IPL 2025: ಮೊದಲ 4 ಪಂದ್ಯಗಳಲ್ಲೇ RCB ತಂಡಕ್ಕೆ ಅಗ್ನಿಪರೀಕ್ಷೆ
IPL 2025 RCB Schedule: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಸುತ್ತಿನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ನಾಲ್ಕು ಪಂದ್ಯಗಳಲ್ಲಿ ಬಲಿಷ್ಠ ಟೀಮ್ಗಳನ್ನು ಎದುರಿಸಲಿದೆ. ಅಲ್ಲದೆ ಮೊದಲ ಸುತ್ತಿನಲ್ಲಿ ಆರ್ಸಿಬಿ ತವರಿನಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡಲಿದೆ. ಹೀಗಾಗಿ ಆರ್ಸಿಬಿ ಪಾಲಿಗೆ ಆರಂಭಿಕ ಪಂದ್ಯಗಳು ಅಗ್ನಿಪರೀಕ್ಷೆ ಎನ್ನಬಹುದು.
Updated on: Feb 17, 2025 | 2:04 PM

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಡೇಟ್ ಫಿಕ್ಸ್ ಆಗಿದೆ. ಈ ಬಾರಿಯ ಟೂರ್ನಿಯು ಮಾರ್ಚ್ 22 ರಿಂದ ಶುರುವಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.

ಇದಾದ ಬಳಿಕ ಕೂಡ ಆರ್ಸಿಬಿ ಚಾಂಪಿಯನ್ ತಂಡಗಳನ್ನೇ ಎದುರಿಸಲಿದೆ. ಅಂದರೆ ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ನಾಲ್ಕು ತಂಡಗಳ ವಿರುದ್ಧ ಆರ್ಸಿಬಿ ಮೊದಲ 4 ಪಂದ್ಯಗಳನ್ನಾಡಲಿದೆ. ಈ ನಾಲ್ಕು ಟೀಮ್ಗಳು ಕೂಡ ಬಲಿಷ್ಠ ಪಡೆ ಎಂಬುದು ವಿಶೇಷ.

ಮಾರ್ಚ್ 22 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಆರ್ಸಿಬಿ ತಂಡವು 2024ರ ಚಾಂಪಿಯನ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯವಹಿಸಲಿದೆ.

ಮಾರ್ಚ್ 28 ರಂದು ಜರುಗಲಿರುವ ತನ್ನ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಪಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಏಪ್ರಿಲ್ 2 ರಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಆರ್ಸಿಬಿ ತಂಡದ ಎದುರಾಳಿ 2022ರ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್. ಈ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜರುಗಲಿದೆ.

ಏಪ್ರಿಲ್ 7 ರಂದು ನಡೆಯಲಿರುವ ತನ್ನ ನಾಲ್ಕನೇ ಮ್ಯಾಚ್ನಲ್ಲಿ ಆರ್ಸಿಬಿ ತಂಡ ಚಾಂಪಿಯನ್ಸ್ ಖ್ಯಾತಿಯ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.

ಇನ್ನು ಆರ್ಸಿಬಿ ತಂಡವು ಏಪ್ರಿಲ್ 10 ರಂದು ಡೆಲ್ಲಿ ಕ್ಯಾಪಿಟಲ್ಸ್, ಏಪ್ರಿಲ್ 13 ರಂದು ರಾಜಸ್ಥಾನ್ ರಾಯಲ್ಸ್, ಏಪ್ರಿಲ್ 18 ರಂದು ಪಂಜಾಬ್ ಕಿಂಗ್ಸ್ ತಂಡಗಳನ್ನು ಎದುರಿಸಲಿದೆ. ಅಂದರೆ ಮೊದಲ ಸುತ್ತಿನಲ್ಲಿ ಆರ್ಸಿಬಿ ತಂಡ ಬೆಂಗಳೂರಿನಲ್ಲಿ ಕೇವಲ 3 ಪಂದ್ಯಗಳನ್ನು ಮಾತ್ರ ಆಡಲಿದೆ. ಹೀಗಾಗಿಯೇ ಆರ್ಸಿಬಿ ತಂಡದ ಪಾಲಿಗೆ ಮೊದಲ ಸುತ್ತು ಕಬ್ಬಿಣದ ಕಡಲೆ ಎಂದರೆ ತಪ್ಪಾಗಲಾರದು.



















