T20 World Cup: ವಿಶ್ವಕಪ್‌ನಲ್ಲಿ ಭಾರತ- ಪಾಕ್ ನಡುವಿನ ಈ 3 ವಿವಾದಗಳ ಬಗ್ಗೆ ನಿಮಗೆಷ್ಟು ಗೊತ್ತು?
T20 World Cup: ಜೂನ್ 9 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಅಮೋಘ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ನಡೆದಂತಹ ಮೂರು ಪ್ರಮುಖ ವಿವಾದಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.
9ನೇ ಆವೃತ್ತಿಯ ಟಿ20 ವಿಶ್ವಕಪ್ (T20 World Cup 2024) ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಉಳಿದಿವೆ. ಜೂನ್ 2 ರಿಂದ ಟೂರ್ನಿ ಆರಂಭವಾಗಲಿದ್ದು, ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಆದರೆ, ಜೂನ್ 9 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಅಮೋಘ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಈಗಾಗಲೇ ಈ ಪಂದ್ಯದ ಟಿಕೆಟ್ ಬೆಲೆ ಲಕ್ಷಕ್ಕೆ ತಲುಪಿದೆ. ಆದರೆ ಅದಕ್ಕೂ ಮುನ್ನ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ನಡೆದಂತಹ ಮೂರು ಪ್ರಮುಖ ವಿವಾದಗಳ (Controversies) ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.
ಪಠಾಣ್ ಕೋಟ್ ದಾಳಿ; ಬೇರೆಡೆಗೆ ಪಂದ್ಯ ಶಿಫ್ಟ್
2016 ರಲ್ಲಿ ನಡೆದ ಟಿ20 ವಿಶ್ವಕಪ್ಗೆ ಭಾರತ ಆತಿಥ್ಯವಹಿಸಿತ್ತು. ಈ ಆವೃತ್ತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮಾರ್ಚ್ 19 ರಂದು ಧರ್ಮಶಾಲಾದಲ್ಲಿ ಮುಖಾಮುಖಿಯಾಗಬೇಕಿತ್ತು. ಆದರೆ, ಈ ಪಂದ್ಯಕ್ಕೂ ಮುನ್ನವೇ ವಿವಾದ ಬುಗಿಲೆದ್ದಿತ್ತು. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವಿರುದ್ಧ ಸ್ಥಳೀಯರು ಪ್ರತಿಭಟನೆ ಆರಂಭಿಸಿದ್ದರು. ಈ ಪ್ರತಿಭಟನೆಗೆ ಕಾರಣ ಈ ಪಂದ್ಯ ನಡೆಯುವುದಕ್ಕೂ ಕೆಲ ದಿನಗಳ ಹಿಂದೆ ನಡೆದ ಪಠಾಣ್ ಕೋಟ್ ದಾಳಿ. ಈ ದಾಳಿಯಲ್ಲಿ ಭಾರತದ ಏಳು ಯೋಧರು ಹುತಾತ್ಮರಾಗಿದ್ದರು. ಈ ಕಾರಣದಿಂದಾಗಿ ಉಭಯ ತಂಡಗಳ ನಡುವಿನ ಪಂದ್ಯಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ಪಂದ್ಯದ ಸ್ಥಳವನ್ನು ಬದಲಾಯಿಸಿದ ಬಿಸಿಸಿಐ, ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಪಂದ್ಯವನ್ನು ಆಯೋಜಿಸಿತ್ತು.
T20 World Cup 2024: ಈ ಐವರು ದಿಗ್ಗಜ ಕ್ರಿಕೆಟಿಗರಿಗೆ ಇದು ಕೊನೆಯ ಟಿ20 ವಿಶ್ವಕಪ್..!
ಪಾಕಿಸ್ತಾನದಲ್ಲಿ ಪ್ರತಿಭಟನೆ
ಇನ್ನು ಅದೇ ವರ್ಷ ಅಂದರೆ, 2016ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಭಾರತದಲ್ಲಿ ಭಾರೀ ವಿರೋಧ ಎದುರಿಸಿತ್ತು. ಈ ಪ್ರತಿಭಟನೆಯನ್ನು ಅಂದಿನ ಪಾಕ್ ನಾಯಕ ಶಾಹಿದ್ ಅಫ್ರಿದಿ ಶಾಂತಗೊಳಿಸುವ ಸಲುವಾಗಿ ಪಾಕಿಸ್ತಾನದ ಜನರಿಗೆ ಭಾರತದಲ್ಲಿ ಹೆಚ್ಚು ಪ್ರೀತಿ ಸಿಗುತ್ತದೆ ಎಂದು ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಅಫ್ರಿದಿಯ ಈ ಹೇಳಿಕೆ ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿತ್ತು. ಜನರು ಅಫ್ರಿದಿಯನ್ನು ತೀವ್ರವಾಗಿ ವಿರೋಧಿಸಿ ಪಾಕಿಸ್ತಾನದಲ್ಲಿ ಪ್ರತಿಭಟನೆ ನಡೆಸಿದ್ದರು.
ಫ್ರೀ ಹಿಟ್ ವಿವಾದ
2022ರ ಟಿ20 ವಿಶ್ವಕಪ್‌ನಲ್ಲಿ ಅಡಿಲೇಡ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಹಣಾಹಣಿ ನಡೆದಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿದ ಇನ್ನಿಂಗ್ಸ್ ಅನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಸೋಲಿನಂಚಿನಲ್ಲಿದ್ದ ಟೀಂ ಇಂಡಿಯಾಗೆ ಭರ್ಜರಿ ಜಯ ತಂದುಕೊಟ್ಟ ಶ್ರೇಯ ಕೊಹ್ಲಿಗೆ ಸಂದಿತ್ತು. ಈ ಪಂದ್ಯದ 20ನೇ ಓವರ್‌ನ ಕೊನೆಯ 3 ಎಸೆತಗಳಲ್ಲಿ ಭಾರತಕ್ಕೆ 13 ರನ್‌ಗಳ ಅಗತ್ಯವಿತ್ತು. ಈ ವೇಳೆ ಸ್ಪಿನ್ನರ್ ಮೊಹಮ್ಮದ್ ನವಾಜ್ ಫುಲ್ ಟಾಸ್ ಬೌಲ್ ಮಾಡಿದರು. ಈ ಎಸೆತವನ್ನು ವಿರಾಟ್ ಕೊಹ್ಲಿ ಸಿಕ್ಸರ್ಗಟ್ಟಿದ್ದರು. ಆ ನಂತರ ಅಂಪೈರ್ ಈ ಎಸೆತವನ್ನು ನೋ ಬಾಲ್ ಎಂದು ಘೋಷಿಸಿದರು.
ಹೀಗಾಗಿ ಕೊಹ್ಲಿಗೆ ಫ್ರೀ ಹಿಟ್ ಸಿಕ್ಕಿತು. ಆದರೆ ಈ ಎಸೆತವನ್ನು ಕೊಹ್ಲಿಗೆ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ಸ್ಟಂಪ್‌ಗೆ ಬಡಿದು ಥರ್ಡ್ ಮ್ಯಾನ್ ದಿಕ್ಕಿಗೆ ಹೋಯಿತು. ಇದನ್ನು ಗಮನಿಸಿದ ವಿರಾಟ್ ಮತ್ತು ದಿನೇಶ್ ಕಾರ್ತಿಕ್ ಈ ಫ್ರೀ ಹಿಟ್ ಎಸೆತದಲ್ಲಿ ಓಡುವ ಮೂಲಕ 3 ರನ್ ಕಲೆಹಾಕಿದ್ದರು. ಆದರೆ ಈ ವೇಳೆ ಅಂಪೈರ್ ಜೊತೆಗೆ ವಾಗ್ವಾದಕ್ಕಿಳಿದ ಪಾಕ್ ಆಟಗಾರರು, ಫ್ರೀ ಹಿಟ್ ಚೆಂಡು ಸ್ಟಂಪ್‌ಗೆ ಬಡಿದಿದೆ. ಹೀಗಾಗಿ ಇದನ್ನು ಡೆಡ್ ಬಾಲ್ ಎಂದು ಘೋಷಿಸಬೇಕು ಎಂದು ಮನವಿ ಇಟ್ಟಿದ್ದಲ್ಲದೆ, ಕೊಹ್ಲಿ- ಕಾರ್ತಿಕ್ ರನ್ನಿಂಗ್ ಮೂಲಕ ಕಲೆಹಾಕಿದ 3 ರನ್ಗಳನ್ನು ಅಮಾನ್ಯವೆಂದು ಘೋಷಿಸಬೇಕು ಎಂದು ಪಟ್ಟು ಹಿಡಿದರು. ಆದರೆ ಅಂಪೈರ್, ಪಾಕ್ ಆಟಗಾರರ ಮನವಿಗೆ ಸೊಪ್ಪು ಹಾಕಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ