SMAT 2021: ಅಭಿನವ್ ಮನೋಹರ ಆಟ: ರೋಚಕ ಗೆಲುವಿನೊಂದಿಗೆ ಕ್ವಾರ್ಟರ್​ ಫೈನಲ್​ಗೆ ಕರ್ನಾಟಕ

| Updated By: ಝಾಹಿರ್ ಯೂಸುಫ್

Updated on: Nov 16, 2021 | 4:38 PM

syed mushtaq ali trophy 2021: ಅಂತಿಮ ಹಂತದವರೆಗೂ ಏಕಾಂಗಿಯಾಗಿ ಹೋರಾಡಿದ ಅಭಿನವ್ ಮನೋಹರ್ 6 ಸಿಕ್ಸ್ ಹಾಗೂ 2 ಬೌಂಡರಿಯೊಂದಿಗೆ 49 ಎಸೆತಗಳಲ್ಲಿ 70 ರನ್​ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.

SMAT 2021: ಅಭಿನವ್ ಮನೋಹರ ಆಟ: ರೋಚಕ ಗೆಲುವಿನೊಂದಿಗೆ ಕ್ವಾರ್ಟರ್​ ಫೈನಲ್​ಗೆ ಕರ್ನಾಟಕ
ಸಾಂದರ್ಭಿಕ ಚಿತ್ರ
Follow us on

ಸೈಯದ್ ಮುಷ್ತಾಕ್ ಅಲಿ ಟ್ರೋಫಿ (Syed Mushtaq Ali Trophy 2021) ಟೂರ್ನಿಯಲ್ಲಿ 2ನೇ ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಕರ್ನಾಟಕ ತಂಡವು ಸೌರಾಷ್ಟ್ರ ವಿರುದ್ದ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮನೀಷ್ ಪಾಂಡೆ ಬಳಗವು ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ಬ್ಯಾಟಿಂಗ್ ಆಯ್ದುಕೊಂಡಿತು. ಕರ್ನಾಟಕ ಬೌಲರುಗಳ ಉತ್ತಮ ಬೌಲಿಂಗ್ ಪರಿಣಾಮ ಸೌರಾಷ್ಟ್ರ 10 ರನ್​ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಶೆಲ್ಡನ್ ಜಾಕ್ಸನ್ 3 ಸಿಕ್ಸ್ ಹಾಗೂ 3 ಬೌಂಡರಿಯೊಂದಿಗೆ 43 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು.

ಇನ್ನು ಅಂತಿಮ ಹಂತದಲ್ಲಿ ಚಿರಾಗ್ (13) ಸಮರ್ಥ್ ವ್ಯಾಸ್ ಬಿರುಸಿನ 17 ರನ್​ ಕಲೆಹಾಕುವ ಮೂಲಕ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ ತಂಡದ ಮೊತ್ತವನ್ನು 145 ಕ್ಕೆ ತಂದು ನಿಲ್ಲಿಸಿದರು. ಕರ್ನಾಟಕ ಪರ ಕೌಶಿಕ್, ಕಾರ್ಯಪ್ಪ ಹಾಗೂ ವೈಶಾಖ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಈ ಸಾಧಾರಣ ಸವಾಲನ್ನು ಬೆನ್ನತ್ತಿದ ಕರ್ನಾಟಕ ತಂಡದ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಓವರ್​ನಲ್ಲಿ ಬಿಎಆರ್ ಶರತ್ ಶೂನ್ಯಕ್ಕೆ ಔಟಾದರೆ, ಅದರ ಬೆನ್ನಲ್ಲೇ ಮನೀಷ್ ಪಾಂಡೆ (4) ಕೂಡ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಕರುಣ್ ನಾಯರ್ ಕೂಡ ಕೇವಲ 5 ರನ್​ಗಳಿಸಿ ನಿರ್ಗಮಿಸಿದರು. ಇದಾಗ್ಯೂ ಮತ್ತೊಂದೆಡೆ ಆರಂಭಿಕ ರೋಹನ್ ಕದಮ್ ಕ್ರೀಸ್ ಕಚ್ಚಿ ನಿಂತಿದ್ದರು.

5ನೇ ವಿಕೆಟ್​ಗೆ ಜೊತೆಗೂಡಿದ ಕದಮ್ ಹಾಗೂ ಅಭಿನವ್ ಮನೋಹರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 64 ರನ್​ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಹಂತದಲ್ಲಿ 33 ರನ್​ಗಳಿಸಿದ್ದ ರೋಹನ್ ಕದಮ್ ರನೌಟ್ ಆಗುವ ಮೂಲಕ ಹೊರನಡೆದರು. ಇದಾಗ್ಯೂ ಅಭಿನವ್ ಮನೋಹರ್ ಅಬ್ಬರ ಮುಂದುವರೆದಿತ್ತು. ಅನಿರುದ್ಧ್ ಜೋಷಿ ಜೊತೆಗೂಡಿದ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದರೆ 13 ರನ್​ಗಳಿಸಿ ಅನಿರುದ್ಧ್​ ವಿಕೆಟ್ ಒಪ್ಪಿಸಿದರೆ, ಅದರ ಬೆನ್ನಲ್ಲೇ ಜಗದೀಶ ಸುಚಿತ್ ಕೂಡ 5 ರನ್​ಗಳಿಸಿ ಜಯದೇವ್ ಉನಾದ್ಕಟ್​ ಎಸೆತಕ್ಕೆ ಬೌಲ್ಡ್ ಆದರು. ಆದರೆ ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್​ನೊಂದಿಗೆ ಅರ್ಧಶತಕ ಪೂರೈಸಿದ ಅಭಿನವ್ ಮನೋಹರ್ ಅಂತಿಮ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು.

ಕೊನೆಯ 2 ಓವರ್​ಗಳಲ್ಲಿ ಕರ್ನಾಟಕ ತಂಡಕ್ಕೆ ಗೆಲ್ಲಲು 10 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ವಿಜಯಕುಮಾರ್ ವೈಶಾಖ್ (4) ವಿಕೆಟ್ ಒಪ್ಪಿಸಿ ಆತಂಕ ಮೂಡಿಸಿದರು. ಅದರಂತೆ ಅಂತಿಮ ಓವರ್​ನಲ್ಲಿ 6 ಎಸೆತಗಳಲ್ಲಿ ಕರ್ನಾಟಕಕ್ಕೆ 5 ರನ್​ಗಳು ಬೇಕಿತ್ತು. ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಅಭಿನವ್ ಮನೋಹರ್ 1 ರನ್​ ಕಲೆಹಾಕಿದರೆ, 2ನೇ ಎಸೆತದಲ್ಲಿ ಕೆಸಿ ಕಾರ್ಯಪ್ಪ (0) ವಿಕೆಟ್ ಒಪ್ಪಿಸಿದರು. ಅಂತಿಮ 2 ಎಸೆತಗಳಲ್ಲಿ 2 ರನ್ ಬೇಕಿತ್ತು. ಈ ವೇಳೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಅಭಿನವ್ ಮನೋಹರ್ ಕರ್ನಾಟಕ ತಂಡಕ್ಕೆ 2 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟರು.

ಅಂತಿಮ ಹಂತದವರೆಗೂ ಏಕಾಂಗಿಯಾಗಿ ಹೋರಾಡಿದ ಅಭಿನವ್ ಮನೋಹರ್ 6 ಸಿಕ್ಸ್ ಹಾಗೂ 2 ಬೌಂಡರಿಯೊಂದಿಗೆ 49 ಎಸೆತಗಳಲ್ಲಿ 70 ರನ್​ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ಸೌರಾಷ್ಟ್ರ ಪರ ನಾಯಕ ಜಯದೇವ್ ಉನಾದ್ಕಟ್ 4 ಓವರ್​ಗಳಲ್ಲಿ 22 ರನ್​ ನೀಡಿ 4 ವಿಕೆಟ್ ಉರುಳಿಸಿ ಮಿಂಚಿದರು. ಈ ಗೆಲುವಿನೊಂದಿಗೆ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಕ್ವಾರ್ಟರ್​ ಫೈನಲ್​ಗೆ ಎಂಟ್ರಿ ಕೊಟ್ಟಿದೆ.

ಇದನ್ನೂ ಓದಿ: T20 World Cup 2021: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: T20 World Cup Winners: 7 ಟಿ20 ವಿಶ್ವಕಪ್​: ಚಾಂಪಿಯನ್​ ಪಟ್ಟಕ್ಕೇರಿದ 6 ತಂಡಗಳು

ಇದನ್ನೂ ಓದಿ:  Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!

(syed mushtaq ali trophy 2021 karnataka enter to quarter final)