T20 World Cup 2024: ಹೀಗಾದ್ರೆ ಪಾಕಿಸ್ತಾನ್ ಸೂಪರ್-8 ಹಂತಕ್ಕೇರುವುದು ಖಚಿತ
T20 World Cup 2024: ಗ್ರೂಪ್-ಎ ನಲ್ಲಿರುವ ಐದು ತಂಡಗಳ ಪೈಕಿ ಭಾರತ ತಂಡವು ಈಗಾಗಲೇ ಸೂಪರ್-8 ಹಂತಕ್ಕೇರಿದೆ. ಇನ್ನು 2ನೇ ಸ್ಥಾನಕ್ಕಾಗಿ ಯುಎಸ್ಎ, ಪಾಕಿಸ್ತಾನ್ ಮತ್ತು ಐರ್ಲೆಂಡ್ ನಡುವೆ ಪೈಪೋಟಿ ಇದೆ. ಅದರಲ್ಲೂ ಐರ್ಲೆಂಡ್ ಮತ್ತು ಯುಎಸ್ಎ ನಡುವಣ ಪಂದ್ಯದ ಫಲಿತಾಂಶದ ಮೇಲೆ ಪಾಕಿಸ್ತಾನ್ ತಂಡದ ಟಿ20 ವಿಸ್ವಕಪ್ ಭವಿಷ್ಯ ನಿಂತಿದೆ.
T20 World Cup 2024: ಟಿ20 ವಿಶ್ವಕಪ್ನ ಲೀಗ್ ಹಂತದ ಅಂತಿಮ ಪಂದ್ಯಗಳು ಇದೀಗ ಕುತೂಹಲದ ಕೇಂದ್ರವಾಗಿ ಮಾರ್ಪಟ್ಟಿದೆ. ಏಕೆಂದರೆ ಮೊದಲ ಸುತ್ತಿನ 26 ಪಂದ್ಯಗಳ ಮುಕ್ತಾಯದ ವೇಳೆಗೆ ಸೂಪರ್-8 ಹಂತಕ್ಕೇರಿರುವುದು ಕೇವಲ 4 ತಂಡಗಳು ಮಾತ್ರ. ಇನ್ನು ನಮೀಬಿಯಾ ಮತ್ತು ಒಮಾನ್ ತಂಡಗಳು ಈಗಾಗಲೇ ವಿಶ್ವಕಪ್ ರೇಸ್ನಿಂದ ಹೊರಬಿದ್ದಿದೆ. ಇನ್ನುಳಿದಿರುವ 4 ಸ್ಥಾನಗಳಿಗಾಗಿ 14 ತಂಡಗಳ ನಡುವೆ ಪೈಪೋಟಿ ಇದೆ. ಈ ಪೈಪೋಟಿಯಲ್ಲಿ ಬಲಿಷ್ಠರು ಎನಿಸಿಕೊಂಡಿರುವ ಪಾಕಿಸ್ತಾನ್, ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳಿವೆ.
ಇಲ್ಲಿ ಪಾಕಿಸ್ತಾನ್ ತಂಡಕ್ಕೆ ಸೂಪರ್-8 ಹಂತಕ್ಕೇರಲು ಯುಎಸ್ಎ ತಂಡದ ಫಲಿತಾಂಶ ಮುಖ್ಯವಾಗುತ್ತದೆ. ಅದು ಹೇಗೆಂದರೆ…
- ಗ್ರೂಪ್-ಎ ಅಂಕ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದೊಂದಿಗೆ ಸೂಪರ್-8 ಹಂತಕ್ಕೇರಿದೆ. ಇನ್ನು 4 ಅಂಕಗಳನ್ನು ಹೊಂದಿರುವ ಯುಎಸ್ಎ ತಂಡ ದ್ವಿತೀಯ ಸ್ಥಾನದಲ್ಲಿದ್ದರೆ, 2 ಪಾಯಿಂಟ್ಸ್ ಹೊಂದಿರುವ ಪಾಕಿಸ್ತಾನ್ ತಂಡವು ಮೂರನೇ ಸ್ಥಾನದಲ್ಲಿದೆ.
- ಇಲ್ಲಿ ಪಾಕಿಸ್ತಾನ್ ತಂಡವು ದ್ವಿತೀಯ ಸ್ಥಾನ ಅಲಂಕರಿಸಬೇಕಿದ್ದರೆ ಯುಎಸ್ಎ ತಂಡ ಐರ್ಲೆಂಡ್ ವಿರುದ್ಧ ಸೋಲಬೇಕು. ಯುಎಸ್ಎ ವಿರುದ್ಧ ಮುಂದಿನ ಪಂದ್ಯದಲ್ಲಿ ಐರ್ಲೆಂಡ್ ಗೆದ್ದರೆ ಪಾಕ್ ತಂಡದ ಸೂಪರ್-8 ಹಾದಿ ಸುಗಮವಾಗಲಿದೆ.
- ಯುಎಸ್ಎ ವಿರುದ್ಧ ಐರ್ಲೆಂಡ್ ಗೆದ್ದರೆ, ಪಾಕಿಸ್ತಾನ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೆ ಸಾಕು. ಈ ಮೂಲಕ ಯುಎಸ್ಎ ತಂಡವನ್ನು ಹಿಂದಿಕ್ಕಿ ಮುಂದಿನ ಹಂತಕ್ಕೇರಬಹುದು.
- ಇಲ್ಲಿ ನೆಟ್ ರನ್ ರೇಟ್ ಮುಖ್ಯವಾಗುವುದಿಲ್ಲ. ಏಕೆಂದರೆ ಯುಎಸ್ಎ ತಂಡದ ಪ್ರಸ್ತುತ ನೆಟ್ ರನ್ ರೇಟ್. +0.127
- ಇದೇ ವೇಳೆ ಪಾಕಿಸ್ತಾನ್ ತಂಡದ ಪ್ರಸ್ತುತ ನೆಟ್ ರನ್ ರೇಟ್ +0.191
ಇಲ್ಲಿ ಯುಎಸ್ಎ ತಂಡಕ್ಕಿಂತ ಪಾಕಿಸ್ತಾನ್ ತಂಡದ ನೆಟ್ ರನ್ ರೇಟ್ ಉತ್ತಮವಾಗಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಯುಎಸ್ಎ ತಂಡ ಸೋತರೆ ಪಾಕ್ ತಂಡಕ್ಕೆ ಸೂಪರ್-8 ಹಂತಕ್ಕೇರಲು ಉತ್ತಮ ಅವಕಾಶ ಇರಲಿದೆ.
ಪಾಕ್ ಭವಿಷ್ಯ ನಾಳೆ ನಿರ್ಧಾರ:
ಯುಎಸ್ಎ ತಂಡವು ತನ್ನ ಕೊನೆಯ ಪಂದ್ಯವನ್ನು ನಾಳೆ (ಜೂ.14) ಆಡಲಿದೆ. ಐರ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಗೆದ್ದರೆ ಯುಎಸ್ಎ ತಂಡವು ಸೂಪರ್-8 ಹಂತಕ್ಕೇರಲಿದೆ.
ಅತ್ತ ಯುಎಸ್ಎ ತಂಡ ಗೆದ್ದರೆ ಟಿ20 ವಿಶ್ವಕಪ್ನಿಂದ ಪಾಕಿಸ್ತಾನ್ ತಂಡವು ಅಧಿಕೃತವಾಗಿ ಹೊರಬೀಳಲಿದೆ. ಹೀಗಾಗಿ ನಾಳಿನ ಪಂದ್ಯದ ಫಲಿತಾಂಶದೊಂದಿಗೆ ಪಾಕಿಸ್ತಾನ್ ತಂಡದ ಟಿ20 ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ.
ಐರ್ಲೆಂಡ್ ತಂಡಕ್ಕೂ ಇದೆ ಚಾನ್ಸ್:
ವಿಶೇಷ ಎಂದರೆ ಯುಎಸ್ಎ ಮತ್ತು ಪಾಕಿಸ್ತಾನ್ ತಂಡಗಳು ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಅಂದರೆ ಇಲ್ಲಿ ಸೂಪರ್-8 ಹಂತಕ್ಕೇರುವ ಅವಕಾಶವನ್ನು ಎದುರು ನೋಡುತ್ತಿರುವ ಎರಡೂ ತಂಡಗಳಿಗೂ ಐರ್ಲೆಂಡ್ ತಂಡವೇ ಎದುರಾಳಿ.
ಇದನ್ನೂ ಓದಿ: T20 World Cup 2024: ಟೀಮ್ ಇಂಡಿಯಾದ ಮುಂದಿನ ಎದುರಾಳಿ ಆಸ್ಟ್ರೇಲಿಯಾ
ಒಂದು ವೇಳೆ ಈ ಎರಡೂ ತಂಡಗಳ ವಿರುದ್ಧ ಐರ್ಲೆಂಡ್ ಭರ್ಜರಿ ಜಯ ಸಾಧಿಸಿ, ಉತ್ತಮ ನೆಟ್ ರನ್ ರೇಟ್ ಪಡೆದುಕೊಂಡರೆ ಸೂಪರ್-8 ಹಂತಕ್ಕೇರುವ ಅವಕಾಶ ಇರಲಿದೆ. ಹೀಗಾಗಿ ಉಭಯ ತಂಡಗಳ ಲೆಕ್ಕಾಚಾರದ ನಡುವೆ ಐರ್ಲೆಂಡ್ ಕೂಡ ಮುಂದಿನ ಹಂತಕ್ಕೇರುವ ಆಕಾಂಕ್ಷೆಯನ್ನು ಹೊಂದಿದೆ.