಮ್ ಇಂಡಿಯಾದ 7 ಮಂದಿ ಪದಾರ್ಪಣೆ ಮಾಡಿದರು. ಮೊದಲ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಪದಾರ್ಪಣೆ ಮಾಡಿದರೆ, 3ನೇ ಏಕದಿನದಲ್ಲಿ ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ಚೇತನ್ ಸಕರಿಯಾ, ರಾಹುಲ್ ಚಹರ್ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಟೀಮ್ ಇಂಡಿಯಾ ಪರ ಅವಕಾಶ ಪಡೆದರು. ಇನ್ನು ಈ ಸರಣಿ ಮೂಲಕ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ದೀಪಕ್ ಚಹರ್ ತಮ್ಮ ಸಾಮರ್ಥ್ಯವನ್ನು ಧಾರೆಯೆರೆದಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ 3 ಪಂದ್ಯಗಳಲ್ಲೂ ಕಣಕ್ಕಿಳಿದ ಮನೀಶ್ ಪಾಂಡೆಯಿಂದ ಮಾತ್ರ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
ಪಾಂಡೆ ಮೊದಲ ಪಂದ್ಯದಲ್ಲಿ 40 ಎಸೆತಗಳಲ್ಲಿ 26 ರನ್ ಗಳಿಸಿದರೆ, 2ನೇ ಪಂದ್ಯದಲ್ಲಿ 37 ರನ್ ಬಾರಿಸಿದ್ದರು. ಹಾಗೆಯೇ ಮೂರನೇ ಪಂದ್ಯದಲ್ಲಿ ಕೇವಲ 11 ರನ್ಗಳಿಸಿ ಔಟಾಗಿದ್ದರು. ಅತ್ತ ಮಧ್ಯಮ ಕ್ರಮಾಂಕದಲ್ಲಿ ಸಿಕ್ಕ ಅವಕಾಶವನ್ನು ಸೂರ್ಯಕುಮಾರ್ ಉತ್ತಮವಾಗಿ ಬಳಸಿಕೊಂಡಿದ್ದಾರೆ. ಹೀಗಾಗಿಯೇ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದಲ್ಲಿ ಮನೀಶ್ ಪಾಂಡೆ ಅವಕಾಶಗಳ ಸಾಧ್ಯತೆ ಕ್ಷೀಣ ಎಂದು ವಿಶ್ಲೇಷಿಸಲಾಗುತ್ತಿದೆ.
ಟೀಮ್ ಇಂಡಿಯಾದಲ್ಲಿ ಸೂರ್ಯಕುಮಾರ್ ಯಾದವ್ ವಿಶ್ವಾಸಾರ್ಹ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮುವುದರೊಂದಿಗೆ, ತಂಡದಲ್ಲಿ ಪಾಂಡೆ ಸ್ಥಾನವು ಸಂದೇಹದಲ್ಲಿದೆ. ಮೂರನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾ 6 ಬದಲಾವಣೆ ಮಾಡಿದರೂ, ಪಾಂಡೆ ಅವರಿಗೆ ಅವಕಾಶ ನೀಡಿತ್ತು. 3ನೇ ಪಂದ್ಯದ ಬಳಿಕ ಸೂರ್ಯಕುಮಾರ್ ಅವರಿಗೆ, ಹಿಂದಿನ ಪಂದ್ಯಗಳಲ್ಲಿ ದೊಡ್ಡ ಸ್ಕೋರ್ ಮಾಡಲು ವಿಫಲರಾದರೂ, 3ನೇ ಏಕದಿನ ಪಂದ್ಯದಲ್ಲಿ ಮನೀಶ್ ಪಾಂಡೆ ಹೇಗೆ ತಮ್ಮ ಸ್ಥಾನ ಲಭಿಸಿತು ಎಂದು ಕೇಳಲಾಯಿತು.
ಈ ಪ್ರಶ್ನೆಗೆ ಉತ್ತರಿಸಿದ ಸೂರ್ಯಕುಮಾರ್ ಯಾದವ್, “ಅದು ಸಂಪೂರ್ಣವಾಗಿ ಟೀಮ್ ಮ್ಯಾನೇಜ್ಮೆಂಟ್ ನಿರ್ಧಾರವಾಗಿತ್ತು. ನಾನು ಅದರಲ್ಲಿ ಭಾಗಿಯಾಗಿಲ್ಲ. ಅಭ್ಯಾಸ ಪಂದ್ಯಗಳಲ್ಲಿ ನಾವು ನೋಡಿದಂತೆ ಮನೀಶ್ ಪಾಂಡೆ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ನಾವು ಇಂಟ್ರಾ-ಸ್ಕ್ವಾಡ್ ಪಂದ್ಯಗಳನ್ನೂ ಆಡಿದ್ದೇವೆ. ಕೊನೆಯ ಪಂದ್ಯದಲ್ಲಿ ಅವರು ನಿಜವಾಗಿಯೂ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ದುರದೃಷ್ಟ ಶ್ರೀಲಂಕಾ ವಿರುದ್ದ ಅವರು ಚೆನ್ನಾಗಿ ಆಡಲು ಸಾಧ್ಯವಾಗಿಲ್ಲ. ಅವರ ಸೆಲೆಕ್ಷನ್ ನನ್ನದಾಗಿರಲಿಲ್ಲ. ಹಾಗಾಗಿ ಇದರ ಬಗ್ಗೆ ನನಗೆ ನಿಜವಾಗಿಯೂ ತಿಳಿದಿಲ್ಲ “ಎಂದು ಸೂರ್ಯಕುಮಾರ್ ತಿಳಿಸಿದರು.
ಸೋಲಿನ ಹೊರತಾಗಿ ಭಾರತಕ್ಕೆ ಸರಣಿ ಜಯ:
ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಕೇವಲ 225 ರನ್ ಗಳಿಸಲಷ್ಟೇ ಶಕ್ತರಾದರು. ಪೃಥ್ವಿ ಶಾ ಮತ್ತು ಸಂಜು ಸ್ಯಾಮ್ಸನ್ ಕ್ರಮವಾಗಿ 49 ಮತ್ತು 46 ರನ್ ಗಳಿಸಿದರೆ, ಸೂರ್ಯಕುಮಾರ್ 37 ಎಸೆತಗಳಲ್ಲಿ 40 ರನ್ ಬಾರಿಸಿದರು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ 39 ನೇ ಓವರ್‌ನಲ್ಲಿ 3 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಇದಾಗ್ಯೂ ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದರಿಂದ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!
ಇದನ್ನೂ ಓದಿ: Ola Electric scooters: ಮೈಲೇಜ್ ಬರೋಬ್ಬರಿ 240 ಕಿ.ಮೀ: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಓಲಾ ಸ್ಕೂಟರ್..!
(Suryakumar Yadav responds to questions on Manish Pandey’s place in the ODI side)