
ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ (IPL 2021) ಬಹುತೇಕ ದೇಶಗಳಲ್ಲಿ ನೇರ ಪ್ರಸಾರವಾಗುತ್ತಿದೆ. ಇತ್ತ ಅಫ್ಘಾನಿಸ್ತಾನದ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅಲ್ಲೂ ಕೂಡ ಎಲ್ಲಾ ತಂಡಗಳಿಗೂ ಅಭಿಮಾನಿಗಳಿದ್ದಾರೆ. ಅದರಂತೆ ಮೊದಲಾರ್ಧದ ಟೂರ್ನಿಯನ್ನು ವೀಕ್ಷಿಸಿದ್ದ ಅಫ್ಘಾನ್ ಕ್ರಿಕೆಟ್ ಪ್ರೇಮಿಗಳಿಗೆ ದ್ವಿತಿಯಾರ್ಧದ ಪಂದ್ಯ ವೀಕ್ಷಿಸುವ ಭಾಗ್ಯವಿಲ್ಲ. ಹೌದು, ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಇದೀಗ ಐಪಿಎಲ್ ಅನ್ನು ನಿಷೇಧಿಸಿದೆ. ಈ ಹಿಂದೆ ಮಹಿಳಾ ಕ್ರಿಕೆಟ್ ಅನ್ನು ನಿಷೇಧಿಸಿ ಸುದ್ದಿಯಲ್ಲಿದ್ದ ತಾಲಿಬಾನಿಗಳು ಈ ಬಾರಿ ಅಫ್ಘಾನಿಸ್ತಾನದಲ್ಲಿ ಐಪಿಎಲ್ ಪ್ರಸಾರ ಮಾಡಕೂಡದು ಎಂದು ಆದೇಶ ಹೊರಡಿಸಿದೆ. ಇದಕ್ಕೆ ನೀಡಿರುವ ಕಾರಣ ಐಪಿಎಲ್ ಇಸ್ಲಾಂ ವಿರೋಧಿ ಎಂಬುದು.
ಐಪಿಎಲ್ ಟೂರ್ನಿ ವೇಳೆ ತುಂಡುಡುಗೆಯಲ್ಲಿ ಮಹಿಳೆಯರು ನೃತ್ಯ ಮಾಡುತ್ತಾರೆ. ಅಲ್ಲದೆ ಐಪಿಎಲ್ ವೇಳೆ ಮಹಿಳೆಯರು ಕಾಣಿಸಿಕೊಳ್ಳುತ್ತಾರೆ. ಇದು ಇಸ್ಲಾಂಗೆ ವಿರುದ್ದವಾಗಿದ್ದು, ಹಾಗಾಗಿ ಅಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿಯ ಪ್ರಸಾರಕ್ಕೆ ನಿಷೇಧ ಹೇರಲಾಗಿದೆ ಎಂದು ಮಾಜಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮಾಧ್ಯಮ ವ್ಯವಸ್ಥಾಪಕ ಮತ್ತು ಪತ್ರಕರ್ತ, ಎಂ. ಇಬ್ರಾಹಿಂ ಮೊಮಾಂಡ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಹಿಂದೆ ಸಿನಿಮಾ ಹಾಗೂ ಇನ್ನಿತರ ಮನರಂಜನೆಗಳಿಗೆ ನಿಷೇಧ ಹೇರಿದ್ದ ತಾಲಿಬಾನಿಗಳು, ಇದೀಗ ಐಪಿಎಲ್ಗೂ ನಿಷೇಧ ಹೇರುವ ಮೂಲಕ ಅಫ್ಘಾನ್ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಅತ್ತ ಅಫ್ಘಾನ್ ಮಹಿಳಾ ತಂಡಕ್ಕೆ ನಿಷೇಧ ಹೇರಿದ್ದ ಬೆನ್ನಲ್ಲೇ ಆಸ್ಟ್ರೇಲಿಯಾ ಅಫ್ಘಾನಿಸ್ತಾನ್ ತಂಡದ ಜೊತೆ ಸರಣಿ ಆಡುವುದಿಲ್ಲ ಎಂದು ತಿಳಿಸಿದೆ. ಈ ಮೂಲಕ ಅಫ್ಘಾನ್ ಮಹಿಳಾ ಸ್ವಾತಂತ್ರ್ಯ ಹರಣದ ವಿರುದ್ದ ಪರೋಕ್ಷವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಸಮರ ಸಾರಿದೆ.
ಇದಾಗ್ಯೂ ತಾಲಿಬಾನಿಗಳು ಐಪಿಎಲ್ಗೆ ನಿಷೇಧ ಹೇರುವ ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಇತ್ತ ಐಪಿಎಲ್ನಲ್ಲಿ ಅಫ್ಘಾನಿಸ್ತಾನ್ ಆಟಗಾರರಾದ ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಸ್ಥಾನ ಪಡೆದಿದ್ದು, ಇವರ ಆಟವನ್ನು ವೀಕ್ಷಿಸಲು ಈಗ ಅಫ್ಘಾನಿಸ್ತಾನ್ ಕ್ರಿಕೆಟ್ ಪ್ರೇಮಿಗಳಿಗೆ ಭಾಗ್ಯವಿಲ್ಲದಂತಾಗಿದೆ.
ಇದನ್ನೂ ಓದಿ: IPL 2021: 5 ತಂಡಗಳಲ್ಲಿ 10 ಹೊಸ ವಿದೇಶಿ ಆಟಗಾರರು
ಇದನ್ನೂ ಓದಿ: IPL 2021: RCB ತಂಡದ ಗೇಮ್ ಚೇಂಜರ್ ಆಗಲಿದ್ದಾರೆ ಟಿಮ್ ಡೇವಿಡ್
ಇದನ್ನೂ ಓದಿ: ಗೂಗಲ್ ಬಿಗ್ ಆಫರ್: ಸ್ಮಾರ್ಟ್ಫೋನ್ ಜೊತೆ ಕೇವಲ 1 ರೂ.ಗೆ ಸ್ಮಾರ್ಟ್ ಸ್ಪೀಕರ್
(Taliban bans IPL 2021, no place for ‘anti-Islamic’ content)