PAK vs NAM: ಭಾರತದೊಂದಿಗೆ ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟ ಪಾಕಿಸ್ತಾನ

Pakistan Qualifies for T20 World Cup Super 8: 2026ರ ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ನಮೀಬಿಯಾವನ್ನು 102 ರನ್‌ಗಳಿಂದ ಸೋಲಿಸಿ ಪಾಕಿಸ್ತಾನ ಸೂಪರ್ 8 ಹಂತಕ್ಕೆ ಪ್ರವೇಶಿಸಿದೆ. ಸಾಹಿಬ್‌ಜಾದಾ ಫರ್ಹಾನ್ ಅಜೇಯ ಶತಕ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನೊಂದಿಗೆ, ಸೂಪರ್ 8 ಗುಂಪುಗಳು ಅಂತಿಮವಾಗಿದ್ದು, ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಗಳೂ ಇವೆ.

PAK vs NAM: ಭಾರತದೊಂದಿಗೆ ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟ ಪಾಕಿಸ್ತಾನ
Pak Team

Updated on: Feb 18, 2026 | 7:08 PM

2026 ರ ಟಿ20 ವಿಶ್ವಕಪ್​ನ (T20 World Cup 2026) ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನಮೀಬಿಯಾವನ್ನು ಎದುರಿಸಿದ್ದ ಪಾಕಿಸ್ತಾನ (Pakistan vs Namibia) ಭಾರಿ ಅಂತರದಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ವಾಸ್ತವವಾಗಿ ಭಾರತದ ವಿರುದ್ಧದ ಪಂದ್ಯವನ್ನು ಸೋತು, ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದ್ದ ಪಾಕ್ ಪಡೆ, ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯಬೇಕೆಂದರೆ ನಮೀಬಿಯಾ ವಿರುದ್ಧದ ಮಾಡು-ಅಥವಾ-ಮಡಿ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಅದರಂತೆ ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ನಮೀಬಿಯಾವನ್ನು 102 ರನ್‌ಗಳಿಂದ ಸೋಲಿಸುವ ಮೂಲಕ ಪಾಕಿಸ್ತಾನ ಸೂಪರ್ 8 ಸುತ್ತಿಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಸೂಪರ್ 8 ತಲುಪಿದ ಕೊನೆಯ ತಂಡವಾಗಿರುವ ಪಾಕ್ ತಂಡ, ಭಾರತದ ವಿರುದ್ಧ ಮತ್ತೊಂದು ಪಂದ್ಯದ ಭರವಸೆಯನ್ನು ಹುಟ್ಟುಹಾಕಿದೆ.

ನಮೀಬಿಯಾಕ್ಕೆ 102 ರನ್‌ಗಳ ಸೋಲು

ಕೊಲಂಬೊ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ನಮೀಬಿಯಾಗೆ 200 ರನ್‌ಗಳ ಗುರಿಯನ್ನು ನೀಡಿತು. ತಂಡದ ಪರ ಸಾಹಿಬ್‌ಜಾದಾ ಫರ್ಹಾನ್ 58 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿ ತಂಡವನ್ನು 199 ರನ್‌ಗಳಿಗೆ ಕೊಂಡೊಯ್ದರು. ಇದಕ್ಕೆ ಪ್ರತಿಯಾಗಿ ಗುರಿ ಬೆನ್ನಟ್ಟಿದ ನಮೀಬಿಯಾ ಉಸ್ಮಾನ್ ತಾರಿಕ್ ದಾಳಿಗೆ ತತ್ತರಿಸಿ 100 ರನ್‌ಗಳನ್ನು ಕಲೆಹಾಕಲು ಸಾಧ್ಯವಾಗದೆ 97 ರನ್​ಗಳಿಗೆ ಆಲೌಟ್ ಆಯಿತು. ಹೀಗಾಗಿ, ಪಾಕಿಸ್ತಾನವು ನಿರ್ಣಾಯಕ ಪಂದ್ಯದಲ್ಲಿ ಬೃಹತ್ ಗೆಲುವು ಸಾಧಿಸಿ ಸೂಪರ್ 8 ಸುತ್ತಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು.

ಸೂಪರ್-8 ತಲುಪಿದ 8 ತಂಡಗಳಿವು

ನಮೀಬಿಯಾ ವಿರುದ್ಧದ ಗೆಲುವಿನೊಂದಿಗೆ, ಪಾಕಿಸ್ತಾನ ಈಗ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಇದರೊಂದಿಗೆ, ಸೂಪರ್ 8 ಸುತ್ತಿನಲ್ಲಿ ಯಾವ್ಯಾವ ತಂಡಗಳು ಕಾಣಿಸಿಕೊಳ್ಳಲಿವೆ ಎಂಬುದು ಖಚಿತವಾಗಿದೆ. ಗುಂಪು 1 ರಲ್ಲಿ ಭಾರತ, ಜಿಂಬಾಬ್ವೆ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಸೇರಿದ್ದರೆ, ಗುಂಪು 2 ರಲ್ಲಿ ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಸೇರಿವೆ. ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಇತರ ಮೂರು ತಂಡಗಳ ವಿರುದ್ಧ ತಲಾ ಒಂದೊಂದು ಪಂದ್ಯವನ್ನು ಆಡುತ್ತದೆ. ಅಂತಿಮವಾಗಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಸೆಮಿಫೈನಲ್​ಗೆ ಎಂಟ್ರಿಕೊಡಲಿವೆ.

IND vs NED: ಕೊನೆಯ ಲೀಗ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ

ಸೆಮಿಫೈನಲ್‌ನಲ್ಲಿ ಭಾರತ- ಪಾಕ್ ಮುಖಾಮುಖಿ

ಮೇಲೆ ಹೇಳಿದಂತೆ ಸೂಪರ್ 8 ಹಂತದಲ್ಲಿ, ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಪ್ರತಿಯೊಂದು ತಂಡದ ವಿರುದ್ಧ ಒಂದು ಪಂದ್ಯವನ್ನು ಆಡುತ್ತದೆ. ಇದರರ್ಥ ಈ ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯುವುದಿಲ್ಲ. ಆದರೆ ಉಭಯ ತಂಡಗಳು ಸೆಮಿಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಬಹುದು. ಭಾರತವು ಗ್ರೂಪ್ 1 ರಲ್ಲಿ ಅಗ್ರಸ್ಥಾನ ಪಡೆದು, ಇತ್ತ ಪಾಕಿಸ್ತಾನ ಗ್ರೂಪ್ 2 ರಲ್ಲಿ ಎರಡನೇ ಸ್ಥಾನ ಪಡೆದು ಸೆಮಿಫೈನಲ್‌ಗೆ ಮುನ್ನಡೆದರೆ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ