ಎರಡೂವರೆ ವರ್ಷಗಳಲ್ಲಿ ಟೀಮ್ ಇಂಡಿಯಾ ಮುಂದಿದೆ 3 ವಿಶ್ವಕಪ್
Virat Kohli - Rohit Sharma: ಟೀಮ್ ಇಂಡಿಯಾ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ಖಚಿತಪಡಿಸಿದ್ದಾರೆ. ಹೀಗಾಗಿ ಈ ಇಬ್ಬರು ದಿಗ್ಗಜರು ಸೌತ್ ಆಫ್ರಿಕಾ, ನಮೀಬಿಯಾ ಹಾಗೂ ಝಿಂಬಾಬ್ವೆ ಜಂಟಿಯಾಗಿ ಆಯೋಜಿಸುವ 2027ರ ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

11 ವರ್ಷಗಳಲ್ಲಿ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲದ ಟೀಮ್ ಇಂಡಿಯಾ ಇದೀಗ 9 ತಿಂಗಳಲ್ಲಿ 2 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಈ ಎರಡು ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಟೀಮ್ ಇಂಡಿಯಾ ಮುಂದಿರುವುದು ಟಿ20 ವಿಶ್ವಕಪ್. ಈ ವಿಶ್ವಕಪ್ ಬೆನ್ನಲ್ಲೇ ಭಾರತ ತಂಡ ಏಕದಿನ ವಿಶ್ವಕಪ್ ಟೂರ್ನಿ ಕೂಡ ಆಡಲಿದೆ. ಇದರ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಸ್ ಫೈನಲ್ ಆಡುವ ಅವಕಾಶ ಕೂಡ ದೊರೆಯಲಿದೆ. ಅಂದರೆ ಮುಂದಿನ ಎರಡೂವರೆಗೆ ವರ್ಷಗಳಲ್ಲಿ ಮೂರು ವಿಶ್ವಕಪ್ ಗೆಲ್ಲುವ ಅವಕಾಶ ಟೀಮ್ ಇಂಡಿಯಾ ಮುಂದಿದೆ.
ಟಿ20 ವಿಶ್ವಕಪ್:
2026ರ ಟಿ20 ವಿಶ್ವಕಪ್ ಫೆಬ್ರವರಿ ಮತ್ತು ಮಾರ್ಚ್ನಲ್ಲಿ ನಡೆಯಲಿದೆ. ಮುಂದಿನ ವರ್ಷ ನಡೆಯಲಿರುವ ಈ ಟೂರ್ನಿಗೆ ಭಾರತ ಮತ್ತು ಶ್ರೀಲಂಕಾ ಆತಿಥ್ಯವಹಿಸಲಿದೆ.
ಏಕದಿನ ವಿಶ್ವಕಪ್:
2027 ರಲ್ಲಿ ವಿಶ್ವಕಪ್ ಜರುಗಲಿದೆ. ಅಕ್ಟೋಬರ್ – ನವೆಂಬರ್ ನಡುವೆ ಜರುಗಲಿರುವ ಈ ಟೂರ್ನಿಯನ್ನು ಸೌತ್ ಆಫ್ರಿಕಾ, ನಮೀಬಿಯಾ ಹಾಗೂ ಝಿಂಬಾಬ್ವೆ ಜಂಟಿಯಾಗಿ ಆಯೋಜಿಸಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್:
2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ಜೂನ್ ತಿಂಗಳಲ್ಲಿ ನಡೆಯಲಿದೆ. ಈ ಸರಣಿಯ ಫೈನಲ್ ಪಂದ್ಯಕ್ಕೆ ಇಂಗ್ಲೆಂಡ್ನ ಲಾರ್ಡ್ಸ್ ಮೈದಾನ ಆತಿಥ್ಯವಹಿಸಲಿದೆ.
ವಿರಾಟ್ ಕೊಹ್ಲಿ-ರೋಹಿತ್ ಶರ್ಮಾಗೆ ಉತ್ತಮ ಅವಕಾಶ:
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈವರೆಗೆ ಏಕದಿನ ವಿಶ್ವಕಪ್ ಗೆದ್ದಿಲ್ಲ. ಇದೀಗ ಒನ್ಡೇ ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ತಿಳಿಸಿರುವ ಹಿಟ್ಮ್ಯಾನ್ 2027 ರಲ್ಲಿ ಕಣಕ್ಕಿಳಿದರೆ ಏಕದಿನ ವಿಶ್ವಕಪ್ ಕನಸನ್ನು ಈಡೇರಿಸಿಕೊಳ್ಳಬಹುದು.
ಹಾಗೆಯೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸಹ ಗೆದ್ದಿಲ್ಲ. ಈ ಇಬ್ಬರು ದಿಗ್ಗಜರು 2027 ರವರೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆದರೆ WTC ಚಾಂಪಿಯನ್ ಪಟ್ಟವನ್ನು ಸಹ ತಮ್ಮದಾಗಿಸಿಕೊಳ್ಳಬಹುದು.
ಇದನ್ನೂ ಓದಿ: ಯುಜ್ವೇಂದ್ರ ಚಹಲ್ ಲವ್ವಿ ಡವ್ವಿ: ಪತಿಯ ಫೋಟೋ ಮತ್ತೆ ಹಂಚಿಕೊಂಡ ಧನಶ್ರೀ ವರ್ಮಾ
ಆದರೆ 37 ವರ್ಷದ ರೋಹಿತ್ ಶರ್ಮಾ ಇನ್ನೆರಡು ವರ್ಷಗಳ ಕಾಲ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದೇ ಪ್ರಶ್ನೆ. ಅತ್ತ ವಿರಾಟ್ ಕೊಹ್ಲಿ ಉತ್ತಮ ಫಿಟ್ನೆಸ್ ಹೊಂದಿದ್ದು, ಹೀಗಾಗಿ 2027ರ ಏಕದಿನ ವಿಶ್ವಕಪ್ವರೆಗೆ ಮುಂದುವರೆಯುವುದನ್ನು ಎದುರು ನೋಡಬಹುದು. ಆದರೆ ರೋಹಿತ್ ಶರ್ಮಾ ಫಾರ್ಮ್ನಲ್ಲಿದ್ದರೆ ಮಾತ್ರ ಮುಂದಿನ ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.