T20 World Cup 2024: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಪಾಕಿಸ್ತಾನ್ ತಂಡಕ್ಕೆ ಮೇಜರ್ ಸರ್ಜರಿಯಾಗಲಿದೆ. ಇದನ್ನು ಹೇಳಿರುವುದು ಮತ್ಯಾರೂ ಅಲ್ಲ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ. ಎರಡು ಅವಮಾನಕರ ಸೋಲುಗಳ ಬಳಿಕ ಮಾತನಾಡಿದ ನಖ್ವಿ, ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಬೇಕಾದ ಅಗತ್ಯವಿದೆ ಎಂದಿದ್ದಾರೆ.
ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಯುಎಸ್ಎ ವಿರುದ್ಧ ಹೀನಾಯವಾಗಿ ಸೋತು ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಈ ಸೋಲಿನ ನೋವನ್ನು ಮರೆಯುವ ಮುನ್ನವೇ ಪಾಕ್ ತಂಡವನ್ನು ಭಾರತ ಬಗ್ಗು ಬಡಿಯಿತು.
ಈ ಎರಡು ಸೋಲುಗಳಿಂದ ಇದೀಗ ಪಿಸಿಬಿ ಭಾರೀ ಟೀಕೆಗಳನ್ನು ಎದುರಿಸುತ್ತಿದೆ. ಅದರಲ್ಲೂ ತಂಡದ ಆಯ್ಕೆ ಬಗ್ಗೆ ಅನೇಕ ಮಾಜಿ ಆಟಗಾರರು ಅಪಸ್ವರ ಎತ್ತಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್ ಬಳಿಕ ಪಾಕಿಸ್ತಾನ್ ತಂಡದಲ್ಲಿ ಮಹತ್ವದ ಬದಲಾವಣೆ ಕಂಡು ಬರುವುದು ಖಚಿತ.
ಭಾರತದ ವಿರುದ್ಧದ 6 ರನ್ಗಳ ಸೋಲಿನ ಬಳಿಕ ಮಾತನಾಡಿದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ, “ಪಂದ್ಯಗಳನ್ನು ಗೆಲ್ಲಲು ತಂಡಕ್ಕೆ ಸಣ್ಣ ಸರ್ಜರಿ ಅಗತ್ಯವಿದೆ ಎಂದು ಭಾವಿಸಿದ್ದೆ. ಆದರೆ ಈಗ ನಾವು ದೊಡ್ಡ ಸರ್ಜರಿ ಮಾಡಬೇಕಾಗಿದೆ” ಎಂದಿದ್ದಾರೆ.
ಈ ಮೂಲಕ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಪಾಕಿಸ್ತಾನ್ ತಂಡದಿಂದ ಕೆಲ ಆಟಗಾರರನ್ನು ಕೈ ಬಿಡುವ ಸೂಚನೆ ನೀಡಿದ್ದಾರೆ. ಅದರಲ್ಲೂ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಅವರ ತಲೆದಂಡವಾಗುವ ಸಾಧ್ಯತೆಯಿದೆ.
ಏಕೆಂದರೆ 2023ರ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡವು ಹೀನಾಯ ಪ್ರದರ್ಶನ ನೀಡಿದ್ದರಿಂದ ಬಾಬರ್ ಆಝಂ ಅವರನ್ನು ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಆ ಬಳಿಕ ಶಾಹೀನ್ ಶಾ ಅಫ್ರಿದಿಯನ್ನು ನಾಯಕನನ್ನಾಗಿ ಮಾಡಲಾಗಿತ್ತು.
ಇದಾದ ಒಂದು ಸರಣಿ ಬಳಿಕ ಮತ್ತೆ ಬಾಬರ್ ಆಝಂಗೆ ಕ್ಯಾಪ್ಟನ್ಸಿ ನೀಡಲಾಗಿತ್ತು. ಆದರೀಗ ಮತ್ತೆ ಆಝಂ ನಾಯಕತ್ವದಲ್ಲಿ ಪಾಕಿಸ್ತಾನ್ ತಂಡ ಯುಎಸ್ಎ ವಿರುದ್ಧ ಸೋತಿದೆ. ಕಳೆದ ಟಿ20 ವಿಶ್ವಕಪ್ನಲ್ಲಿ ಝಿಂಬಾಬ್ವೆ ವಿರುದ್ಧ ಪರಾಜಯಗೊಂಡಿತ್ತು.
ಇದನ್ನೂ ಓದಿ: Babar Azam: ಬಾಬರ್ ಅಬ್ಬರಕ್ಕೆ ಕಿಂಗ್ ಕೊಹ್ಲಿಯ ದಾಖಲೆ ಉಡೀಸ್
ಇಂತಹ ಸಣ್ಣ ಪುಟ್ಟ ತಂಡಗಳ ವಿರುದ್ಧ ಬಾಬರ್ ಪಡೆಯು ಹೀನಾಯವಾಗಿ ಸೋಲುತ್ತಿರುವುದು ಇದೀಗ ಪಾಕ್ ಕ್ರಿಕೆಟ್ ಮಂಡಳಿಯ ಚಿಂತೆಯನ್ನು ಹೆಚ್ಚಿಸಿದೆ. ಹೀಗಾಗಿಯೇ ಟಿ20 ವಿಶ್ವಕಪ್ ಬಳಿಕ ತಂಡಕ್ಕೆ ಮೇಜರ್ ಸರ್ಜರಿ ಮಾಡಲಾಗುವುದು ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದಾರೆ.