Syed Mushtaq Ali Trophy: ರೋಚಕ ಹೋರಾಟದಲ್ಲಿ ಸೂಪರ್ ಗೆಲುವು ದಾಖಲಿಸಿ ಸೆಮಿಫೈನಲ್ಗೆ ಎಂಟ್ರಿಕೊಟ್ಟ ಕರ್ನಾಟಕ
Syed Mushtaq Ali Trophy 2021: ಕೊನೆಯ ಓವರ್ನಲ್ಲಿ ಬೆಂಗಾಲ್ ತಂಡಕ್ಕೆ ಗೆಲ್ಲಲು 20 ರನ್ಗಳು ಬೇಕಿತ್ತು. ಆದರೆ ವಿದ್ಯಾಧರ್ ಪಾಟೀಲ್ ಎಸೆದ ಅಂತಿಮ ಓವರ್ನ ಮೊದಲೆರಡು ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ರಿತ್ವಿಕ್ ಚೌಧರಿ ಪಂದ್ಯದ ಚಿತ್ರಣ ಬದಲಿಸಿದರು.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ 2ನೇ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ತಂಡವು ಬೆಂಗಾಲ್ ವಿರುದ್ದ ಸೂಪರ್ ಓವರ್ನಲ್ಲಿ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮನೀಷ್ ಪಾಂಡೆ ಬಳಗವು ಸೆಮಿಫೈನಲ್ಗೆ ಎಂಟ್ರಿಕೊಟ್ಟಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಬೆಂಗಾಲ್ ತಂಡದ ನಾಯಕ ಸುದಿಪ್ ಚಟರ್ಜಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 4 ರನ್ಗಳಿಸಿ ಆರಂಭಿಕ ಆಟಗಾರ ಶರತ್ ವಿಕೆಟ್ ಒಪ್ಪಿಸಿ ಹೊರನಡೆದರು. ಆ ಬಳಿಕ ಜೊತೆಗೂಡಿದ ರೋಹನ್ ಕದಮ್ ಹಾಗೂ ನಾಯಕ ಮನೀಷ್ ಪಾಂಡೆ 32 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ರೋಹನ್ 30 ರನ್ಗಳಿಸಿ ಔಟಾದರೆ, ಮನೀಷ್ ಪಾಂಡೆ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
14ನೇ ಓವರ್ನಲ್ಲಿ 87 ರನ್ಗಳಿಸಿ 3 ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ತಂಡದ ರನ್ಗತಿಯನ್ನು ಹೆಚ್ಚಿಸಿದ್ದು, 4ನೇ ಕ್ರಮಾಂಕದಲ್ಲಿ ಆಡಿದ ಕರುಣ್ ನಾಯರ್. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕರುಣ್ 3 ಸಿಕ್ಸ್ ಹಾಗೂ 4 ಬೌಂಡರಿಯೊಂದಿಗೆ ಅರ್ಧಶತಕ ಪೂರೈಸಿದರು.
ಇದೇ ವೇಳೆ ಕರುಣ್ಗೆ ಸಾಥ್ ನೀಡಿದ ಅಭಿನವ್ ಮನೋಹರ್ 9 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸ್ನೊಂದಿಗೆ 19 ರನ್ ಚಚ್ಚಿದರು. ಇನ್ನು ಅನಿರುದ್ಧ್ ಜೋಶಿ ಕೂಡ 10 ಎಸೆತಗಳಲ್ಲಿ 16 ರನ್ ಬಾರಿಸಿದರು. ಅದರಂತೆ ಅಂತಿಮವಾಗಿ ಅಜೇಯರಾಗಿ ಉಳಿದ ಕರುಣ್ ನಾಯರ್ 29 ಎಸೆತಗಳಲ್ಲಿ 55 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 5 ವಿಕೆಟ್ ನಷ್ಟಕ್ಕೆ 160ಕ್ಕೆ ತಂದು ನಿಲ್ಲಿಸಿದರು.
ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬೆಂಗಾಲ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕರ್ನಾಟಕ ತಂಡ ಯಶಸ್ವಿಯಾಗಿತ್ತು. ಆರಂಭಿಕ ಆಟಗಾರ ಅಭಿಷೇಕ್ ದಾಸ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ ವಿದ್ಯಾಧರ್ ಪಾಟೀಲ್ ಕರ್ನಾಟಕ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಶ್ರೀವಾತ್ಸವ್ ಗೋಸ್ವಾಮಿಯನ್ನು ಕೆಸಿ ಕಾರ್ಯಪ್ಪ ರನೌಟ್ ಮಾಡಿ ಪೆವಿಲಿಯನ್ಗೆ ಕಳುಹಿಸಿದರು.
ಇನ್ನು ಸುದಿಪ್ ಚಟರ್ಜಿ 12 ರನ್ಗಳಿಸಿ ಔಟಾದರೆ, ಕೈಫ್ ಅಹಮದ್ 20 ರನ್ಗಳಿಸಿದ್ದ ವೇಳೆ ಸುಚಿತ್ ಎಸೆತದಲ್ಲಿ ಬೌಲ್ಡ್ ಆದರು. ಇದರ ಬೆನ್ನಲ್ಲೇ ಶಹಬಾಜ್ ಅಹಮದ್ ವಿಕೆಟ್ ಉರುಳಿಸಿ ಸುಚಿತ್ ಮತ್ತೊಂದು ಯಶಸ್ಸು ತಂದುಕೊಟ್ಟರು. ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿದ ನಿಂತಿದ್ದ ವೃತಿಕ್ ಚಟರ್ಜಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತವನ್ನು 14 ಓವರ್ ವೇಳೆಗೆ 100ರ ಗಡಿದಾಟಿಸಿದರು.
ಅಂತಿಮ 6 ಓವರ್ಗಳಲ್ಲಿ ಬೆಂಗಾಲ್ ತಂಡಕ್ಕೆ 59 ರನ್ಗಳ ಅವಶ್ಯಕತೆಯಿತ್ತು. ಅತ್ತ ಅದಾಗಲೇ 5 ವಿಕೆಟ್ ಉರುಳಿಸಿದ್ದ ಕರ್ನಾಟಕವು ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಇದೇ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಅಪಾಯಕಾರಿಯಾಗಿ ಪರಿಣಮಿಸಿದ್ದ ವೃತಿಕ್ ಅವರ ವಿಕೆಟ್ ಪಡೆಯುವ ಮೂಲಕ ದರ್ಶನ್ ಕರ್ನಾಟಕ ತಂಡಕ್ಕೆ ಅಮೂಲ್ಯ ಯಶಸ್ಸು ತಂದುಕೊಟ್ಟರು.
ಇನ್ನು ಕೊನೆಯ 18 ಎಸೆತಗಳಲ್ಲಿ 33 ರನ್ಗಳ ಟಾರ್ಗೆಟ್ ಪಡೆದ ಬೆಂಗಾಲ್ ಪರ ರಿತ್ವಿಕ್ ಚೌಧರಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಂತೆ ಬೆಂಗಾಲ್ ತಂಡಕ್ಕೆ ಅಂತಿಮ 2 ಓವರ್ನಲ್ಲಿ ಗೆಲ್ಲಲು ಕೇವಲ 26 ರನ್ಗಳ ಅವಶ್ಯಕತೆಯಿತ್ತು. 19ನೇ ಓವರ್ ಎಸೆದ ದರ್ಶನ್ ಎಂಬಿ ಕೇವಲ 6 ರನ್ ನೀಡಿ 1 ವಿಕೆಟ್ ಪಡೆದರು. ಅದರಂತೆ ಕೊನೆಯ ಓವರ್ನಲ್ಲಿ ಬೆಂಗಾಲ್ ತಂಡಕ್ಕೆ ಗೆಲ್ಲಲು 20 ರನ್ಗಳು ಬೇಕಿತ್ತು. ಆದರೆ ವಿದ್ಯಾಧರ್ ಪಾಟೀಲ್ ಎಸೆದ ಅಂತಿಮ ಓವರ್ನ ಮೊದಲೆರಡು ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ರಿತ್ವಿಕ್ ಚೌಧರಿ ಪಂದ್ಯದ ಚಿತ್ರಣ ಬದಲಿಸಿದರು.
ಇನ್ನು 4ನೇ ಎಸೆತದಲ್ಲಿ ಆಕಾಶ್ ದೀಪ್ ಬೌಂಡರಿ ಬಾರಿಸಿದರು. ಅದರಂತೆ ಕೊನೆಯ 2 ಎಸೆತಗಳಲ್ಲಿ 3 ರನ್ ಬೇಕಿತ್ತು. 5ನೇ ಎಸೆತದಲ್ಲಿ 2 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ಸಮಗೊಳಿಸಿದರು. ಇನ್ನು ಕೊನೆಯ ಎಸೆತದಲ್ಲಿ 1 ರನ್ ಬೇಕಿದ್ದ ವಳೆ ಆಕಾಶ್ ದೀಪ್ ರನ್ನು ಮನೀಷ್ ಪಾಂಡೆ ಡೈರೆಕ್ಟ್ ಹಿಟ್ ಮೂಲಕ ರನೌಟ್ ಮಾಡಿ ಪಂದ್ಯವನ್ನು ಟೈ ಮಾಡಿದರು. ಅದರಂತೆ ಪಂದ್ಯವು ಸೂಪರ್ ಓವರ್ನತ್ತ ಸಾಗಿತು.
ಸೂಪರ್ ಓವರ್ ಬೌಲಿಂಗ್ ಮಾಡಿದ ಕೆಸಿ ಕಾರ್ಯಪ್ಪ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ. 2ನೇ ಎಸೆತದಲ್ಲಿ ಕೈಫ್ ಅಹಮದ್ ಅವರ ವಿಕೆಟ್ ಪಡೆದರು. ಮೂರನೇ ಎಸೆತದಲ್ಲಿ ಶ್ರೀವಾತ್ಸವ್ ಗೋಸ್ವಾಮಿ ಭರ್ಜರಿ ಬೌಂಡರಿ ಬಾರಿಸಿದರು. 4ನೇ ಎಸೆತದಲ್ಲಿ ಗೋಸ್ವಾಮಿ 2 ರನ್ ಕದಿಯುವ ಯತ್ನದಲ್ಲಿ ರನೌಟ್ ಆಗುವ ಮೂಲಕ ಬೆಂಗಾಲ್ ತಂಡದ ಸೂಪರ್ ಓವರ್ 2 ಎಸೆತಗಳು ಬಾಕಿ ಇರುವಂತೆ ಕೊನೆಗೊಂಡಿತು.
ಸೂಪರ್ ಓವರ್ನಲ್ಲಿ 6 ರನ್ಗಳ ಟಾರ್ಗೆಟ್ ಪಡೆದ ಕರ್ನಾಟಕ ಪರ ಮನೀಷ್ ಪಾಂಡೆ ಹಾಗೂ ಕರುಣ್ ನಾಯರ್ ಕಣಕ್ಕಿಳಿದರು. ಮೊದಲ ಎಸೆತದಲ್ಲಿ 2 ರನ್ ಕಲೆಹಾಕಿದ ಮನೀಷ್ ಪಾಂಡೆ, 2ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಈ ಸಿಕ್ಸ್ನೊಂದಿಗೆ ಕರ್ನಾಟಕ ತಂಡವು ಸೂಪರ್ ಓವರ್ ಫೈಟ್ನಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿತು.
ಇದನ್ನೂ ಓದಿ: Mahindra Roxor: ಮಹೀಂದ್ರಾ ರೋಕ್ಸರ್: ಜಬರ್ದಸ್ತ್ ಎಸ್ಯುವಿ ಬಿಡುಗಡೆ
ಇದನ್ನೂ ಓದಿ: 18 GB RAM, 1000 GB ಸ್ಟೋರೇಜ್: ದಾಖಲೆ ನಿರ್ಮಿಸಲಿದೆ ಹೊಸ ಸ್ಮಾರ್ಟ್ಫೋನ್
ಇದನ್ನೂ ಓದಿ: IPL 2022: ರಾಜಸ್ಥಾನ್ ರಾಯಲ್ಸ್ ತಂಡದಿಂದ ಪ್ರಮುಖ ಆಟಗಾರ ಔಟ್: ಬೇರೆ ತಂಡಕ್ಕೆ ನಾಯಕ?
Published On - 4:47 pm, Thu, 18 November 21