ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ 4ನೇ ಟೆಸ್ಟ್ ಪಂದ್ಯ ಇದೇ ಡಿಸೆಂಬರ್ 26 ರಿಂದ ಪ್ರತಿಷ್ಠಿತ ಮೆಲ್ಬೋರ್ನ್ ಮೈದಾನದಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಉಭಯ ತಂಡಗಳು ಸಾಕಷ್ಟು ಬೆವರು ಹರಿಸುತ್ತಿವೆ. ಏಕೆಂದರೆ ಈ ಪಂದ್ಯದ ಗೆಲುವು ಎರಡೂ ತಂಡಗಳಿಗೂ ಅವಶ್ಯಕವಾಗಿದ್ದು, ಗೆದ್ದ ತಂಡ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳುವುದಲ್ಲದೆ ಡಬ್ಲ್ಯುಟಿಸಿ ಫೈನಲ್ ರೇಸ್ಗೆ ಇನ್ನಷ್ಟು ಹತ್ತಿರವಾಗಲಿದೆ. ಆದರೆ ಈ ನಡುವೆ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಮಾಡಿರುವ ಬಿಸಿಸಿಐ, ಗಾಬಾ ಟೆಸ್ಟ್ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅವರ ಸ್ಥಾನಕ್ಕೆ ಯುವ ಸ್ಪಿನ್ನರ್ನನ್ನು ಆಯ್ಕೆ ಮಾಡಿದ್ದು, ಆತನನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಿಕೊಡಲಿದೆ.
ಹೌದು ಮುಂಬೈ ಆಫ್ ಸ್ಪಿನ್ನರ್ ತನುಷ್ ಕೋಟ್ಯಾನ್ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆರ್ ಅಶ್ವಿನ್ ನಿವೃತ್ತಿಯ ನಂತರ ಬಿಸಿಸಿಐ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈಗ ಅವರ ಸ್ಥಾನದಲ್ಲಿ ತನುಷ್ ಕೋಟ್ಯಾನ್‌ಗೆ ಅವಕಾಶ ನೀಡಲಾಗಿದೆ. ವರದಿಗಳ ಪ್ರಕಾರ, ಈ ಆಟಗಾರ ಮಂಗಳವಾರ ಮೆಲ್ಬೋರ್ನ್‌ಗೆ ಹಾರಲಿದ್ದಾರೆ. ತನುಷ್ ಕೋಟ್ಯಾನ್ ಕೂಡ ಅಶ್ವಿನ್ ಅವರಂತೆ ಆಫ್ ಸ್ಪಿನ್ನರ್ ಆಗಿದ್ದು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ನಲ್ಲೂ ತಂಡಕ್ಕೆ ಸಹಾಯ ಮಾಡಲಿದ್ದಾರೆ. ಇತ್ತೀಚೆಗೆ ಈ ಆಟಗಾರ ಆಸ್ಟ್ರೇಲಿಯಾ ಎ ವಿರುದ್ಧದ ಅನಧಿಕೃತ ಟೆಸ್ಟ್ ಸರಣಿಯಲ್ಲೂ ಆಡುವ ಅವಕಾಶ ಪಡೆದಿದ್ದರು.
26 ವರ್ಷದ ತನುಷ್ ಕೋಟ್ಯಾನ್ ಇದುವರೆಗೆ 33 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು 101 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇದಲ್ಲದೆ ಕೋಟ್ಯಾನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1525 ರನ್ ಗಳಿಸಿದ್ದು ಇದರಲ್ಲಿ 2 ಶತಕ ಮತ್ತು 13 ಅರ್ಧ ಶತಕಗಳು ಸೇರಿವೆ. ಕೋಟ್ಯಾನ್ ಕಳೆದ ಐಪಿಎಲ್ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು..
ಇದೀಗ ಅಶ್ವಿನ್ ಬದಲಿಗೆ ಟೀಂ ಇಂಡಿಯಾವನ್ನು ಸೇರಲ್ಲಿರುವ ತನುಷ್ ಕೋಟ್ಯಾನ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗುವುದೇ ಎಂಬುದು ಪ್ರಶ್ನೆಯಾಗಿದೆ. ಏಕೆಂದರೆ ತನುಷ್ ಬುಧವಾರ ಅಥವಾ ಗುರುವಾರ ಆಸ್ಟ್ರೇಲಿಯಾ ತಲುಪಲಿದ್ದು, ಮೆಲ್ಬೋರ್ನ್‌ನಲ್ಲಿ ನಾಲ್ಕನೇ ಟೆಸ್ಟ್ ಡಿಸೆಂಬರ್ 26 ರಿಂದ ನಡೆಯಲಿರುವ ಕಾರಣ ಇದರ ಸಾಧ್ಯತೆ ಕಡಿಮೆಯಾಗಿದೆ. ಆದರೆ, ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಟೆಸ್ಟ್‌ನಲ್ಲಿ ಅವರಿಗೆ ಆಡುವ ಅವಕಾಶ ಸಿಗಬಹುದು. ಆದಾಗ್ಯೂ ತಂಡದಲ್ಲಿ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಇರುವ ಕಾರಣ ತನುಷ್‌ಗೆ ಅವಕಾಶ ಸಿಗುವುದು ಕಷ್ಟ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ