ಚಾಂಪಿಯನ್ಸ್ ಟ್ರೋಫಿ ಮೊದಲ ಪಂದ್ಯಕ್ಕೆ ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್-11?
Champions Trophy 2025: 2025 ರ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾದ ಪ್ಲೇಯಿಂಗ್ XI ಹೇಗಿರಲಿದೆ? ನಾಯಕ ರೋಹಿತ್ ಶರ್ಮಾ ಯಾವ 11 ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡುತ್ತಾರೆ? ದುಬೈನಲ್ಲಿ ನಡೆದ ಟೀಂ ಇಂಡಿಯಾದ ಅಭ್ಯಾಸ ಸೆಷನ್ನಲ್ಲಿ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ.

ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಹಾಗೂ ದುಬೈ ಆತಿಥ್ಯವಹಿಸುತ್ತಿವೆ. ಅಂದರೆ ಟೀಂ ಇಂಡಿಯಾದ ಪಂದ್ಯಗಳು ಮಾತ್ರ ದುಬೈನಲ್ಲಿ ನಡೆಯಲ್ಲಿದ್ದು, ಉಳಿದ ಪಂದ್ಯಗಳಿಗೆ ಪಾಕಿಸ್ತಾನ ಆತಿಥ್ಯ ನೀಡಲಿದೆ. ಈ ಟೂರ್ನಿಗಾಗಿ ಈಗಾಗಲೇ 15 ಸದಸ್ಯರ ಟೀಂ ಇಂಡಿಯಾ ದುಬೈ ತಲುಪಿದ್ದು, ಫೆಬ್ರವರಿ 20 ರಿಂದ ಅಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ, ಟೀಂ ಇಂಡಿಯಾಕ್ಕೆ ಎದುರಾಳಿಯಾಗಿರುವ ಕಾರಣ ಈ ತಂಡ ಭಾರತ ತಂಡ ಆಗಮಿಸುವ ಒಂದು ದಿನ ಮೊದಲೇ ದುಬೈಗೆ ಬಂದಿಳಿದಿದೆ. ದುಬೈ ತಲುಪಿದ ಮರುದಿನದಿಂದಲೇ ಟೀಂ ಇಂಡಿಯಾ ಅಭ್ಯಾಸ ಆರಂಭಿಸಿದ್ದು, ನೆಟ್ಸ್‌ನಲ್ಲಿ ಸಾಕಷ್ಟು ಬೆವರು ಸುರಿಸುತ್ತಿದೆ. ಈ ಅಭ್ಯಾಸದ ಅವಧಿಯಲ್ಲೇ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯಕ್ಕೆ ಭಾರತ ತಂಡದ ಆಡುವ ಹನ್ನೊಂದರ ಬಳಗ ಹೇಗಿರುಬಹುದು ಎಂಬುದರ ಸುಳಿವು ಸಿಕ್ಕಿದೆ.
ದುಬೈನಲ್ಲಿ ರೋಹಿತ್ ಪಡೆಯ ಅಭ್ಯಾಸ
ದುಬೈನ ಪ್ರಸಿದ್ಧ ಕ್ರೀಡಾ ಪತ್ರಕರ್ತ ವಿಮಲ್ ಕುಮಾರ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ನೀಡಿದ ವರದಿಯ ಪ್ರಕಾರ, ನೆಟ್ಸ್‌ನಲ್ಲಿ ಅಭ್ಯಾಸ ಮಾಡಲು ಬಂದ ಮೊದಲ 6 ಭಾರತೀಯ ಆಟಗಾರರು ನಾಯಕ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ. ಬೌಲಿಂಗ್‌ನಲ್ಲಿ ಶಮಿ ಮತ್ತು ಅರ್ಷ್‌ದೀಪ್ ಒಟ್ಟಿಗೆ ಬೆವರು ಸುರಿಸಿದರೆ ಇವರಲ್ಲದೆ, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಕೂಡ ಅಭ್ಯಾಸ ಮಾಡಿದ್ದಾರೆ. ಹೀಗಾಗಿ ಈ ಹನ್ನೊಂದು ಆಟಗಾರರೇ ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿಯಬಹುದು ಎಂದು ಊಹಿಸಲಾಗಿದೆ.
ಈ ಮೂವರು ತಂಡದಿಂದ ಔಟ್
ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾದ ಖಚಿತ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬುದು ಟಾಸ್ ಬಳಿಕವೇ ಗೊತ್ತಾಗಲಿದೆ. ಆದರೆ ಟೀಂ ಇಂಡಿಯಾದ ಅಭ್ಯಾಸದ ರೀತಿ ಮತ್ತು ಅದರಲ್ಲಿ ಭಾಗವಹಿಸಿದ ಆಟಗಾರರನ್ನು ನೋಡಿದರೆ, ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ರಿಷಭ್ ಪಂತ್, ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿಲ್ಲ.
ಬಾಂಗ್ಲಾ ವಿರುದ್ಧ ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
