2022 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಭಾರತ ತಂಡ ಮೂರನೇ ಜಯ ದಾಖಲಿಸಿದೆ. ಸೂಪರ್-12 ಪಂದ್ಯದಲ್ಲಿ ಟೀಂ ಇಂಡಿಯಾ ಐದು ರನ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿ ಸೇಮಿಸ್ ಸುತ್ತಿಗೆ ಹತ್ತಿರವಾಗಿದೆ. ಆದರೆ ಈ ಪಂದ್ಯ ಮುಗಿದ ಬಳಿಕ ಸೋಲಿನ ನಿರಾಶೆಯಲ್ಲಿದ್ದ ಬಾಂಗ್ಲಾ ತಂಡದ ವಿಕೆಟ್ ಕೀಪರ್ ನೂರುಲ್ ಹಸನ್ (Nurul Hasan), ಕೊಹ್ಲಿ ವಿರುದ್ಧ ಫೇಕ್ ಫೀಲ್ಡಿಂಗ್ ಆರೋಪ ಹೊರಿಸಿದ್ದಾರೆ. ವಾಸ್ತವವಾಗಿ ಬಾಂಗ್ಲಾದೇಶದ ಇನಿಂಗ್ಸ್‌ನ 7ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ (Virat Kohli) ಫೇಕ್ ಫೀಲ್ಡಿಂಗ್ ಮಾಡಿದ್ದರು. ಇದನ್ನು ಆನ್ ಫೀಲ್ಡ್ ಅಂಪೈರ್ಗಳು ಸರಿಯಾಗಿ ಗಮನಿಸಿದ್ದರೆ ನಮಗೆ ನಿರ್ಣಾಯಕ 5 ರನ್ಗಳು ಪೆನಾಲ್ಟಿ ರೂಪದಲ್ಲಿ ಸಿಗುತ್ತಿದ್ದವು. ಇದರಿಂದ ಪಂದ್ಯದ ಪಲಿತಾಂಶವೇ ಬದಲಾಗುತ್ತಿತ್ತು ಎಂದು ನೂರುಲ್ ಹಸನ್ ಆರೋಪಿಸಿದ್ದಾರೆ.
ವಾಸ್ತವವಾಗಿ ಬಾಂಗ್ಲಾ ಇನ್ನಿಂಗ್ಸ್ನ 7ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಈ ಹಂತದಲ್ಲಿ ಬಾಂಗ್ಲಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಲಿಟನ್ ದಾಸ್ ಭಾರತೀಯ ಬೌಲರ್ಗಳನ್ನು ಮನಬಂದಂತೆ ದಂಡಿಸುತ್ತಿದ್ದರು. ಈ ಹಂತದಲ್ಲಿ 7ನೇ ಓವರ್ ಎಸೆಯಲು ಬಂದ ಅಕ್ಷರ್ ಪಟೇಲ್ ಅವರ ಎಸೆತವನ್ನು ಡೀಪ್ ಆಫ್ ಕಡೆಗೆ ಆಡಿದರು. ಈ ವೇಳೆ ತನ್ನತ್ತ ಬಂದ ಬಾಲನ್ನು ಹಿಡಿದು ವಿಕೆಟ್ ಕೀಪರ್ ಕಡೆಗೆ ಅರ್ಷದೀಪ್ ಸಿಂಗ್ ಎಸೆದರು. ಆದರೆ ಚೆಂಡು ಕೀಪರ್ ಕೈಗೆ ಸೇರುವ ಮೊದಲು ಕೊಹ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಪಾಯಿಂಟ್ ದಿಕ್ಕಿನಿಂದ ಹಾದು ಹೋಯಿತು. ಆಗ ಕೊಹ್ಲಿ ಚೆಂಡನ್ನು ಹಿಡಿದು ಎಸೆದವರಂತೆ ಆ್ಯಕ್ಷನ್ ಮಾಡಿದರು. ಕೊಹ್ಲಿಯ ಈ ಕೃತ್ಯವನ್ನು ಫೀಲ್ಡ್ ಅಂಪೈರ್ಗಳು ಸರಿಯಾಗಿ ಗಮನಿಸಿದ್ದರೆ, ನಿಯಮಗಳ ಪ್ರಕಾರ ಕೊಹ್ಲಿ ಮಾಡಿದ್ದು ಕಾನೂನು ಬಾಹೀರವಾಗಿದ್ದರಿಂದ ಇದಕ್ಕೆ ದಂಡವಾಗಿ ಎದುರಾಳಿ ತಂಡಕ್ಕೆ 5 ರನ್ಗಳನ್ನು ನೀಡುತ್ತಿದ್ದರು. ಆದರೆ ಈ ಘಟನೆ ಅಂಪೈರ್ಗಳ ಗಮನಕ್ಕೆ ಬರದಿರುವ ಕಾರಣ ಟೀಂ ಇಂಡಿಯಾ ದಂಡದಿಂದ ಪಾರಾಯಿತು.
ಎರಡು ಬಾರಿ ನಿಯಮ ಉಲ್ಲಂಘಿಸಿರುವ ನೂರುಲ್ ಹಸನ್
ಈಗ ಕೊಹ್ಲಿ ವಿರುದ್ಧ ಈ ಆರೋಪ ಹೊರಿಸಿರುವ ನೂರುಲ್ ಹಸನ್ ಅವರೇ ಈ ಟಿ20 ವಿಶ್ವಕಪ್‌ನಲ್ಲಿ ಸ್ವತಃ ಎರಡು ಬಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದಕ್ಕೆ ದಂಡವೂ ಬಿದ್ದಿದ್ದು, ಇದರ ಪರಿಣಾಮವಾಗಿ ಬಾಂಗ್ಲಾ ತಂಡ ಒಂದು ಪಂದ್ಯದಲ್ಲಿ ಸೋಲನನುಭವಿಸಿದರೆ, ಮತ್ತೊಂದು ಪಂದ್ಯದಲ್ಲಿ ಸೋಲಿನಂಚಿನಿಂದ ಸ್ವಲ್ಪದರಲ್ಲೇ ಪಾರಾಗಿತ್ತು. ನೂರುಲ್ ಹಸನ್ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ ನಂತರ ಜಿಂಬಾಬ್ವೆ ವಿರುದ್ಧದ ಪಂದ್ಯಗಳಲ್ಲಿ ನಿಯಮಗಳನ್ನು ಮುರಿದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶಕೀಬ್ ಬೌಲಿಂಗ್ ಮಾಡುವ ವೇಳೆ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ನೂರುಲ್ ಹಸನ್, ಚೆಂಡು ಬೌಲರ್ ಕೈಯಿಂದ ಹೊರಬೀಳುವ ಮೊದಲೇ ತನ್ನ ಸ್ಥಾನವನ್ನು ಬದಲಾಯಿಸಿದ್ದರು (ನಿಯಮಗಳ ಪ್ರಕಾರ ಯಾವುದೇ ಫೀಲ್ಡರ್, ಬೌಲರ್ ಕೈಯಿಂದ ಚೆಂಡು ಹೊರಬೀಳುವ ಮೊದಲು ತಾನು ನಿಂತಿದ್ದ ಜಾಗದಿಂದ ಸ್ಥಾನ ಪಲ್ಲಟ ಮಾಡಬಾರದು) ಇದರಿಂದಾಗಿ ಬಾಂಗ್ಲಾದೇಶ ತಂಡಕ್ಕೆ 5 ರನ್ಗಳ ದಂಡ ಕೂಡ ವಿಧಿಸಲಾಗಿತ್ತು.
ಇದನ್ನೂ ಓದಿ: IND vs BAN: ನೋ ಬಾಲ್ ನೀಡಿದಕ್ಕೆ ಅಂಪೈರ್ ಜೊತೆ ಜಗಳಕ್ಕಿಳಿದ ಶಕೀಬ್! ಬುದ್ಧಿ ಹೇಳಿದ ಕೊಹ್ಲಿ; ವಿಡಿಯೋ
ಜಿಂಬಾಬ್ವೆ ವಿರುದ್ಧವೂ ನಿಯಮ ಉಲ್ಲಂಘನೆ
ಜಿಂಬಾಬ್ವೆ ವಿರುದ್ಧವೂ ನೂರುಲ್ ಹಸನ್ ಇಂತಹ ಕೆಲಸ ಮಾಡಿದ್ದು, ಇದರಿಂದಾಗಿ ಬಾಂಗ್ಲಾದೇಶ ಸೋಲಿನ ಭೀತಿ ಎದುರಿಸಬೇಕಾಯಿತು. ವಾಸ್ತವವಾಗಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ ಕೊನೆಯ ಎಸೆತದಲ್ಲಿ 5 ರನ್ ಉಳಿಸಬೇಕಿತ್ತು. ಮೊಸದ್ದೆಕ್ ಹೊಸೈನ್ ಅವರ ಕೊನೆಯ ಎಸೆತದಲ್ಲಿ ಬ್ಲೆಸಿಂಗ್ ಮುಜರ್ಬಾನಿ ಬಿಗ್ ಶಾಟ್ ಆಡುವಲ್ಲಿ ವಿಫಲರಾದರು. ಹೀಗಾಗಿ ಚೆಂಡು ಸೀದಾ ವಿಕೆಟ್ ಕೀಪರ್ ನೂರುಲ್ ಹಸನ್ ಕೈಸೇರಿತು. ಕೂಡಲೆ ಹಸನ್ ಸ್ಟಂಪಿಂಗ್ ಮಾಡಿದ್ದರು.
ಕೂಡಲೇ ಬಾಂಗ್ಲಾದೇಶ ತಂಡದ ಆಟಗಾರರ ಗೆಲುವಿನ ಸಂಭ್ರಮಾಚರಣೆಯನ್ನು ಆರಂಭಿಸಿದರು. ಆದರೆ ಈ ವೇಳೆ ನೂರುಲ್ ಹಸನ್ ನಿಯಮ ಉಲ್ಲಂಘನೆಯನ್ನು ಪತ್ತೆ ಹಚ್ಚಿದ ಮೂರನೇ ಅಂಪೈರ್, ಹಸನ್ ಚೆಂಡನ್ನು ವಿಕೆಟ್ ಮುಂದೆ ಹಿಡಿದು ಸ್ಟಂಪಿಂಗ್ ಮಾಡಿರುವುದನ್ನು ಪತ್ತೆಹಚ್ಚಿದರು (ನಿಯಮಗಳ ಪ್ರಕಾರ ವಿಕೆಟ್ ಕೀಪರ್, ಬೌಲರ್ ಎಸೆದ ಚೆಂಡನ್ನು ವಿಕೆಟ್ ಹಿಂದೆ ಹಿಡಿದು ಸ್ಟಂಪಿಂಗ್ ಮಾಡಬೇಕು.). ಹೀಗಾಗಿ ಆ ಬಾಲನ್ನು ಅಂಪೈರ್ ನೋ ಬಾಲ್ ಎಂದು ತೀರ್ಪು ನೀಡಿದರು. ಹೀಗಾಗಿ ಬಾಂಗ್ಲಾ ತಂಡಕ್ಕೆ ಸೋಲಿನ ಅಪಾಯ ಎದುರಾಗಿತ್ತು. ಆದರೆ, ಬ್ಲೆಸಿಂಗ್ ಮುಜರ್ಬಾನಿ ಕೊನೆಯ ಎಸೆತವನ್ನು ಬೌಂಡರಿ ಬಾರಿಸುವಲ್ಲಿ ವಿಫಲರಾದರು. ಇದರಿಂದ ಬಾಂಗ್ಲಾದೇಶ ತಂಡ ಮೂರು ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Thu, 3 November 22