Bhuvneshwar Kumar: ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಭುವನೇಶ್ವರ್ ಆಯ್ಕೆಯಾಗದಿರಲು ಇದುವೇ ಅಸಲಿ ಕಾರಣ

| Updated By: ಝಾಹಿರ್ ಯೂಸುಫ್

Updated on: Jul 25, 2021 | 10:57 PM

Team India: 31 ವರ್ಷದ ಭುವನೇಶ್ವರ್ ಕೊನೆಯ ಬಾರಿಗೆ 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯ ಆಡಿದ್ದರು. ಇದಾದ ಬಳಿಕ ಹಲವು ಬಾರಿ ಗಾಯಗೊಂಡಿದ್ದರಿಂದ ಕೆಲ ಸರಣಿಗಳಿಗೆ ಅಲಭ್ಯರಾಗಿದ್ದರು.

Bhuvneshwar Kumar: ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಭುವನೇಶ್ವರ್ ಆಯ್ಕೆಯಾಗದಿರಲು ಇದುವೇ ಅಸಲಿ ಕಾರಣ
Bhuvneshwar Kumar
Follow us on

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್​ಮನ್ ಪೃಥ್ವಿ ಶಾ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್​ಗೆ ಶೀಘ್ರದಲ್ಲೇ ಭಾರತ ಟೆಸ್ಟ್ ತಂಡಕ್ಕೆ ಬುಲಾವ್ ಸಿಗಲಿದೆ ಎಂದು ವರದಿಯಾಗಿತ್ತು. ಅದರ ಜೊತೆಗೆ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಸ್ಪಿನ್ ಆಲ್​ರೌಂಡರ್ ಜಯಂತ್ ಯಾದವ್​ ಕೂಡ ಟೀಮ್ ಇಂಡಿಯಾ ಟೆಸ್ಟ್​ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ಇಂಗ್ಲೆಂಡ್​ ವಿರುದ್ದದ 5 ಟೆಸ್ಟ್ ಪಂದ್ಯಗಳ ಸರಣಿಗಾಗಿ ಆಯ್ಕೆಯಾಗಿದ್ದ ಶುಭ್​ಮನ್ ಗಿಲ್, ವಾಷಿಂಗ್ಟನ್ ಸುಂದರ್ ಹಾಗೂ ಅವೇಶ್ ಖಾನ್ ಗಾಯಗೊಂಡು ಹೊರಬಿದ್ದಿದ್ದಾರೆ. ಹೀಗಾಗಿ ಇವರ ಸ್ಥಾನದಲ್ಲಿ ಈ ಮೂವರನ್ನು ಕರೆಸಿಕೊಳ್ಳಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎನ್ನಲಾಗಿದೆ.

ಇದಾಗ್ಯೂ ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿ ಹಾಗೂ ಶ್ರೀಲಂಕಾ ವಿರುದ್ದದ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ್ದ ಭುವನೇಶ್ವರ್ ಕುಮಾರ್ ಅವರನ್ನು ಟೀಮ್ ಇಂಡಿಯಾ ಯಾಕೆ ಕರೆಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಯೊಂದು ಕೇಳಿ ಬಂದಿತ್ತು. ಇಂಗ್ಲೆಂಡ್​ ಪಿಚ್​ ಸ್ವಿಂಗ್​ಗೆ ಪೂರಕವಾಗಿದ್ದರೂ ಭುವಿಗೆ ಸ್ಥಾನ ನೀಡಲಾಗುತ್ತಿಲ್ಲ ಎಂಬ ಅಪಸ್ವರಗಳು ಕೇಳಿ ಬಂದಿದ್ದವು. ಆದರೀಗ ಭುವನೇಶ್ವರ್ ಕುಮಾರ್ ಅವರನ್ನು ಟೆಸ್ಟ್​​ಗೆ ಆಯ್ಕೆ ಮಾಡದಿರುವ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ ಬಿಸಿಸಿಐ ಅಧಿಕಾರಿ.

ಟೆಸ್ಟ್‌ನಲ್ಲಿ ಆಡಲು ಬಿಸಿಸಿಐ ಭುವನೇಶ್ವರ ಅವರೊಂದಿಗೆ ಈ ಹಿಂದೆ ಚರ್ಚಿಸಿತ್ತು. ಇದೀಗ ಟಿ20 ವಿಶ್ವಕಪ್‌ ಆಡಬೇಕಿದೆ. ಅವರು ವಿಶ್ವಕಪ್‌ಗೆ ಮೊದಲು ಮೂರು-ನಾಲ್ಕು ಪ್ರಥಮ ದರ್ಜೆ ಪಂದ್ಯಗಳನ್ನು ಆಡಬೇಕಾಗಿದೆ. ಏಕೆಂದರೆ ಕಳೆದ ಮೂರು ವರ್ಷಗಳಿಂದ ಅವರ ಹೆಚ್ಚು ಟೆಸ್ಟ್ ಪಂದ್ಯವನ್ನಾಡಿಲ್ಲ. ಇದ್ದಕ್ಕಿದ್ದಂತೆ ಅವರು ಟೆಸ್ಟ್ ಕ್ರಿಕೆಟ್ ಆಡಲು ಪ್ರಾರಂಭಿಸಿದರೆ ಗಾಯಗೊಳ್ಳುವ ಸಾಧ್ಯತೆಯಿದೆ. ಈ ಕಾರಣದಿಂದ ಅವರನ್ನು ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಪರಿಗಣಿಸಲಾಗುತ್ತಿಲ್ಲ ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

31 ವರ್ಷದ ಭುವನೇಶ್ವರ್ ಕೊನೆಯ ಬಾರಿಗೆ 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯ ಆಡಿದ್ದರು. ಇದಾದ ಬಳಿಕ ಹಲವು ಬಾರಿ ಗಾಯಗೊಂಡಿದ್ದರಿಂದ ಕೆಲ ಸರಣಿಗಳಿಗೆ ಅಲಭ್ಯರಾಗಿದ್ದರು. ಇದೀಗ ಅಕ್ಟೋಬರ್​ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಅದಕ್ಕೂ ಮುನ್ನ ಟೆಸ್ಟ್ ತಂಡದಲ್ಲಿ ಆಯ್ಕೆ ಮಾಡಿದರೆ ಭುವಿ ಗಾಯಗೊಳ್ಳುವ ಭೀತಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​ಗೆ ಇದೆ. ಇದೇ ಕಾರಣದಿಂದ ಅವರನ್ನು ಇಂಗ್ಲೆಂಡ್ ವಿರುದ್ದದ ಟೆಸ್ಟ್​​ ತಂಡದಿಂದ ಹೊರಗಿಟ್ಟು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವ ಇರಾದೆಯಲ್ಲಿದೆ ಬಿಸಿಸಿಐ ಸೆಲೆಕ್ಷನ್ ಕಮಿಟಿ.

 

ಇದನ್ನೂ ಓದಿ: IPL 2021 Schedule: ಐಪಿಎಲ್ ವೇಳಾಪಟ್ಟಿ ಪ್ರಕಟ: ಸೆಪ್ಟೆಂಬರ್ 19 ರಿಂದ ಚುಟುಕು ಕ್ರಿಕೆಟ್ ಕದನ ಶುರು

ಇದನ್ನೂ ಓದಿ: IPL 2021: ಐಪಿಎಲ್​ ಆರಂಭಕ್ಕೂ ಮುನ್ನವೇ CSK ತಂಡದ ಬಿಗ್​ ಪ್ಲ್ಯಾನ್..!

 

(Team India Bowler Bhuvneshwar Kumar’s Test career to be taken after T20 World Cup 2021)

Published On - 10:41 pm, Sun, 25 July 21