ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ಏಳು ವಿಕೆಟ್‌ಗಳಿಂದ ಬರೋಡಾ ತಂಡವನ್ನು ಸೋಲಿಸಿತು. ಕರ್ನಾಟಕದ ಈ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಅವರ ವಿಶೇಷ ಆಟಗಾರ ಪ್ರಮುಖ ಪಾತ್ರ ವಹಿಸಿದ್ದರು. ಈ ಆಟಗಾರ ತನ್ನ ಬ್ಯಾಟ್‌ನಿಂದ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಬ್ಯಾಟ್ಸ್‌ಮನ್‌ನ ಹೆಸರು ದೇವದತ್ ಪಡಿಕ್ಕಲ್. ಪಡಿಕ್ಕಲ್ 47 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿ ಗೆಲುವಿನ ನಗೆ ಬೀರಿದರು. ಮೊದಲು ಬ್ಯಾಟ್ ಮಾಡಿದ ಬರೋಡಾ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಶಕ್ತವಾಯಿತು. ಪಡಿಕ್ಕಲ್ ಅವರ ಅರ್ಧಶತಕದ ಹಿನ್ನಲೆಯಲ್ಲಿ ಕರ್ನಾಟಕ 19.1 ಓವರ್‌ಗಳಲ್ಲಿ ಗುರಿ ಬೆನ್ನಟ್ಟಿತು.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಪಡಿಕ್ಕಲ್ ಆಡುತ್ತಾರೆ. ಅವರು ಈ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಪಡಿಕ್ಕಲ್ 2020 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಅಂದಿನಿಂದ ಅವರು ಈ ಲೀಗ್‌ನಲ್ಲಿ ರನ್ ಗಳಿಸುತ್ತಿದ್ದಾರೆ. ಇದುವರೆಗೆ ಪಡಿಕ್ಕಲ್ ಒಟ್ಟು 29 ಐಪಿಎಲ್ ಪಂದ್ಯಗಳನ್ನು ಆಡಿದ್ದು, 31.57ರ ಸರಾಸರಿಯಲ್ಲಿ 884 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಆರು ಅರ್ಧ ಶತಕಗಳು ಸೇರಿವೆ.
ಪಂದ್ಯದ ಸಾರಾಂಶ ಹೀಗಿದೆ
ಬರೋಡಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಾಯಕ ಕೃನಾಲ್ ಪಾಂಡ್ಯ ಅವರ ಈ ನಿರ್ಧಾರವನ್ನು ತಂಡದ ಬ್ಯಾಟ್ಸ್‌ಮನ್‌ಗಳು ಸಮರ್ಥಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಂಡದ ಆಟಗಾರರು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಇದ್ದರು. ಮೊದಲಿಗೆ ಒಟ್ಟು ಸ್ಕೋರ್ 18ರಲ್ಲಿ ಕೇದಾರ್ ದಿಯೋಧರ್ ವಿಕೆಟ್ ಪತನವಾಯಿತು. ವಿಷ್ಣು ಸೋಲಂಕಿ 17 ರನ್ ಗಳಿಸುವಲ್ಲಿ ಯಶಸ್ವಿಯಾದರು. ಧ್ರುವ ಪಟೇಲ್ 23 ರನ್ ಕೊಡುಗೆ ನೀಡಿದರು. ಭಾನು ಪಾನಿಯಾ 36 ಮತ್ತು ಪಾರ್ಥ್ ಕೊಹ್ಲಿ 24 ರನ್ ಗಳಿಸಿದರು. ಬರೋಡಾ ತಂಡವು ಕರ್ನಾಟಕದ ಮುಂದೆ ಹೆಚ್ಚು ಪ್ರಬಲ ಸ್ಕೋರ್ ಮಾಡಲಿಲ್ಲ. ಮಯಾಂಕ್ ಅಗರ್ವಾಲ್ ಮತ್ತು ಪಡಿಕ್ಕಲ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 73 ರನ್ ಸೇರಿಸಿದರು. 10ನೇ ಓವರ್‌ನ ಎರಡನೇ ಎಸೆತದಲ್ಲಿ ಈ ಜೋಡಿ ಮುರಿದುಬಿತ್ತು. ಮಯಾಂಕ್ ಅವರನ್ನು ಔಟ್ ಮಾಡುವ ಮೂಲಕ ರಾಥವ್ ಈ ಜೊತೆಯಾಟವನ್ನು ಮುರಿದರು. ನಾಯಕ ಮನೀಶ್ ಪಾಂಡೆ ಕೇವಲ ಮೂರು ರನ್ ಗಳಿಸಲಷ್ಟೇ ಶಕ್ತರಾದರು. ದೇವದತ್ ಪಡಿಕ್ಕಲ್ ಅವರ ಇನ್ನಿಂಗ್ಸ್ ಒಟ್ಟು 104 ಸ್ಕೋರ್‌ನಲ್ಲಿ ಕೊನೆಗೊಂಡಿತು.
ಅವರ ನಂತರ ಕರುಣ್ ನಾಯರ್ ಮತ್ತು ಅನಿರುದ್ಧ್ ಜೋಶಿ ತಂಡವನ್ನು ಗೆಲುವಿನ ಹೊಸ್ತಿಲು ದಾಟಿಸಿದರು. ನಾಯರ್ 25 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 36 ರನ್ ಗಳಿಸಿದರು. ಜೋಶಿ ಎಂಟು ಎಸೆತಗಳಲ್ಲಿ ಒಂದು ಸಿಕ್ಸರ್ ನೆರವಿನಿಂದ ಔಟಾಗದೆ 11 ರನ್ ಗಳಿಸಿದರು. ರಾಥವ್ ಬರೋಡಾ ಪರ ಎರಡು ವಿಕೆಟ್ ಗಳಿಸಿದರು. ಲುಕ್ಮಾನ್ ಮೇರಿವಾಲಾ ಒಂದು ವಿಕೆಟ್ ಪಡೆದರು.