ಮೆಲ್ಬೋರ್ನ್‌ನಲ್ಲಿ ಪಾಕ್ (Pakistan) ತಂಡವನ್ನು ಮಣಿಸಿದ ಟೀಂ ಇಂಡಿಯಾ (Team India) ಇದೀಗ ಸಿಡ್ನಿಗೆ ಆಗಮಿಸಿದೆ. ಗುರುವಾರ ನೆದರ್ಲೆಂಡ್ಸ್ ವಿರುದ್ಧ ರೋಹಿತ್ ಪಡೆ ಇದೇ ಮೈದಾನದಲ್ಲಿ ತನ್ನ ಎರಡನೇ ಪಂದ್ಯವನ್ನು ಆಡಲಿದೆ. ಆದರೆ ಆ ಪಂದ್ಯಕ್ಕೂ ಮುನ್ನ ತನ್ನ ಕುಟುಂಬದವರೊಂದಿಗೆ ಅದ್ಧೂರಿಯಾಗಿ ದೀಪಾವಳಿ ಆಚರಿಸಲು ನಿರ್ಧರಿಸಿದ್ದ ಟೀಂ ಇಂಡಿಯಾ ಆಟಗಾರರಿಗೆ ನಾಯಕ ಹಾಗೂ ಕೋಚ್ ಬ್ರೇಕ್ ಹಾಕಿದ್ದಾರೆ. ವಾಸ್ತವವಾಗಿ ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನದ ವಿರುದ್ಧದ ರೋಚಕ ಗೆಲುವು ಮತ್ತು ದೀಪಾವಳಿ ಹಬ್ಬವನ್ನು (Diwali festival) ಸಿಡ್ನಿಯಲ್ಲಿ (Sydney) ಆಚರಿಸಲು ಯೋಜನೆ ರೂಪಿಸಿಕೊಂಡಿದ್ದರು. ಆದರೆ ಇದೀಗ ಈ ಆಚರಣೆಗೆ ಬ್ರೇಕ್ ಬಿದ್ದಂತ್ತಾಗಿದೆ.
ಪಾಕಿಸ್ತಾನದ ವಿರುದ್ಧದ ಗೆಲುವನ್ನು ಅದ್ಧೂರಿಯಾಗಿ ಆಚರಿಸಬೇಡಿ ಎಂದು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ತಂಡಕ್ಕೆ ಸಂದೇಶ ನೀಡಿದ್ದರು. ಅಲ್ಲದೆ ದೀಪಾವಳಿ ಪ್ರಯುಕ್ತ ಆಯೋಜನೆಗೊಂಡಿದ್ದ ಡಿನ್ನರ್ ಪಾರ್ಟಿಯಲ್ಲೂ ಭಾಗಿಯಾಗದಂತೆ ಆಟಗಾರರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಆಟಗಾರರೊಂದಿಗೆ ಮಾತನಾಡಿರುವ ನಾಯಕ ರೋಹಿತ್ ಹಾಗೂ ಮಾಜಿ ನಾಯಕ ಕೊಹ್ಲಿ, ಭಾವನೆಗಳಿಗೆ ಮಾರುಹೋಗಬೇಡಿ, ದೊಡ್ಡ ಗುರಿಯತ್ತ ಗಮನ ಹರಿಸಿ ಎಂಬ ಸಂದೇಶವನ್ನು ನೀಡಿದ್ದರು ಎಂದು ವರದಿಯಾಗಿದೆ.
ಸ್ಪರ್ಧೆ ಇನ್ನೂ ಮುಗಿದಿಲ್ಲ
ಅಲ್ಲದೆ ಮುಂದಿನ ಪಂದ್ಯದ ಬಗ್ಗೆ ಯೋಚಿಸಿ. ದೀರ್ಘಕಾಲೀನ ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಪಾಕ್ ವಿರುದ್ಧದ ಗೆಲುವಿನಿಂದ ನಮಗೆ ಉತ್ತಮ ಆರಂಭ ಸಿಕ್ಕಿದೆ. ಹೀಗಾಗಿ ನಮ್ಮ ಆಟ ಸ್ಥಿರವಾಗಿರಬೇಕು ಮತ್ತು ಉತ್ತಮ ಪ್ರದರ್ಶನ ನೀಡಬೇಕು. ಸ್ಪರ್ಧೆ ಇನ್ನೂ ಮುಗಿದಿಲ್ಲ. ಆದ್ದರಿಂದ ಗೆಲುವಿನ ಅಲೆಯಲ್ಲಿ ತೇಲುವ ಬದಲು ನೆಲದ ಮೇಲೆ ಇರಿ ಎಂದು ಪಂದ್ಯದ ನಂತರದ ಸಭೆಯಲ್ಲಿ ಆಟಗಾರರಿಗೆ ತಿಳಿಸಲಾಗಿದೆ ಎಂದು ಟೀಂ ಇಂಡಿಯಾ ಸಿಬ್ಬಂದಿಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ‘ನನ್ನನ್ನು ಕಾಪಾಡಿದಕ್ಕೆ ಥ್ಯಾಂಕ್ಸ್ ಬ್ರೋ, ಇಲ್ಲದಿದ್ದರೆ ಫ್ಯಾನ್ಸ್ ನನ್ನ ಉಳಿಸುತ್ತಿರಲಿಲ್ಲ’; ಡಿಕೆ ವಿಡಿಯೋ ಸಖತ್ ವೈರಲ್
ಗ್ರ್ಯಾಂಡ್ ಪಾರ್ಟಿಯನ್ನು ರದ್ದುಗೊಳಿಸಿದೆ
ಪಾಕ್ ವಿರುದ್ಧ ಜಯಸಿ, ಸಿಡ್ನಿಗೆ ಕಾಲಿಟ್ಟ ಟೀಂ ಇಂಡಿಯಾದ ಜೊತೆ ದೀಪಾವಳಿ ಆಚರಿಸಲು ಸಿಡ್ನಿ ನಗರ ಕೂಡ ಸಜ್ಜಾಗಿತ್ತು. ಆದರೆ ತಂಡದ ಹಿರಿಯ ಆಟಗಾರರು ಮತ್ತು ತರಬೇತುದಾರರಿಂದ ಸಂದೇಶಗಳನ್ನು ಸ್ವೀಕರಿಸಿದ ನಂತರ ಟೀಂ ಇಂಡಿಯಾ ದೀಪಾವಳಿಯ ಗ್ರ್ಯಾಂಡ್ ಪಾರ್ಟಿಯನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ.
ಅಲ್ಲದೆ ಪಾಕಿಸ್ತಾನ ವಿರುದ್ಧ ರೋಚಕ ಜಯ ಗಳಿಸಿದ ರೋಹಿತ್ ಪಡೆಗೆ ವಿಶ್ವದೆಲ್ಲೆಡೆಯಿಂದ ಶುಭ ಹಾರೈಕೆಗಳ ಮಹಾಪೂರವೇ ಹರಿದುಬಂದಿದೆ. ಆದರೆ ಮೆಲ್ಬೋರ್ನ್‌ನಲ್ಲಿ ಪಾಕ್ ತಂಡವನ್ನು ಮಣಿಸಿದ ನಂತರ ಟೀಂ ಇಂಡಿಯಾ ಆಟಗಾರರು ಯಾವುದೇ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿಲ್ಲ. ಅಲ್ಲದೆ ಆಟಗಾರರು ಕೂಡ ತಕ್ಷಣವೇ ತಮ್ಮ ಹೋಟೆಲ್ ಕೊಠಡಿಗಳಿಗೆ ಮರಳಿದ್ದು, ಮಾಧ್ಯಮ ಬದ್ಧತೆಯಿಂದಾಗಿ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಕೊನೆಯದಾಗಿ ತಮ್ಮ ಕೋಣೆಗಳಿಗೆ ತೆರಳಿದ್ದರು ಎಂದು ವರದಿಯಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ