Syed Mushtaq Ali Trophy: ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಭಾನುವಾರ ನಡೆದ ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ (Karantaka) ತಂಡವು ಭರ್ಜರಿ ಜಯ ಸಾಧಿಸಿದೆ. ಚಂಡಿಗಢದ ಯದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಕರ್ನಾಟಕ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ (5) ಹಾಗೂ ಮನೀಷ್ ಪಾಂಡೆ (0) ಅಬಿದ್ ಮುಷ್ತಾಕ್ ಎಸೆತಗಳಿಗೆ ಕ್ಲೀನ್ ಬೌಲ್ಡ್ ಆಗಿ ಬೇಗನೆ ಪೆವಿಲಿಯನ್ ಸೇರಿಕೊಂಡರು. ಇದರ ಬೆನ್ನಲ್ಲೇ 22 ರನ್ಗಳಿಸಿದ್ದ ದೇವದತ್ ಪಡಿಕ್ಕಲ್ ಪರ್ವೇಝ್ ರಸೂಲ್ಗೆ ವಿಕೆಟ್ ಒಪ್ಪಿಸಿದರು. ಈ ಆಘಾತದಿಂದ ತಂಡ ಪಾರಾಗುಷ್ಟರಲ್ಲಿ ಅಭಿನವ್ ಮನೋಹರ್ (2) ಗೆ ಉಮ್ರಾನ್ ಮಲಿಕ್ ಪೆವಿಲಿಯನ್ ಹಾದಿ ತೋರಿಸಿದರು.
ಈ ವೇಳೆ ಜೊತೆಯಾದ ಶ್ರೇಯಸ್ ಗೋಪಾಲ್ ಹಾಗೂ ಮನೋಜ್ ಉತ್ತಮ ಜೊತೆಯಾಟವಾಡಿದರು. ಅಲ್ಲದೆ 61 ರನ್ಗಳನ್ನು ಪೇರಿಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಹಂತದಲ್ಲಿ 23 ಎಸೆತಗಳಲ್ಲಿ 4 ಸಿಕ್ಸ್ ಹಾಗು 2 ಫೋರ್ನೊಂದಿಗೆ 41 ರನ್ ಬಾರಿಸಿದ್ದ ಮನೋಜ್ ಮುಜ್ತಾಬ ಯೂಸುಫ್ ಎಸೆತದಲ್ಲಿ ಔಟಾದರು.
ಆದರೆ ಮತ್ತೊಂದೆಡೆ 38 ಎಸೆತಗಳಲ್ಲಿ ಅಜೇಯ 48 ರನ್ ಬಾರಿಸುವ ಮೂಲಕ ಶ್ರೇಯಸ್ ಗೋಪಾಲ್ ನಿಗದಿತ 20 ಓವರ್ಗಳಲ್ಲಿ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 147 ಕ್ಕೆ ತಂದು ನಿಲ್ಲಿಸಿದರು.
148 ರನ್ಗಳ ಸಾಧಾರಣ ಸವಾಲು ಪಡೆದ ಜಮ್ಮು ಕಾಶ್ಮೀರ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 5 ರನ್ಗಳಿಸುಷ್ಟರಲ್ಲಿ ವಿದ್ವತ್ ಕಾವೇರಪ್ಪ ಹಾಗೂ ವಿ ಕೌಶಿಕ್ ನಾಲ್ಕು ವಿಕೆಟ್ ಉರುಳಿಸಿದ್ದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ವಿವ್ರಾಂತ್ ಶರ್ಮಾ 46 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ನೊಂದಿಗೆ 63 ರನ್ ಬಾರಿಸಿದರು. ಆದರೆ ಮತ್ತೊಮ್ಮೆ ದಾಳಿಗಿಳಿದಿ ಕೌಶಿಕ್ ವಿವ್ರಾಂತ್ ವಿಕೆಟ್ ಪಡೆಯುವ ಮೂಲಕ ಗೆಲುವನ್ನು ಖಚಿತಪಡಿಸಿದರು.
ಇತ್ತ ಮಿಂಚಿನ ದಾಳಿ ಸಂಘಟಿಸಿದ ವಿದ್ವತ್ ಕಾವೇರಪ್ಪ ಜಮ್ಮು-ಕಾಶ್ಮೀರದ ಪ್ರಮುಖ ಆಟಗಾರರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಪರಿಣಾಮ 18.2 ಓವರ್ಗಳಲ್ಲಿ ಜಮ್ಮು-ಕಾಶ್ಮೀರ ತಂಡವು 113 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಮಯಾಂಕ್ ಅಗರ್ವಾಲ್ ಪಡೆ 34 ರನ್ಗಳ ಜಯ ಸಾಧಿಸಿತು. ಕರ್ನಾಟಕ ಪರ 3 ಓವರ್ಗಳಲ್ಲಿ ಕೇವಲ 11 ರನ್ ನೀಡಿ ವಿದ್ವತ್ ಕಾವೇರಪ್ಪ 5 ವಿಕೆಟ್ ಉರುಳಿಸಿ ಮಿಂಚಿದರು. ಹಾಗೆಯೇ ವೈಶಾಖ್ ಹಾಗೂ ಕೌಶಿಕ್ ತಲಾ 2 ವಿಕೆಟ್ ಕಬಳಿಸಿದರು.