ಮೊದಲ ಪಂದ್ಯದಲ್ಲಿ ಎದ್ದು ಬಿದ್ದು ಗೆದ್ದ ಪಾಕಿಸ್ತಾನಕ್ಕೆ ನಡುಕ!

T20 World Cup 2026: ಟಿ20 ವಿಶ್ವಕಪ್​ನ 12ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಯುಎಸ್​ಎ ತಂಡವನ್ನು ಎದುರಿಸಲಿದೆ. ಈ ಪಂದ್ಯದ ಬಳಿಕ, ಅಂದರೆ ಫೆಬ್ರವರಿ 15 ರಂದು ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ವಿರುದ್ಧದ ಮ್ಯಾಚ್ ಬಳಿಕ ಪಾಕ್ ಪಡೆ ನಮೀಬಿಯ ತಂಡವನ್ನು ಎದುರಿಸಲಿದೆ.

ಮೊದಲ ಪಂದ್ಯದಲ್ಲಿ ಎದ್ದು ಬಿದ್ದು ಗೆದ್ದ ಪಾಕಿಸ್ತಾನಕ್ಕೆ ನಡುಕ!
Pakistan

Updated on: Feb 10, 2026 | 10:53 AM

T20 World Cup 2026: ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಾಕಿಸ್ತಾನ್ ಶುಭಾರಂಭ ಮಾಡಿದೆ. ಈ ಶುಭಾರಂಭ ರೋಚಕ ಗೆಲುವಿನೊಂದಿಗೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ನೆದರ್​ಲೆಂಡ್ಸ್ ವಿರುದ್ಧದ ಈ ಪಂದ್ಯದಲ್ಲಿ ಪಾಕ್ ಪಡೆ ಅಂತಿಮ ಓವರ್​ನಲ್ಲಿ ಗೆಲುವು ದಾಖಲಿಸಿತ್ತು. ಅದು ಸಹ 3 ವಿಕೆಟ್​ಗಳಿಂದ.

ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೆದರ್​ಲೆಂಡ್ಸ್ ತಂಡವು ಕಲೆಹಾಕಿದ್ದು ಕೇವಲ 147 ರನ್​ಗಳು ಮಾತ್ರ.

ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ಪಾಕ್ ಪಡೆ ಅಕ್ಷರಶಃ ಒದ್ದಾಡಿದರು. ಅದರಲ್ಲೂ ಕೊನೆಯ 2 ಓವರ್​ಗಳಲ್ಲಿ ಪಾಕಿಸ್ತಾನ್ ತಂಡಕ್ಕೆ 29 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಮ್ಯಾಕ್ಸ್ ಒಡೌಡ್ ಬಿಟ್ಟ ಕ್ಯಾಚ್ ನೆದರ್​ಲೆಂಡ್ಸ್ ಪಾಲಿಗೆ ಮುಳುವಾಯಿತು.

ಅಂತಿಮ ಹಂತದಲ್ಲಿ ಸಿಕ್ಕ ಜೀವದಾನವನ್ನು ಬಳಸಿಕೊಂಡ ಫಯೀಮ್ ಅಶ್ರಫ್ 19ನೇ ಓವರ್​ನಲ್ಲಿ 24 ರನ್ ಚಚ್ಚಿದರು. ಅಲ್ಲದೆ ಕೊನೆಯ ಓವರ್​ನ 3ನೇ ಎಸೆತದಲ್ಲಿ ಫೋರ್ ಬಾರಿಸಿ ಪಾಕಿಸ್ತಾನ್ ತಂಡಕ್ಕೆ 3 ವಿಕೆಟ್​ಗಳ ರೋಚಕ ಗೆಲುವು ತಂದು ಕೊಟ್ಟರು.

ಅಂದರೆ ಇಲ್ಲಿ ನೆದರ್​ಲೆಂಡ್ಸ್ ಫೀಲ್ಡರ್ ಮಾಡಿದ ತಪ್ಪಿನಿಂದಾಗಿ ಪಾಕಿಸ್ತಾನ್ ತಂಡ ಗೆಲ್ಲುವಂತಾಯಿತು ಎಂದರೆ ತಪ್ಪಾಗಲಾರದು. ಏಕೆಂದರೆ ಫಯೀಮ್ ಅಶ್ರಫ್ ವಿಕೆಟ್ ಪಡೆದಿದ್ದರೆ, ಪಂದ್ಯವು ಸಂಪೂರ್ಣ ನೆದರ್​ಲೆಂಡ್ಸ್ ಪರ ವಾಲುತ್ತಿತ್ತು. ಆದರೆ ಅಂತಿಮ ಹಂತದಲ್ಲಿ ಮ್ಯಾಕ್ಸ್​ ಒಡೌಡ್ ಮಾಡಿದ ತಪ್ಪಿನಿಂದಾಗಿ ನೆದರ್​ಲೆಂಡ್ಸ್ ಸೋಲನುಭವಿಸಿತು.

ಇದೀಗ ಪಾಕಿಸ್ತಾನ್ ತಂಡವು ತನ್ನ 2ನೇ ಪಂದ್ಯವಾಡಲು ಸಜ್ಜಾಗಿದೆ. ಇಂದು (ಫೆ.10) ನಡೆಯಲಿರುವ ಟಿ20 ವಿಶ್ವಕಪ್​ನ 12ನೇ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ಯುಎಸ್​ಎ ಮುಖಾಮುಖಿಯಾಗಲಿದೆ. ಮೊದಲ ಪಂದ್ಯದಲ್ಲೇ ಎದ್ದು ಬಿದ್ದು ಗೆದ್ದಿರುವ ಪಾಕ್ ಪಡೆಗೆ ಇದೀಗ ಇತಿಹಾಸದ್ದೇ ಚಿಂತೆ.

ಮರುಕಳಿಸಲಿದೆಯಾ ಇತಿಹಾಸ?

ಪಾಕಿಸ್ತಾನ್ ಮತ್ತು ಯುಎಸ್​ಎ ಟಿ20 ಕ್ರಿಕೆಟ್​ನಲ್ಲಿ ಈವರೆಗೆ ಒಮ್ಮೆ ಮಾತ್ರ ಮುಖಾಮುಖಿಯಾಗಿದೆ. ಈ ಮುಖಾಮುಖಿಯಲ್ಲಿ ಗೆದ್ದಿರುವುದು ಯುಎಸ್​ಎ ಎಂಬುದು ವಿಶೇಷ. ಅಂದರೆ 2024 ರಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ಪಡೆಯನ್ನು ಬಗ್ಗು ಬಡಿಯುವಲ್ಲಿ ಯುಎಸ್​ಎ ಯಶಸ್ವಿಯಾಗಿತ್ತು.

ಡಲ್ಲಾಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಯುಎಸ್​ಎ ತಂಡವು ಅಂತಿಮ ಓವರ್​ನಲ್ಲಿ 14 ರನ್​ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿದ್ದರು.

ಇನ್ನು ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಸ್​ಎ ತಂಡವು 18 ರನ್ ಕಲೆಹಾಕಿದ್ದರು. 19 ರನ್​ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ 13 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಯುಎಸ್​ಎ ತಂಡ 5 ರನ್​ಗಳ ವಿಜಯ ಸಾಧಿಸಿತ್ತು.

ಇದನ್ನೂ ಓದಿ: IPL 2026: ಬೆಂಗಳೂರು ಯುನೈಟೆಡ್ ಆಗಲಿದೆಯಾ RCB?

ಇದೀಗ ಮತ್ತೊಮ್ಮೆ ಪಾಕಿಸ್ತಾನ್ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ ಯುಎಸ್​ಎ. ಅದರಲ್ಲೂ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ಭಾರತ ತಂಡವನ್ನೇ ಕಾಡಿದ್ದ ಯುಎಸ್​ಎ ಬೌಲರ್​ಗಳು ಪಾಕಿಸ್ತಾನ್ ತಂಡವನ್ನು ಸಹ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವುದರಲ್ಲಿ ಅನುಮಾನವೇ ಇಲ್ಲ.