T20 World Cup 2021: ಆದಿಲ್ ರಶೀದ್ ಸ್ಪಿನ್ ಮೋಡಿ: ಕೇವಲ 55 ರನ್​ಗೆ ವೆಸ್ಟ್​ ಇಂಡೀಸ್ ಆಲೌಟ್

| Updated By: ಝಾಹಿರ್ ಯೂಸುಫ್

Updated on: Oct 23, 2021 | 8:57 PM

England vs West indies: ಇಂಗ್ಲೆಂಡ್ ಪರ 2.2 ಓವರ್​ನಲ್ಲಿ ಕೇವಲ 2 ರನ್​ ನೀಡಿ ಆದಿಲ್ ರಶೀದ್ 4 ವಿಕೆಟ್ ಪಡೆದು ಮಿಂಚಿದರು. ಹಾಗೆಯೇ ಮೊಯೀನ್ ಅಲಿ, ಟೈಮಲ್ ಮಿಲ್ಸ್ ತಲಾ 2 ವಿಕೆಟ್ ಕಬಳಿಸಿದರು.

T20 World Cup 2021: ಆದಿಲ್ ರಶೀದ್ ಸ್ಪಿನ್ ಮೋಡಿ: ಕೇವಲ 55 ರನ್​ಗೆ ವೆಸ್ಟ್​ ಇಂಡೀಸ್ ಆಲೌಟ್
England team
Follow us on

ಟಿ20 ವಿಶ್ವಕಪ್​ನ ಬಲಿಷ್ಠ ತಂಡ ಎನಿಸಿಕೊಂಡಿದ್ದ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್​ ತನ್ನ ಮೊದಲ ಪಂದ್ಯದಲ್ಲೇ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಇಂಗ್ಲೆಂಡ್ ವಿರುದ್ದ ನಡೆದ ಈ ಪಂದ್ಯದಲ್ಲಿ ಕೇವಲ 55 ರನ್​ಗೆ ಆಲೌಟ್ ಆಗುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ದಾಳಿ ಸಂಘಟಿಸಿದ ಇಂಗ್ಲೆಂಡ್​ ಪವರ್​ಪ್ಲೇ ಮುಕ್ತಾಯದ ವೇಳೆಗೆ 4 ವಿಕೆಟ್ ಉರುಳಿಸಿದ್ದರು.

ಆರಂಭಿಕ ಆಟಗಾರ ಎವಿನ್ ಲೂಯಿಸ್ (6) ಕ್ರಿಸ್ ವೋಕ್ಸ್​ಗೆ ವಿಕೆಟ್ ಒಪ್ಪಿಸಿದರೆ, ಲಿಂಡ್ಲ್​ ಸಿಮ್ಸನ್ (3), ಹೆಟ್ಮೆಯರ್ (9) ಮೊಯೀನ್ ಅಲಿ ಎಸೆತಕ್ಕೆ ಔಟಾದರು. ಇನ್ನು ಕ್ರಿಸ್ ಗೇಲ್ (13) ಕೂಡ ಮಿಲ್ಸ್​ಗೆ ವಿಕೆಟ್ ನೀಡಿ ಬಂದ ವೇಗದಲ್ಲೇ ಹಿಂತಿರುಗಿದರು. ಆ ಬಳಿಕ ಬಂದ ಬ್ರಾವೊ (5), ಪೂರನ್ (1), ನಾಯಕ ಕೀರನ್ ಪೊಲಾರ್ಡ್​ (6) ಪೆವಿಲಿಯನ್ ಪರೇಡ್ ನಡೆಸಿದರು.

ಇನ್ನು ಸ್ಪೋಟಕ ಬ್ಯಾಟ್ಸ್​ಮನ್ ಆಂಡ್ರೆ ರಸೆಲ್​ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಸ್ಪಿನ್ನರ್​ ಆದಿಲ್ ರಶೀದ್ ಇಂಗ್ಲೆಂಡ್​ಗೆ 7ನೇ ಯಶಸ್ಸು ತಂದುಕೊಟ್ಟರು. ಅಂತಿಮ ಹಂತದಲ್ಲಿ ಅಕಿಲ್ ಹೊಸೈನ್​ 10 ರನ್​ಗಳಿಸುವ ಮೂಲಕ ತಂಡದ ಮೊತ್ತವನ್ನು 50ರ ಗಡಿದಾಟಿಸಿದರು. ಇದಾಗ್ಯೂ ಇಂಗ್ಲೆಂಡ್ ಬೌಲರುಗಳ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ವೆಸ್ಟ್ ಇಂಡೀಸ್​ಗೆ ಸಾಧ್ಯವಾಗಿಲ್ಲ. ಅದರಂತೆ ಅಂತಿಮವಾಗಿ 14.2 ಓವರ್​ನಲ್ಲಿ 55 ರನ್​ಗೆ ಆಲೌಟ್ ಆಗುವ ಮೂಲಕ ಇನಿಂಗ್ಸ್​ ಕೊನೆಗೊಳಿಸಿತು.

ಇಂಗ್ಲೆಂಡ್ ಪರ 2.2 ಓವರ್​ನಲ್ಲಿ ಕೇವಲ 2 ರನ್​ ನೀಡಿ ಆದಿಲ್ ರಶೀದ್ 4 ವಿಕೆಟ್ ಪಡೆದು ಮಿಂಚಿದರು. ಹಾಗೆಯೇ ಮೊಯೀನ್ ಅಲಿ, ಟೈಮಲ್ ಮಿಲ್ಸ್ ತಲಾ 2 ವಿಕೆಟ್ ಕಬಳಿಸಿದರು. ಇದೀಗ ಟಿ20 ವಿಶ್ವಕಪ್​ 2021ರ ಮೊದಲ ಗೆಲುವಿಗೆ ಇಂಗ್ಲೆಂಡ್​ ಮುಂದೆ 56 ರನ್​ಗಳ ಸುಲಭ ಗುರಿ ಇದೆ.

ಇದನ್ನೂ ಓದಿ: India vs Pakistan, T20 World cup 2021: ಒಂದು ದಿನ ಮೊದಲೇ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ್

ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(T20 World Cup 2021: Rashid Takes Four as Windies Shout Out For 55)

Published On - 8:53 pm, Sat, 23 October 21