Suryakumar Yadav
ಈ ವರ್ಷ ಸೂರ್ಯಕುಮಾರ್ ಯಾದವ್ (Suryakumar Yadav) ಬ್ಯಾಟಿಂಗ್ ಅಬ್ಬರವನ್ನು ತಡೆಯಲು ಯಾವುದೇ ಬೌಲರ್ಗೂ ಸಾಧ್ಯವಾಗುತ್ತಿಲ್ಲ. ಟಿ20 ವಿಶ್ವಕಪ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ದಾಖಲೆಗಳ ಮೇಲೆ ದಾಖಲೆ ಬರೆದ ಸೂರ್ಯ, ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ತಮ್ಮ ಎಂದಿನ ಆಟವನ್ನು ಮುಂದುವರೆಸಿದರು. ಈ ಮಳೆ ಬಾಧಿತ ಪಂದ್ಯದಲ್ಲಿ ಸೂರ್ಯ ಮೈದಾನಕ್ಕೆ ಇಳಿದ ಕೂಡಲೇ ಅವರ ಬ್ಯಾಟ್‌ನಿಂದಲೂ ರನ್ ಮಳೆ ಸುರಿಯಿತು. ಸೂರ್ಯ ಕೇವಲ 51 ಎಸೆತಗಳಲ್ಲಿ 111 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಈ ವೇಳೆ ಅವರು 11 ಬೌಂಡರಿ ಹಾಗೂ 7 ಸಿಕ್ಸರ್‌ಗಳನ್ನು ಬಾರಿಸಿದರು. ಈ ಸ್ಫೋಟಕ ಬ್ಯಾಟ್ಸ್‌ಮನ್ ತನ್ನ ಬಿರುಗಾಳಿಯ ಬ್ಯಾಟಿಂಗ್ ಮೂಲಕ ವಿಶ್ವದಾಖಲೆಯನ್ನೂ ಮಾಡಿದ್ದಾರೆ.
ಪಂತ್ ವಿಕೆಟ್ ಬಳಿಕ 2ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಸೂರ್ಯ ತಮ್ಮ ಆರಂಭಿಕ 50 ರನ್‌ಗಳನ್ನು 32 ಎಸೆತಗಳಲ್ಲಿ ಪೂರ್ಣಗೊಳಿಸಿದ್ದರೆ, ಮುಂದಿನ 50 ರನ್‌ಗಳನ್ನು ಕೇವಲ 17 ಎಸೆತಗಳಲ್ಲಿ ಹೊಡೆಯುವ ಮೂಲಕ ಶತಕವನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಸೂರ್ಯ ಹಲವು ದಾಖಲೆಗಳನ್ನು ಸಹ ಬರೆದಿದ್ದಾರೆ.
- ಒಂದು ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ ನಾನ್ ಓಪನರ್ ಆಗಿ 1000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಸೂರ್ಯ ಪಾತ್ರರಾಗಿದ್ದಾರೆ. ಅವರು ಈ ವರ್ಷ 30 ಇನ್ನಿಂಗ್ಸ್‌ಗಳಲ್ಲಿ 47.95 ಸರಾಸರಿಯಲ್ಲಿ 1151 ರನ್ ಗಳಿಸಿದ್ದಾರೆ. ಸೂರ್ಯ 188.37 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 9 ಅರ್ಧ ಶತಕ ಮತ್ತು 2 ಶತಕಗಳನ್ನು ಬಾರಿಸಿದ್ದಾರೆ.
- ಭಾರತ ತಂಡದ ನಾಯಕ ರೋಹಿತ್ ಶರ್ಮಾ ನಂತರ ಒಂದೇ ವರ್ಷದಲ್ಲಿ 2 ಟಿ20 ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಸೂರ್ಯಕುಮಾರ್ ಯಾದವ್.
- ಸೂರ್ಯ ಅವರ ಔಟಾಗದೆ 111 ರನ್‌ಗಳ ಇನ್ನಿಂಗ್ಸ್ ಟಿ20 ಕ್ರಿಕೆಟ್‌ನಲ್ಲಿ ಯಾವುದೇ ಭಾರತೀಯ ಬ್ಯಾಟ್ಸ್‌ಮನ್‌ನ ನಾಲ್ಕನೇ ಅತ್ಯಧಿಕ ಇನ್ನಿಂಗ್ಸ್ ಆಗಿದೆ. ಭಾರತ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಅವರು ಈ ವರ್ಷ ದುಬೈನಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಜೇಯ 122 ರನ್ ಗಳಿಸಿದರು. ಎರಡನೇ ಸ್ಥಾನದಲ್ಲಿ ರೋಹಿತ್ ಅವರ 118 ರನ್‌ಗಳ ಇನ್ನಿಂಗ್ಸ್ ಇದ್ದು, ಇಂಗ್ಲೆಂಡ್ ವಿರುದ್ಧ ಆಡಿದ 117 ರನ್‌ಗಳ ಸೂರ್ಯ ಅವರ ಇನ್ನಿಂಗ್ಸ್ ಮೂರನೇ ಸ್ಥಾನದಲ್ಲಿದೆ.
- ಸೂರ್ಯಕುಮಾರ್ ಯಾದವ್ ಈ ವರ್ಷ 11ನೇ ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದು ಯಾವುದೇ ಭಾರತೀಯ ಆಟಗಾರನ ಅತ್ಯುತ್ತಮ ಪ್ರದರ್ಶನವಾಗಿದೆ. ಅದೇ ಸಮಯದಲ್ಲಿ, ಒಂದು ವರ್ಷದಲ್ಲಿ 10 ಕ್ಕೂ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಬಾಬರ್ ಅಜಮ್ ದಾಖಲೆಯನ್ನು ಮುರಿದಿದ್ದಾರೆ.
- ಸೂರ್ಯಕುಮಾರ್ ಯಾದವ್ ಒಂದು ವರ್ಷದಲ್ಲಿ ಎರಡು ಟಿ20 ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್. ಇದಕ್ಕೂ ಮುನ್ನ 2018ರಲ್ಲಿ ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದರು. ಅಲ್ಲದೆ ಟಿ20ಯಲ್ಲಿ 100 ಬೌಂಡರಿಗಳನ್ನು ಪೂರೈಸಿದ ದಾಖಲೆಯನ್ನು ಸಹ ಸೂರ್ಯಕುಮಾರ್ ಯಾದವ್ ಬರೆದರು.