ವಿಶೇಷ ಮೈಲುಗಲ್ಲು ದಾಟಿದ ಸ್ಮೃತಿ ಮಂಧಾನ
WPL 2025: ವುಮೆನ್ಸ್ ಪ್ರೀಮಿಯರ್ ಲೀಗ್‌ನ 4ನೇ ಪಂದ್ಯದಲ್ಲಿ RCB ತಂಡ 8 ವಿಕೆಟ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 142 ರನ್ ಗಳ ಗುರಿಯನ್ನು ಆರ್ ಸಿ ಬಿ 16.2 ಓವರುಗಳಲ್ಲಿ ಚೇಸ್ ಮಾಡಿದೆ. ಈ ಪಂದ್ಯದ ಮೂಲಕ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ವಿಶೇಷ ದಾಖಲೆಯನ್ನು ಸಹ ಬರೆದಿದ್ದಾರೆ.
Updated on: Feb 18, 2025 | 7:29 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಹೊಸ ಮೈಲುಗಲ್ಲು ದಾಟಿದ್ದಾರೆ. ವಡೋದರಾದ ಕೋಟಂಬಿ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಸ್ಮೃತಿ ಈ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೊಡ್ರಿಗಸ್ ಬಾರಿಸಿದ 34 ರನ್ ಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 19.3 ಓವರುಗಳಲ್ಲಿ 141 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡಕ್ಕೆ ಸ್ಮೃತಿ ಮಂಧಾನ ಹಾಗೂ ಡೇನಿಯಲ್ ವ್ಯಾಟ್ ಸ್ಪೋಟಕ ಆರಂಭ ಒದಗಿಸಿದ್ದರು. ಅಲ್ಲದೆ ಮೊದಲ ವಿಕೆಟ್ 107 ರನ್ ಪೇರಿಸಿದ ಬಳಿಕ ವ್ಯಾಟ್ (42) ವಿಕೆಟ್ ಒಪ್ಪಿಸಿದರು. ಇದಾಗ್ಯೂ ಸ್ಮೃತಿ ಅಬ್ಬರ ಮುಂದುವರೆದಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದ ಸ್ಮೃತಿ ಮಂಧಾನ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 47 ಎಸೆತಗಳಲ್ಲಿ 3 ಸಿಕ್ಸ್, 10 ಫೋರ್ ಗಳೊಂದಿಗೆ 81 ರನ್ ಚಚ್ಚಿದರು.

ಈ 81 ರನ್ ಗಳೊಂದಿಗೆ ಸ್ಮೃತಿ ಮಂಧಾನ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ 500 ರನ್ ಪೂರೈಸಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಆರ್ಸಿಬಿ ತಂಡದ 2ನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಆರ್ಸಿಬಿ ಪರ 20 ಪಂದ್ಯಗಳನ್ನಾಡಿರುವ ಸ್ಮೃತಿ 3 ಅರ್ಧಶತಕಗಳೊಂದಿಗೆ ಈವರೆಗೆ 539 ರನ್ ಕಲೆಹಾಕಿದ್ದಾರೆ.

ಇನ್ನು ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಹೆಸರಿನಲ್ಲಿದೆ. ಈವರೆಗೆ 20 ಪಂದ್ಯಗಳನ್ನಾಡಿರುವ ಮೆಗ್ ಲ್ಯಾನಿಂಗ್ 6 ಅರ್ಧಶತಕಗಳೊಂದಿಗೆ ಒಟ್ಟು 708 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ. ಇನ್ನು ದ್ವಿತೀಯ ಸ್ಥಾನದಲ್ಲಿರುವುದು ಆರ್ಸಿಬಿಯ ಎಲ್ಲಿಸ್ ಪೆರ್ರಿ. 19 ಪಂದ್ಯಗಳನ್ನಾಡಿರುವ ಪೆರ್ರಿ ಈವರೆಗೆ 664 ರನ್ ಕಲೆಹಾಕಿದ್ದಾರೆ.



















