T20 World Cup 2024: ಪಾಕ್​ ಪಡೆಗೆ ಇಂದು ನಿರ್ಣಾಯಕ ಪಂದ್ಯ

|

Updated on: Jun 11, 2024 | 3:39 PM

T20 World Cup 2024: ಟಿ20 ವಿಶ್ವಕಪ್​ನ 22ನೇ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಲಿದೆ. ನ್ಯೂಯಾರ್ಕ್​ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯವು ಪಾಕ್ ಪಾಲಿಗೆ ನಿರ್ಣಾಯಕ. ಏಕೆಂದರೆ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಸೋತರೆ ಟಿ20 ವಿಶ್ವಕಪ್​ನಿಂದ ಅಧಿಕೃತವಾಗಿ ಹೊರಬೀಳಲಿದೆ.

T20 World Cup 2024: ಪಾಕ್​ ಪಡೆಗೆ ಇಂದು ನಿರ್ಣಾಯಕ ಪಂದ್ಯ
Pakistan
Follow us on

T20 World Cup 2024: ಟಿ20 ವಿಶ್ವಕಪ್​ ರೇಸ್​ನಲ್ಲಿ ಉಳಿಯಬೇಕಿದ್ದರೆ ಪಾಕಿಸ್ತಾನ್ ತಂಡ ಇಂದು (ಜೂ.11) ಗೆಲ್ಲಲೇಬೇಕು. ಕೆನಡಾ ವಿರುದ್ಧದ ಈ ಪಂದ್ಯದಲ್ಲಿ ಜಯ ಸಾಧಿಸಿದರೆ ಮಾತ್ರ ಪಾಕ್ ತಂಡ ಸೂಪರ್-8 ಹಂತಕ್ಕೇರುವ ಆಸೆಯನ್ನು ಜೀವಂತವಿರಿಸಿಕೊಳ್ಳಬಹುದು. ಏಕೆಂದರೆ ಆಡಿರುವ ಮೊದಲೆರಡು ಪಂದ್ಯಗಳಲ್ಲೂ ಪಾಕಿಸ್ತಾನ್ ತಂಡ ಸೋಲನುಭವಿಸಿದೆ.

ಮೊದಲ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಹೀನಾಯವಾಗಿ ಸೋತಿದ್ದ ಪಾಕಿಸ್ತಾನ್, 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಮಂಡಿಯೂರಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಕೆನಾಡ ತಂಡವನ್ನು ಎದುರಿಸಲಿದೆ.

ಸೋತರೆ ಔಟ್:

ನ್ಯೂಯಾರ್ಕ್​ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಕೆನಡಾ ವಿರುದ್ಧದ ಈ ಮ್ಯಾಚ್​ನಲ್ಲಿ ಪಾಕಿಸ್ತಾನ್ ತಂಡ ಸೋತರೆ ಟಿ20 ವಿಶ್ವಕಪ್​ನಿಂದ ಅಧಿಕೃತವಾಗಿ ಹೊರಬೀಳಲಿದೆ. ಹೀಗಾಗಿ ಇಂದಿನ ಪಂದ್ಯವು ಬಾಬರ್ ಆಝಂ ಪಡೆಗೆ ನಿರ್ಣಾಯಕ.

ಗ್ರೂಪ್-ಎ ಲೆಕ್ಕಾಚಾರ:

ಗ್ರೂಪ್​-ಎ ಅಂಕ ಪಟ್ಟಿಯಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿದ್ದರೆ, ಯುಎಸ್​ಎ ತಂಡ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಕೆನಡಾ ತಂಡ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡರೆ, ಪಾಕಿಸ್ತಾನ್ ತಂಡ 4ನೇ ಸ್ಥಾನದಲ್ಲಿದೆ. ಹಾಗೆಯೇ ಕೊನೆಯ ಸ್ಥಾನದಲ್ಲಿ ಐರ್ಲೆಂಡ್ ತಂಡವಿದೆ.

ಇಲ್ಲಿ ಭಾರತ ಮತ್ತು ಯುಎಸ್​ಎ ತಂಡಗಳು ಒಟ್ಟು 4 ಅಂಕಗಳನ್ನು ಕಲೆಹಾಕಿರುವ ಕಾರಣ ಮುಂದಿನ 2 ಪಂದ್ಯಗಳಲ್ಲಿ ಒಂದು ಜಯ ಸಾಧಿಸಿದರೆ ಸಾಕು. ಅಂದರೆ ಮುಂದಿನ ಪಂದ್ಯಗಳಲ್ಲಿ ಒಂದು ಗೆಲುವು ದಾಖಲಿಸಿದರೆ ಉಭಯ ತಂಡಗಳು ಸೂಪರ್-8 ಹಂತಕ್ಕೇರಲಿದೆ.

ಅತ್ತ ಭಾರತ ಮತ್ತು ಯುಎಸ್​ಎ ತಂಡಗಳು ಮುಂದಿನ 2 ಪಂದ್ಯಗಳಲ್ಲಿ ಒಂದು ಗೆಲುವು ದಾಖಲಿಸಿದರೆ, ಇತ್ತ ಕೆನಡಾ, ಐರ್ಲೆಂಡ್ ಮತ್ತು ಪಾಕಿಸ್ತಾನ್ ತಂಡಗಳು ಟಿ20 ವಿಶ್ವಕಪ್​ನಿಂದ ಹೊರಬೀಳಲಿದೆ.

ಸೂಪರ್-8 ಹಂತಕ್ಕೇರುವುದು ಹೇಗೆ?

ಭಾರತ ತಂಡವು ಯುಎಸ್​ಎ ವಿರುದ್ಧ ಜಯ ಸಾಧಿಸಿದರೆ ಸೂಪರ್-8 ಹಂತಕ್ಕೇರಲಿದೆ. ಅತ್ತ ಯುಎಸ್​ಎ ತಂಡ ತನ್ನ ಕೊನೆಯ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಗೆದ್ದರೆ ಮುಂದಿನ ಹಂತಕ್ಕೇರಬಹುದು.

ಒಂದು ವೇಳೆ ಭಾರತ ಮತ್ತು ಐರ್ಲೆಂಡ್ ವಿರುದ್ಧ ಯುಎಸ್​ಎ ತಂಡ ಸೋತರೆ ಪಾಕಿಸ್ತಾನ್ ತಂಡಕ್ಕೆ ಸೂಪರ್-8 ಹಂತಕ್ಕೇರಲು ಅವಕಾಶ ಇರಲಿದೆ.
ಅದಕ್ಕೂ ಮುನ್ನ ಪಾಕಿಸ್ತಾನ್ ತಂಡ ಕೆನಡಾ ವಿರುದ್ಧ ಜಯಗಳಿಸಬೇಕು. ಅಲ್ಲದೆ ತನ್ನ ಕೊನೆಯ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರೀ ಅಂತರದಿಂದ ಗೆಲುವು ದಾಖಲಿಸಬೇಕು.

ಈ ಮೂಲಕ ಉತ್ತಮ ನೆಟ್ ರನ್ ರೇಟ್​ ಸಹಾಯದಿಂದ ಯುಎಸ್​ಎ ತಂಡವನ್ನು ಹಿಂದಿಕ್ಕಿ ಪಾಕಿಸ್ತಾನ್ ತಂಡ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದೊಂದಿಗೆ ಸೂಪರ್-8 ಹಂತಕ್ಕೇರಬಹುದು.

ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ಉಗಾಂಡ ಬೌಲರ್

ಹೀಗಾಗಿ ಪಾಕ್ ಪಾಲಿಗೆ ಮುಂದಿನ 2 ಪಂದ್ಯಗಳು ನಿರ್ಣಾಯಕ. ಅದರಲ್ಲೂ ಇಂದಿನ ಪಂದ್ಯದಲ್ಲಿ ಕೆನಡಾ ವಿರುದ್ಧ ಸೋತರೆ ಟೂರ್ನಿಯಿಂದಲೇ ಹೊರಬೀಳಲಿದೆ. ಹಾಗಾಗಿ ಸೂಪರ್-8 ಹಂತಕ್ಕೇರುವ ಆಸೆಯನ್ನು ಜೀವಂತವಿರಿಸಿಕೊಳ್ಳಬೇಕಿದ್ದರೆ ಪಾಕಿಸ್ತಾನ್ ತಂಡವು ಇಂದು ಕೆನಡಾ ವಿರುದ್ಧ ಗೆಲ್ಲಲೇಬೇಕು.