T20 World Cup 2022: ಅಭ್ಯಾಸ ಪಂದ್ಯದಲ್ಲೇ ಪಾಡುಪಟ್ಟು ಗೆದ್ದ ಟೀಮ್ ಇಂಡಿಯಾ..!
India vs Western Australia: ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ 20 ಎಸೆತಗಳಲ್ಲಿ ಬಿರುಸಿನ 29 ರನ್ಗಳಿಸಿ ನಿರ್ಗಮಿಸಿದರು. ಮತ್ತೊಂದೆಡೆ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ತಂಡಕ್ಕೆ ಆಸರೆಯಾದರು.
T20 World Cup 2022: ಪರ್ತ್ನಲ್ಲಿ ನಡೆದ ವೆಸ್ಟರ್ಸ್ ಆಸ್ಟ್ರೇಲಿಯಾ (India vs Western Australia) ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರಯಾಸದ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಬ್ಯಾಟಿಂಗ್ ಆಯ್ದುಕೊಂಡರು. ಕೆಎಲ್ ರಾಹುಲ್ (KL Rahul) ಅನುಪಸ್ಥಿತಿ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಪರ ರಿಷಭ್ ಪಂತ್ ಹಾಗೂ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಿದ್ದರು. ಆದರೆ ಕೇವಲ 3 ರನ್ಗಳಿಸಿ ರೋಹಿತ್ ಶರ್ಮಾ ಜೇಸನ್ ಬೆಹ್ರೆಂಡಾರ್ಫ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇದರ ಬೆನ್ನಲ್ಲೇ 17 ಎಸೆತಗಳಲ್ಲಿ 9 ರನ್ ಬಾರಿಸಿ ರಿಷಭ್ ಪಂತ್ ಕೂಡ ಪೆವಿಲಿಯನ್ ಕಡೆ ಮುಖ ಮಾಡಿದರು.
ಈ ಹಂತದಲ್ಲಿ ಜೊತೆಗೂಡಿದ ದೀಪಕ್ ಹೂಡಾ ಹಾಗೂ ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟವಾಡಿದರು. ಆದರೆ 22 ರನ್ಗಳಿಸಿದ್ದ ವೇಳೆ ಬೆಹ್ರೆಂಡಾರ್ಫ್ ಎಸೆತದಲ್ಲಿ ದೀಪಕ್ ಹೂಡಾ ಔಟಾದರು. ಇದಾಗ್ಯೂ ಸೂರ್ಯಕುಮಾರ್ ಯಾದವ್ ಮಾತ್ರ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದರು.
ಇನ್ನು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ 20 ಎಸೆತಗಳಲ್ಲಿ ಬಿರುಸಿನ 29 ರನ್ಗಳಿಸಿ ನಿರ್ಗಮಿಸಿದರು. ಮತ್ತೊಂದೆಡೆ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸೂರ್ಯ ತಂಡಕ್ಕೆ ಆಸರೆಯಾದರು. ಅಂತಿಮವಾಗಿ 35 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ನೊಂದಿಗೆ ಸೂರ್ಯಕುಮಾರ್ ಯಾದವ್ 52 ರನ್ ಕಲೆಹಾಕಿದರು. ಹಾಗೆಯೇ ಕೊನೆಯ ಓವರ್ಗಳ ವೇಳೆ ದಿನೇಶ್ ಕಾರ್ತಿಕ್ ಬಿರುಸಿನ 19 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಮೊತ್ತವನ್ನು 6 ವಿಕೆಟ್ ನಷ್ಟಕ್ಕೆ 158 ಕ್ಕೆ ತಂದು ನಿಲ್ಲಿಸಿದರು.
159 ರನ್ಗಳ ಸ್ಪರ್ಧಾತ್ಮಕ ಸವಾಲು ಬೆನ್ನತ್ತಿದ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ ಕೇವಲ 12 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ 58 ರನ್ ಬಾರಿಸುವ ಮೂಲಕ ಸ್ಯಾಮ್ ಫನ್ನಿಂಗ್ ತಂಡಕ್ಕೆ ಆಸರೆಯಾದರು.
ಆದರೆ ಕರಾರುವಾಕ್ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದ ಟೀಮ್ ಇಂಡಿಯಾ ಬೌಲರ್ಗಳು ಅಂತಿಮ ಹಂತದಲ್ಲಿ ಮತ್ತೆ ಹಿಡಿತ ಸಾಧಿಸಿದರು. ಪರಿಣಾಮ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 145 ರನ್ಗಳಿಸಲಷ್ಟೇ ಶಕ್ತರಾದರು.
ಟೀಮ್ ಇಂಡಿಯಾ ಪರ ಮಿಂಚಿನ ದಾಳಿ ನಡೆಸಿದ ಎಡಗೈ ವೇಗಿ ಅರ್ಷದೀಪ್ ಸಿಂಗ್ 3 ಓವರ್ಗಳಲ್ಲಿ 6 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಚಹಾಲ್ 15 ರನ್ ನೀಡಿ 2 ವಿಕೆಟ್ ಕಬಳಿಸಿದರು. ಹಾಗೆಯೇ 26 ರನ್ ನೀಡಿದ್ದ ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೂ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದೆ ಎಂದೇ ಹೇಳಬಹುದು. ಏಕೆಂದರೆ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿದಿದ್ದ ಭಾರತ ತಂಡವು ಕಲೆಹಾಕಿದ್ದು ಕೇವಲ 158 ರನ್ಗಳು ಮಾತ್ರ. ಇನ್ನು ತಂಡದ ಪರ ಸೂರ್ಯಕುಮಾರ್ ಯಾದವ್ ಮಾತ್ರ ಬ್ಯಾಟಿಂಗ್ನಲ್ಲಿ ಮಿಂಚಿದ್ದರು.
ಹಾಗೆಯೇ ಸಾಧಾರಣ ತಂಡ ಎನಿಸಿಕೊಂಡಿದ್ದ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವು ಟೀಮ್ ಇಂಡಿಯಾ ವಿರುದ್ಧ 145 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಇದಾಗ್ಯೂ ಭಾರತೀಯ ಬೌಲರ್ಗಳಿಗೆ ಎದುರಾಳಿಗಳನ್ನು ಆಲೌಟ್ ಮಾಡಲು ಸಾಧ್ಯವಾಗಿರಲಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಇನ್ನು ಗೆದ್ದಿರುವುದು ಕೇವಲ 13 ರನ್ಗಳ ಅಂತರದಿಂದ ಮಾತ್ರ. ಅಂದರೆ ಯಾವುದೇ ಒತ್ತಡವಿಲ್ಲದ ಅಭ್ಯಾಸ ಪಂದ್ಯದಲ್ಲೇ ಟೀಮ್ ಇಂಡಿಯಾ ಪ್ರಯಾಸದ ಗೆಲುವು ಸಾಧಿಸಿದೆ ಎನ್ನಬಹುದು. ಹೀಗಾಗಿ ಮುಂದಿನ ಮೂರು ಅಭ್ಯಾಸ ಪಂದ್ಯಗಳ ಮೂಲಕ ಪಾಕಿಸ್ತಾನ್ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ ಭರ್ಜರಿಯಾಗಿ ಸಿದ್ಧಗೊಳ್ಳಬೇಕಾದ ಅನಿವಾರ್ಯತೆಯಿದೆ.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್
ವೆಸ್ಟರ್ನ್ ಆಸ್ಟ್ರೇಲಿಯ (ಪ್ಲೇಯಿಂಗ್ XI): ಡಿ ಆರ್ಸಿ ಶಾರ್ಟ್, ಆರನ್ ಹಾರ್ಡಿ, ಕ್ಯಾಮೆರಾನ್ ಬ್ಯಾಂಕ್ರಾಫ್ಟ್, ಆಶ್ಟನ್ ಟರ್ನರ್(ನಾಯಕ), ಸ್ಯಾಮ್ ಫಾನ್ನಿಂಗ್, ಹ್ಯಾಮಿಶ್ ಮೆಕೆಂಜಿ, ಜೈ ರಿಚರ್ಡ್ಸನ್, ಆಂಡ್ರ್ಯೂ ಟೈ, ಜೇಸನ್ ಬೆಹ್ರೆಂಡಾರ್ಫ್, ಮ್ಯಾಥ್ಯೂ ಕೆಲ್ಲಿ, ನಿಕ್ ಹಾಬ್ಸನ್
Published On - 4:04 pm, Mon, 10 October 22